ಶಿವಣ್ಣನ ಸಾವು ಬಯಸಿದವನಿಗೆ ಕೇಡುಗಾಲ, ಮನು ಬಗ್ಗೆ ಜಗ್ಗೇಶ್ ಟ್ವೀಟ್
Jaggesh tweet: ನಟ ಜಗ್ಗೇಶ್, ಮಡೆನೂರು ಮನು ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲೂ ಮಡೆನೂರು ಮನವಿನದ್ದು ಎನ್ನಲಾದ ಆಡಿಯೋ ವೈರಲ್ ಆಗಿ ಆಡಿಯೋನಲ್ಲಿ ಮನು ಶಿವರಾಜ್ ಕುಮಾರ್ ಬಗ್ಗೆ ಆಡಿರುವ ಮಾತುಗಳ ಬಗ್ಗೆ ಜಗ್ಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ಜಗ್ಗೇಶ್ ಮಾಡಿರುವ ಟ್ವೀಟ್ಗಳು...

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು (Madenuru Manu) ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಇಂದು ನ್ಯಾಯಾಲಯವು ಮನುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮಾತ್ರವಲ್ಲದೆ ಶಿವರಾಜ್ ಕುಮಾರ್ ಅಭಿಮಾನಿಗಳು ಮಡೆನೂರು ಮನು ವಿರುದ್ಧ ಫಿಲಂ ಚೇಂಬರ್ಗೆ ದೂರು ದಾಖಲಿಸಿದ್ದು, ಮನು ಅನ್ನು ಚಿತ್ರರಂಗದಿಂದ ನಿಷೇಧಿಸುವಂತೆ ಒತ್ತಾಯ ಮಾಡಿದ್ದಾರೆ. ಹಿಂದೆ, ಮನುವಿನ ಪ್ರತಿಭೆ ಕಂಡು ಭೇಷ್ ಎಂದಿದ್ದ ಜಗ್ಗೇಶ್ ಅವರೇ ಈಗ ಮನುವನ್ನು ತೆಗಳಿ ಟ್ವೀಟ್ ಮಾಡಿದ್ದಾರೆ.
ಮಡೆನೂರು ಮನುವಿನದ್ದು ಎನ್ನಲಾದ ಆಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಆಡಿಯೋನಲ್ಲಿ ಶಿವರಾಜ್ ಕುಮಾರ್, ನಟ ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ಅವಾಚ್ಯವಾಗಿ ಮಡೆನೂರು ಮನು ಮಾತನಾಡಿದ್ದ. ಶಿವರಾಜ್ ಕುಮಾರ್ ಇನ್ನು ನಾಲ್ಕು ವರ್ಷ ಬದುಕಿದರೆ ಹೆಚ್ಚು, ಸತ್ತು ಹೋಗುತ್ತಾನೆ. ದರ್ಶನ್ ಈಗಾಗಲೇ ಸತ್ತು ಹೋಗಿದ್ದಾನೆ, ನಾಲ್ಕು ವರ್ಷ ಅವನ ಕ್ರೇಜ್ ಇರುತ್ತೆ ಅಷ್ಟೆ, ಧ್ರುವ ಸರ್ಜಾ ಕ್ರೇಜ್ ಸಹ ಇನ್ನು ಕೆಲವೇ ವರ್ಷ ಇರುತ್ತದೆ. ಈ ಮೂವರ ನಡುವೆ ಕಾಂಪಿಟೇಶನ್ ಕೊಡೋಕೆ ನಿಂತಿರುವ ಗಂಡು ಗಲಿ ಕಣ್ರಿ ನಾನು’ ಎಂದಿದ್ದ.
ಶಿವರಾಜಕುಮಾರ ಚಿತ್ರರಂಗದ ಕಿರೀಟ ಇದ್ದಂತೆ.. ಎಲ್ಲರನ್ನು ಪ್ರೀತಿಸುವ ಜೀವ ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ.. ನೊಂದುಕೊಳ್ಳದಿರಿ ಶಿವಣ್ಣ ನೀವು ಹಿಮಾಲಯ, ನಿಮಗೆ ಧೀರ್ಘಾಯುಷ್ಯ ಪ್ರಾಪ್ತಿ ಇದೆ ನಿಮ್ಮ ಹೆತ್ತವರು ಕನ್ನಡಿಗರ ಆಶೀರ್ವಾದ ಇದೆ! We love you🥰
— ನವರಸನಾಯಕ ಜಗ್ಗೇಶ್ (@Jaggesh2) May 25, 2025
ಈ ವಿಷಯವಾಗಿಯೇ ಟ್ವೀಟ್ ಮಾಡಿರುವ ನಟ ಜಗ್ಗೇಶ್, ‘ಒಂದು ಗಾದೆ ಮಾತು ನೆನಪಾಯಿತು, “ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ, ಗುರುಹಿರಿಯರ ಮೇಲೆ ಗೌರವ ತೋರದವನು ಗೆದ್ದ ಇತಿಹಾಸ ಇಲ್ಲ, ಇಂದು ಇದ್ದದ್ದು ನಾಳೆ ಇರದು ಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೆ, ಆಯುಷ್ಯ ಬರೆಯೋದು ಬ್ರಹ್ಮ, ಚಿಲ್ಲರೆ ಮನುಷ್ಯರಲ್ಲಾ, ಇಂದಿನ ಚಿತ್ರರಂಗದ ಅಸಹ್ಯ ಕಂಡು ದುಃಖವಾಯಿತು’ ಎಂದಿದ್ದಾರೆ.
ಇದನ್ನೂ ಓದಿ:ಶ್ರೀರಾಮಪುರ ಕರಗ ಆಚರಣೆಯಲ್ಲಿ ಭಾಗಿಯಾದ ಜಗ್ಗೇಶ್
ಮತ್ತೊಂದು ಟ್ವೀಟ್ನಲ್ಲಿ, ‘ಶಿವರಾಜಕುಮಾರ ಚಿತ್ರರಂಗದ ಕಿರೀಟ ಇದ್ದಂತೆ. ಎಲ್ಲರನ್ನು ಪ್ರೀತಿಸುವ ಜೀವ ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ. ನೊಂದುಕೊಳ್ಳದಿರಿ ಶಿವಣ್ಣ ನೀವು ಹಿಮಾಲಯ, ನಿಮಗೆ ಧೀರ್ಘಾಯುಷ್ಯ ಪ್ರಾಪ್ತಿ ಇದೆ, ನಿಮ್ಮ ಹೆತ್ತವರು ಕನ್ನಡಿಗರ ಆಶೀರ್ವಾದ ಇದೆ, ವಿ ಲವ್ ಯು’ ಎಂದಿದ್ದಾರೆ.
ಮಡೆನೂರು ಮನು ಈ ಮೊದಲು ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಸ್ಪರ್ಧಿ ಆಗಿದ್ದರು. ಜಗ್ಗೇಶ್ ಜಡ್ಜ್ ಆಗಿದ್ದ ಶೋನಲ್ಲಿ, ಮನು ಅವರ ಪ್ರತಿಭೆಯನ್ನು ಕೆಲ ಬಾರಿ ಜಗ್ಗೇಶ್ ಹೊಗಳಿದ್ದರು. ಆದರೆ ಈಗ ಅದೇ ಮನು ವಿರುದ್ಧ ಅತ್ಯಾಚಾರ ಅಂತಹಾ ಗಂಭೀರ ಆರೋಪದ ಜೊತೆಗೆ ಚಿತ್ರರಂಗದ ಹಿರಿಯರ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಆರೋಪಗಳಿವೆ. ಮನುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Mon, 26 May 25




