ಪವನ್ ಕಲ್ಯಾಣ್ ಎಚ್ಚರಿಕೆಗೆ ಬೆದರಿದ ಅಲ್ಲು ಅರವಿಂದ್, ತುರ್ತು ಸುದ್ದಿಗೋಷ್ಠಿ
Allu Arvind-Pawan Kalyan: ಪವನ್ ಕಲ್ಯಾಣ್, ತೆಲುಗು ಚಿತ್ರರಂಗದವರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ‘ನೀವು ನೀಡಿರುವ ರಿಟರ್ನ್ ಗಿಫ್ಟ್ಗೆ ಧನ್ಯವಾದ’ ಎಂದು ವ್ಯಂಗ್ಯ ಮಾಡಿದ್ದಾರೆ. ಪವನ್ ಕಲ್ಯಾಣ್ ವಿರುದ್ಧ ಕೆಲವರು ಪಿತೂರಿ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅದರ ಬೆನ್ನಲ್ಲೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ತುರ್ತು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಆಂಧ್ರ ಪ್ರದೇಶ ಡಿಸಿಎಂ, ತೆಲುಗು ಚಿತ್ರರಂಗದ ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan) ಬಿಡುಗಡೆ ಮಾಡಿರುವ ಬಹಿರಂಗ ಪತ್ರವೊಂದು ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಚಿತ್ರರಂಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪವನ್ ಕಲ್ಯಾಣ್, ತನಗೆ ನೀಡಿರುವ ‘ರಿಟರ್ನ್ ಗಿಫ್ಟ್’ಗೆ ಧನ್ಯವಾದ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಇದರ ಜೊತೆಗೆ ಚಂದ್ರಬಾಬು ನಾಯ್ಡು ಅವರನ್ನು ಚಿತ್ರರಂಗದ ಗಣ್ಯರು ಯಾರೂ ಅಭಿನಂದಿಸದೇ ಇರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪವನ್ ಕಲ್ಯಾಣ್ ಅವರ ಈ ಪತ್ರ ವೈರಲ್ ಆಗುತ್ತಿದ್ದಂತೆ ಇದೀಗ ತೆಲುಗು ಚಿತ್ರರಂಗದ ನಿರ್ಮಾಪಕ, ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ತುರ್ತು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.
ಪವನ್ ಕಲ್ಯಾಣ್ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಸರಿಯಾಗಿ ಚಿತ್ರಮಂದಿರಗಳು ಪ್ರತಿಭಟನೆ ಘೋಷಣೆ ಮಾಡಿದ್ದವು. ಪ್ರತಿಭಟನೆ ಈಗ ಹಿಂಪಡೆಯಲಾಗಿದೆಯಾದರೂ, ಪವನ್ ಕಲ್ಯಾಣ್ಗೆ ಟಾಂಗ್ ನೀಡಲೆಂದೇ ಚಿತ್ರಮಂದಿರದ ಕೆಲವರು ಈ ಪ್ರತಿಭಟನೆ ಘೋಷಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲು ಅರವಿಂದ್ ಹಾಗೂ ಇನ್ನೂ ಕೆಲವರು ಈ ಪಿತೂರಿಯ ಭಾಗವಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಹಾಗಾಗಿಯೇ ಪವನ್ ಕಲ್ಯಾಣ್ ಅವರ ಪತ್ರ ವೈರಲ್ ಆಗುತ್ತಿದ್ದಂತೆ ನಿರ್ಮಾಪಕ ಅಲ್ಲು ಅರವಿಂದ್ ಅವರು ತುರ್ತು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಾಲ್ವರು ಪ್ರಮುಖ ನಿರ್ಮಾಪಕರು (ಆ ನಲುಗುರು) ಈ ಪ್ರತಿಭಟನೆಯ ಹಿಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ‘ಆ ನಲುಗುರು’ ಗುಂಪಿನಲ್ಲಿ ನಾನೂ ಒಬ್ಬವ ಎನ್ನಲಾಗುತ್ತಿದೆಯಾದರೂ ಅಸಲಿಗೆ ಆ ಗುಂಪಿನಲ್ಲಿ ನಾನು ಇಲ್ಲ. ನಾನು ಆ ನಾಲ್ವರ ಗುಂಪಿಗೆ ಸೇರಿದವನಲ್ಲ. ನನ್ನ ಮಾಲೀಕತ್ವದಲ್ಲಿ ಯಾವುದೇ ಚಿತ್ರಮಂದಿರಗಳು ಇಲ್ಲ. ಅಲ್ಲು ಅರ್ಜುನ್ ನಿರ್ಮಿಸಿರುವ ‘ಎಎಎ’ ಮಲ್ಟಿಪ್ಲೆಕ್ಸ್ನಲ್ಲಿ ಸಣ್ಣ ಪಾಲುದಾರಿಗೆ ಇದೆ. 15 ಚಿತ್ರಮಂದಿರಗಳನ್ನು ಲೀಸ್ ಆಧಾರದಲ್ಲಿ ನಡೆಸುತ್ತಿದ್ದೇನೆ. ಅವುಗಳ ಲೀಸ್ ಅನ್ನು ನಾನು ಮುಂದುವರೆಸುವ ಆಲೋಚನೆ ಇರಿಸಿಕೊಂಡಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ತೆಲುಗು ಚಿತ್ರರಂಗಕ್ಕೆ ಎಚ್ಚರಿಕೆ ಕೊಟ್ಟ ನಟ ಪವನ್ ಕಲ್ಯಾಣ್, ಕಾರಣವೇನು?
‘ಪವನ್ ಕಲ್ಯಾಣ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಬೆನ್ನಲ್ಲೆ ಚಿತ್ರಮಂದಿರಗಳ ಬಂದ್ ಘೋಷಣೆ ಮಾಡಿದ್ದು ಕೆಟ್ಟ ನಡೆ ಎಂದಿರುವ ಅಲ್ಲು ಅರವಿಂದ್, ಎಲ್ಲ ದಾರಿಗಳು ಮುಚ್ಚಿ ಹೋದಾಗ ಮಾತ್ರ ಬಂದ್ ಘೋಷಣೆ ಮಾಡಬೇಕಿತ್ತು. ಅಲ್ಲದೆ ಈ ಘೋಷಣೆಯ ಹಿಂದೆ ನನ್ನ ಕೈವಾಡ ಇಲ್ಲ. ಅಲ್ಲದೆ ನಾನು ಯಾವುದೇ ‘ಪವರ್ ಗ್ರೂಪ್’ಗೆ ಸೇರಿದವನಲ್ಲ. ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡದೇ ಇರುವುದು ಖಂಡಿತವಾಗಿಯೂ ತಪ್ಪು’ ಎಂದು ಸಹ ಅಲ್ಲು ಅರವಿಂದ್ ಹೇಳಿದ್ದಾರೆ.
ಅಲ್ಲು ಅರ್ಜುನ್ ಮತ್ತು ಪವನ್ ಕಲ್ಯಾಣ್ ನಡುವೆ ಕೆಲ ತಿಂಗಳುಗಳಿಂದಲೂ ವೈಮನಸ್ಯ ಚಾಲ್ತಿಯಲ್ಲಿದೆ. ಅಲ್ಲು ಅರ್ಜುನ್ ವಿರುದ್ಧ ನೇರವಾಗಿಯೇ ಪವನ್ ಕಲ್ಯಾಣ್ ಮತ್ತು ಅವರ ಸಹೋದರ ನಾಗಬಾಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಅಲ್ಲು ಅರವಿಂದ್ ಸಹ ಪವನ್ ಕಲ್ಯಾಣ್ ಎದುರು ಪಿತೂರಿ ನಡೆಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದೇ ಕಾರಣಕ್ಕೆ ಈಗ ಅಲ್ಲು ಅರವಿಂದ್ ತುರ್ತು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Sun, 25 May 25