ಬೆಂಗಳೂರಿಗೆ ಬಂದಿದ್ದ ಪವನ್ ಕಲ್ಯಾಣ್ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಕನ್ನಡಿಗರ ಹೃದಯ ಗೆಲ್ಲುವ ಮಾತುಗಳನ್ನಾಡಿದ್ದಾರೆ. ಪತ್ರಿಕಾಗೋಷ್ಠಿಯ ಆರಂಭದಲ್ಲಿ ತಮಗೆ ಕನ್ನಡ ಭಾಷೆಯ ಮೇಲಿರುವ ಗೌರವದ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳನ್ನು ಹೇಳಿ ಆಶ್ಚರ್ಯಪಡಿಸಿದರು. ಬಳಿಕ ತಾವು ಈವರೆಗೂ ಕನ್ನಡ ಕಲಿಯದೇ ಇರುವ ಬಗ್ಗೆ ಬಹಳ ಬೇಸರವನ್ನು ಸಹ ವ್ಯಕ್ತಪಡಿಸಿದರು. ಮಾತಿನ ಮಧ್ಯ ಡಾ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡ ಪವನ್ ಕಲ್ಯಾಣ್ ಅದೇ ಮಾತು ಮುಂದುವರೆಸಿ ತಮ್ಮದೇ ತೆಲುಗು ಭಾಷೆ ಸಿನಿಮಾ ‘ಪುಷ್ಪ’ ಅನ್ನು ಟೀಕೆ ಮಾಡಿದರು.
‘ನಾನು ಅರಣ್ಯ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಅರಣ್ಯದ ಬಗ್ಗೆ ನನಗೆ ಕಾಳಜಿ ಮೂಡಿಸಿದ ಅಥವಾ ನನಗೆ ಅರಣ್ಯ ಉಳಿಸುವಿಕೆಯ ಬಗ್ಗೆ ಅರಿವಾಗಿದ್ದು ಕನ್ನಡ ಕಂಠೀರವ ಡಾ ರಾಜ್ಕುಮಾರ್ ನಟನೆಯ ‘ಗಂಧದ ಗುಡಿ’ ಸಿನಿಮಾದ ಮೂಲಕ. ‘ಗಂಧದ ಗುಡಿ’ ಸಿನಿಮಾ ಅರಣ್ಯ ರಕ್ಷಣೆ ಕುರಿತಾದ ಸಿನಿಮಾ, ಸಿನಿಮಾದಲ್ಲಿ ಅರಣ್ಯಾಧಿಕಾರಿ, ಡಿಎಫ್ಓ ಪಾತ್ರದಲ್ಲಿ ನಾಯಕ ಕಳ್ಳಸಾಗಣೆದಾರರಿಗೆ ಅರಣ್ಯವನ್ನು ರಕ್ಷಣೆ ಮಾಡುತ್ತಾರೆ. ಆದರೆ ಸಂಸ್ಕೃತಿ ಹೇಗೆ ಬದಲಾಗಿದೆ ನೋಡಿ, 40 ವರ್ಷದ ಹಿಂದೆ ಅರಣ್ಯವನ್ನು ರಕ್ಷಿಸುವವ ವ್ಯಕ್ತಿ ನಾಯಕನಾಗಿದ್ದ, ಆದರೆ ಈಗ ಕಳ್ಳಸಾಗಣೆ ಮಾಡುವವನೇ ನಾಯಕ’ ಎಂದು ‘ಪುಷ್ಪ’ ಸಿನಿಮಾದ ಹೆಸರು ಹೇಳದೆ ವ್ಯಂಗ್ಯ ಮಾಡಿದರು ಪವನ್ ಕಲ್ಯಾಣ್.
‘ಗಂಧದ ಗುಡಿ’ ಎಂಬುದು ಅರಣ್ಯ ರಕ್ಷಣೆಯ ಮಹತ್ವ ಸಾರುತ್ತದೆ, ಆದರೆ ಈಗಿನ ಸಿನಿಮಾ ಅರಣ್ಯ ಭಕ್ಷಣೆಯ ಪಾಠ ಮಾಡುತ್ತಿದೆ. ಹೌದು, ನಾನೂ ಸಹ ಚಿತ್ರರಂಗದ ಭಾಗವೇ ಆಗಿದ್ದೇನೆ. ಎಷ್ಟೋ ಬಾರಿ ಅಂಥಹಾ ಸಿನಿಮಾಗಳನ್ನು ಮಾಡಲು ನಾನು ಹಿಂಜರಿಯುತ್ತೇನೆ. ನಾನು ಸರಿಯಾದ ಸಂದೇಶವನ್ನು ಕೊಡುತ್ತಿದ್ದೀನ ಎಂಬ ಭಯ ನನ್ನಲ್ಲಿ ಕಾಡುತ್ತದೆ. ಸಿನಿಮಾ ಬೇರೆ, ಆದರೆ ಆ ಸಾಂಸ್ಕೃತಿಕ ಪಲ್ಲಟ, ಸಾಮಾಜಿಕ ಪಲ್ಲಟ ಅಧ್ಯಯನ ಯೋಗ್ಯ ವಿಷಯ’ ಎಂದಿದ್ದಾರೆ ಪವನ್ ಕಲ್ಯಾಣ್.
ಇದನ್ನೂ ಓದಿ:Pawan Kalyan: ಬೆಂಗಳೂರಿಗೆ ಬಂದು ಕುವೆಂಪು ಪದ್ಯ ಹೇಳಿದ ಪವನ್ ಕಲ್ಯಾಣ್
‘ಪುಷ್ಪ’ ಸಿನಿಮಾನಲ್ಲಿ ಅಲ್ಲು ಅರ್ಜುನ್, ರಕ್ತ ಚಂದನ ಕಳ್ಳಸಾಗಣೆ ಮಾಡುವವನ ಪಾತ್ರದಲ್ಲಿ ನಟಿಸಿದ್ದಾನೆ. ಅರಣ್ಯವನ್ನು ದೋಚುವುದೇ ಆತನ ಕೆಲಸ. ಆದರೆ ಆ ಸಿನಿಮಾದಲ್ಲಿ ರಕ್ತ ಚಂದನ ಕಳ್ಳಸಾಗಣೆದಾರನೆ ನಾಯಕ. ಇದೇ ವಿಷಯವನ್ನು ಪವನ್ ಕಲ್ಯಾಣ್ ‘ಪುಷ್ಪ’ ಸಿನಿಮಾದ ಅಥವಾ ಅಲ್ಲು ಅರ್ಜುನ್ ಹೆಸರು ಹೇಳದೆ ಟೀಕೆ ಮಾಡಿದ್ದಾರೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಪವನ್ ಕಲ್ಯಾಣ್ ಈ ಬಾರಿ ವಿಧಾನಸಭೆ ಚುನಾವಣೆಗೆ ನಿಂತಿದ್ದರು. ಆದರೆ ಅಲ್ಲು ಅರ್ಜುನ್ ಅವರ ಎದುರಾಳಿ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಪವನ್ ಕಲ್ಯಾಣ್ ಸಹೋದರ ನಾಗಬಾಬು, ಟ್ವೀಟ್ ಮೂಲಕ ಅಲ್ಲು ಅರ್ಜುನ್ ಅನ್ನು ‘ಒಳಗಿನವನಾದರೂ ಹೊರಗಿನವನು’ ಎಂಬರ್ಥದ ಸಾಲುಗಳನ್ನು ಬರೆದಿದ್ದರು. ಈಗ ಪವನ್ ಕಲ್ಯಾಣ್ ಬಹಿರಂಗವಾಗಿ ಅಲ್ಲು ಅರ್ಜುನ್ರ ಸಿನಿಮಾವನ್ನು ಟೀಕಿಸಿರುವುದು, ಮೆಗಾ ಫ್ಯಾಮಿಲಿಯವರಿಗೆ ಅಲ್ಲು ಅರ್ಜುನ್ ಮೇಲೆ ಇರುವ ಮುನಿಸು ಆರಿಲ್ಲವೆಂಬುದು ತಿಳಿಯುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ