ಜ್ಯೋತಿ ರೈಗೆ ‘ಬಿಗ್ ಬಾಸ್ ಕನ್ನಡ 11’ ಆಫರ್; ನೇರವಾಗಿ ನಿರ್ಧಾರ ತಿಳಿಸಿದ ನಟಿ
ಒಂದಲ್ಲಾ ಒಂದು ಕಾರಣದಿಂದ ನಟಿ ಜ್ಯೋತಿ ರೈ ಅವರು ಸುದ್ದಿ ಆಗುತ್ತಿದ್ದಾರೆ. ಸೀರಿಯಲ್ಗಳಲ್ಲಿ ಮಿಂಚಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜ್ಯೋತಿ ರೈ ಅವರಿಗೆ ಆಫರ್ ನೀಡಲಾಗಿದೆ. ಈ ಕುರಿತು ತಮ್ಮ ನಿರ್ಧಾರ ಏನೆಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
ರಿಯಲ್ ಲೈಫ್ನಲ್ಲಿ ಏನಾದರೂ ವಿವಾದ ಮಾಡಿಕೊಂಡವರಿಗೆ ಬಿಗ್ ಬಾಸ್ ಶೋನಲ್ಲಿ ಆಫರ್ ಸುಲಭವಾಗಿ ಸಿಗುತ್ತದೆ. ಈ ವರ್ಷ ಹೊಸ ಸೀಸನ್ಗೆ ಸಿದ್ಧತೆ ನಡೆಯುತ್ತಿದೆ. ಈವರೆಗೂ ಕನ್ನಡದಲ್ಲಿ 10 ಸೀಸನ್ಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. 11ನೇ ಸೀಸನ್ನಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಕೌತುಕ ಮನೆ ಮಾಡಿದೆ. ಖ್ಯಾತ ನಟಿ ಜ್ಯೋತಿ ರೈ ಅವರಿಗೆ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದ ಆಫರ್ ನೀಡಲಾಗಿದೆ. ಆದರೆ ಅವರು ಈ ಅವಕಾಶವನ್ನು ಒಪ್ಪಿಕೊಂಡಿಲ್ಲ! ಹೌದು, ಈ ವಿಚಾರವನ್ನು ಸ್ವತಃ ಜ್ಯೋತಿ ರೈ ಅವರು ಹಂಚಿಕೊಂಡಿದ್ದಾರೆ.
ಕಿರುತೆರೆಯ ಸೀರಿಯಲ್ಗಳನ್ನು ನಟಿಸಿ ಜ್ಯೋತಿ ರೈ ಅವರು ಸಖತ್ ಫೇಮಸ್ ಆಗಿದ್ದಾರೆ. ಈ ಮೊದಲಿನ ಬಿಗ್ ಬಾಸ್ ಸೀಸನ್ಗಳಲ್ಲಿ ಕಿರುತೆರೆಯ ಅನೇಕ ಸೆಲೆಬ್ರಿಟಿಗಳಿಗೆ ಅವಕಾಶ ಸಿಕ್ಕಿತ್ತು. ಈ ಬಾರಿಗೂ ಸಿನಿಮಾ, ಸೀರಿಯಲ್, ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಇರುವವರಿಗೆ ಮಣೆ ಹಾಕಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಜ್ಯೋತಿ ರೈ ಅವರಿಗೂ ಆಫರ್ ನೀಡಲಾಗಿತ್ತು ಎಂಬ ಮಾಹಿತಿ ಈಗ ಬಹಿರಂಗ ಆಗಿದೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ ಜ್ಯೋತಿ ರೈ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾನು ಕನ್ನಡ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಅನೇಕರು ವಿಚಾರಿಸುತ್ತಿದ್ದಾರೆ. ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಾಗ ನಾನು ಅದನ್ನು ಗೌರವದಿಂದ ತಿರಸ್ಕರಿಸಿದೆ. ಈ ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣಗಳಿಂದ ಈ ನಿರ್ಧಾರ ತೆಗೆದುಕೊಂಡೆ. ಅವಕಾಶಕ್ಕಾಗಿ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಚಿರಋಣಿ’ ಎಂದು ಜ್ಯೋತಿ ರೈ ಅವರು ಬರೆದುಕೊಂಡಿದ್ದಾರೆ.
ಒಂದಷ್ಟು ದಿನಗಳ ಹಿಂದೆ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ವಿಡಿಯೋಗಳು ವೈರಲ್ ಆಗಿದ್ದವು. ಆದರೆ ಅವು ತಮ್ಮ ವಿಡಿಯೋ ಅಲ್ಲ ಎಂದು ಜ್ಯೋತಿ ಅವರು ಸ್ಪಷ್ಟನೆ ನೀಡಿದರು ಹಾಗೂ ಮಾನಹಾನಿಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜ್ಯೋತಿ ರೈ ಅವರು ತುಂಬ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಬಗೆಯ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಇದನ್ನೂ ಓದಿ: ರೆಡ್ ಡ್ರೆಸ್ನಲ್ಲಿ ನಟಿ ಜ್ಯೋತಿ ರೈ ಸೌಂದರ್ಯಕ್ಕೆ ಮನಸೋತ ಅಭಿಮಾನಿಗಳು
‘ಬಿಗ್ ಬಾಸ್ ಕನ್ನಡ ಸೀಸನ್ 11’ ಯಾವಾಗ ಪ್ರಾರಂಭ ಆಗಲಿದೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ನಿರೂಪಕರ ಬದಲಾವಣೆ ಆಗುವ ಸಾಧ್ಯತೆ ಇದೆ ಎಂಬ ಮಾತು ಕೂಡ ಆಗಾಗ ಕೇಳಿಬರುತ್ತಲೇ ಇದೆ. ವಾಹಿನಿ ಕಡೆಯಿಂದಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿ ಎಂದು ವೀಕ್ಷಕರು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.