ನಟ ಪವನ್ ಕಲ್ಯಾಣ್ (Pawan Kalyan) ಅವರು ರಾಜಕೀಯ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ‘ಒಜಿ’, ‘ಹರಿ ಹರ ವೀರ ಮಲ್ಲು’, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಈ ಚಿತ್ರಗಳ ಬಗ್ಗೆ ಹೊಸ ಹೊಸ ಅಪ್ಡೇಟ್ ಕೇಳಿಬರುತ್ತಿವೆ. ಇತ್ತೀಚೆಗೆ ಪವನ್ ಕಲ್ಯಾಣ್ ಅವರು ಬರ್ತ್ಡೇ (Pawan Kalyan Birthday) ಆಚರಿಸಿಕೊಂಡರು. ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾ ತಂಡಗಳಿಂದ ಪೋಸ್ಟರ್ ಮತ್ತು ಪ್ರೋಮೋ ಬಿಡುಗಡೆ ಆಯಿತು. ಈಗ ಇನ್ನೊಂದು ಅಚ್ಚರಿಯ ವಿಚಾರ ಬಹಿರಂಗ ಆಗಿದೆ. ‘ಉಸ್ತಾದ್ ಭಗತ್ ಸಿಂಗ್’ (Ustaad Bhagat Singh) ಸಿನಿಮಾದಲ್ಲಿ ಪವನ್ ಕಲ್ಯಾಣ್ ಅವರು ಬಳಸಲಿರುವ ಆಯುಧಗಳ ವಿವರವನ್ನು ನೀಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅದರ ಫೋಟೋ ಸಖತ್ ವೈರಲ್ ಆಗಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗೆ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾಗೆ ಹರೀಶ್ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ. ಈ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಹಲವು ಬಗೆಯ ಮಾರಕಾಸ್ತ್ರಗಳಿವೆ. ಇದೆಲ್ಲವನ್ನೂ ಫೈಟಿಂಗ್ ದೃಶ್ಯದಲ್ಲಿ ಪವನ್ ಕಲ್ಯಾಣ್ ಬಳಕೆ ಮಾಡಲಿದ್ದಾರೆ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಆ ಮೂಲಕ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವು ಆ್ಯಕ್ಷನ್ ಪ್ರಿಯರಿಗೆ ಇಷ್ಟ ಆಗಲಿದೆ ಎಂಬ ಸುಳಿವನ್ನು ನೀಡಲಾಗಿದೆ.
All set for the MASSIVE ACTION SCHEDULE 💥💥
The shoot of #UstaadBhagatSingh resumes tomorrow 🔥🔥
@PawanKalyan @harish2you @sreeleela14 @ThisIsDSP @DoP_Bose #AnandSai @ChotaKPrasad @SonyMusicSouth pic.twitter.com/gCjSVeN0t4— Mythri Movie Makers (@MythriOfficial) September 4, 2023
ಹಲವು ಬಗೆಯ ಮಚ್ಚು, ಲಾಂಗ್, ಕೊಡಲಿಯ ಜೊತೆ ನಿಂತುಕೊಂಡು ನಿರ್ದೇಶಕ ಹರೀಶ್ ಶಂಕರ್ ಅವರು ಪೋಸ್ ನೀಡಿದ್ದಾರೆ. ‘ದೊಡ್ಡ ಆ್ಯಕ್ಷನ್ ದೃಶ್ಯದ ಚಿತ್ರೀಕರಣಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಉಸ್ತಾದ್ ಭಗತ್ ಸಿಂಗ್ ಸಿನಿಮಾಗೆ ಶೂಟಿಂಗ್ ಪುನಃ ಆರಂಭ ಆಗಲಿದೆ’ ಎಂಬ ಕ್ಯಾಪ್ಷನ್ ಜೊತೆಗೆ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಪವನ್ ಕಲ್ಯಾಣ್ ಅವರ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಜತೆಗಿನ ಮೊದಲ ಶಾಟ್ ನೆನೆದು ಖುಷಿಪಟ್ಟ ನಿಧಿ ಅಗರ್ವಾಲ್
ಸಾಮಾನ್ಯವಾಗಿ ಚಿತ್ರತಂಡದವರು ಇಂತಹ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ. ಶೂಟಿಂಗ್ ಮುಗಿಯುವ ತನಕ ಎಷ್ಟು ಸಾಧ್ಯವೋ ಅಷ್ಟು ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ಆದರೆ ಪವನ್ ಕಲ್ಯಾಣ್ ಬಳಸುವ ಆಯುಧಗಳ ಬಗ್ಗೆ ‘ಉಸ್ತಾದ್ ಭಗತ್ ಸಿಂಗ್’ ಚಿತ್ರತಂಡದಿಂದ ಮಾಹಿತಿ ಬಿಟ್ಟುಕೊಡಲಾಗಿದೆ. ಈ ಫೋಟೋ ನೋಡಿ ಅನೇಕರು ಹುಬ್ಬೇರಿಸಿದ್ದಾರೆ. ಇದರಿಂದಾಗಿ ಸಿನಿಮಾ ಮೇಲಿನ ಕ್ರೇಜ್ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.