ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ ಹವಾ; ಎರಡನೇ ದಿನವೂ ಭರ್ಜರಿ ಗಳಿಕೆ

'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಮೊದಲ ದಿನದ ಬಂಪರ್ ಗಳಿಕೆಯ ನಂತರ, ಎರಡನೇ ದಿನವೂ ಉತ್ತಮ ಕಲೆಕ್ಷನ್ ಮಾಡಿದೆ. ಕೇವಲ ಎರಡು ದಿನಗಳಲ್ಲಿ ವಿಶ್ವಾದ್ಯಂತ 150.49 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ, ಸಿನಿಮಾ ಹೊಸ ದಾಖಲೆ ಬರೆದಿದೆ. ರಾಮ್ ಚರಣ್, ಜಾನ್ವಿ ಕಪೂರ್ ಮತ್ತು ಶಿವರಾಜ್‌ಕುಮಾರ್ ಅಭಿನಯದ ಈ ಚಿತ್ರ ವೀಕೆಂಡ್‌ನಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಗಳಿಕೆ ಮಾಡುವ ನಿರೀಕ್ಷೆಯಿದೆ.

ಬಾಕ್ಸ್ ಆಫೀಸ್‌ನಲ್ಲಿ ಪೆದ್ದಿ ಹವಾ; ಎರಡನೇ ದಿನವೂ ಭರ್ಜರಿ ಗಳಿಕೆ
ಪೆದ್ದಿ ಸಿನಿಮಾ
Image Credit source: Peddi Movie

Updated on: Jun 06, 2026 | 6:56 AM

ಅಬ್ಬರದ ಪ್ರಚಾರದೊಂದಿಗೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ‘ಪೆದ್ದಿ’ ಸಿನಿಮಾ (Peddi Movie), ಈಗ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಮೊದಲ ದಿನದ ಬಂಪರ್ ಓಪನಿಂಗ್ ಬಳಿಕ, ಎರಡನೇ ದಿನವಾದ ಶುಕ್ರವಾರವೂ ಚಿತ್ರವು ಅತ್ಯುತ್ತಮ ಕಲೆಕ್ಷನ್ ಮಾಡುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಪೆದ್ದಿಯ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಬುಧವಾರ (ಜೂನ್ 3) ನಡೆದ ವಿಶೇಷ ಪ್ರೀಮಿಯರ್ ಶೋಗಳಿಂದಲೇ ‘ಪೆದ್ದಿ’ ಭರವಸೆಯ ಆರಂಭ ಪಡೆದುಕೊಂಡಿತ್ತು. ಕೇವಲ 847 ಪ್ರೀಮಿಯರ್ ಶೋಗಳಿಂದ ಶೇಕಡಾ 72 ರಷ್ಟು ಭರ್ತಿ ಪ್ರದರ್ಶನ ಕಂಡು 18.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿತ್ತು. ಇದಾದ ಬಳಿಕ ಮೊದಲ ದಿನವಾದ ಗುರುವಾರ ವಿಶ್ವಾದ್ಯಂತ ಅಬ್ಬರಿಸಿದ್ದ ಚಿತ್ರ, ಭಾರತದಲ್ಲೇ ಬರೋಬ್ಬರಿ 12,412 ಶೋಗಳಿಂದ 51.00 ಕೋಟಿ ಬಾಚಿತ್ತು.

ಸಾಮಾನ್ಯವಾಗಿ ವೀಕ್‌ಡೇಸ್‌ನಲ್ಲಿ ಕಲೆಕ್ಷನ್ ಕೊಂಚ ಕುಸಿಯುವುದು ಸಹಜ. ಆದರೆ, ‘ಪೆದ್ದಿ’ ಚಿತ್ರಕ್ಕೆ ಎರಡನೇ ದಿನವೂ ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮೊದಲ ಶುಕ್ರವಾರದಂದು ದೇಶಾದ್ಯಂತ 10,113 ಶೋಗಳನ್ನು ಪ್ರದರ್ಶನ ಕಂಡಿರುವ ಈ ಸಿನಿಮಾ, ಶೇಕಡಾ 32.8 ರಷ್ಟು ಆಕ್ಯುಪೆನ್ಸಿಯೊಂದಿಗೆ 26.90 ಕೋಟಿ ರೂಪಾಯಿನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ಭಾರತದಲ್ಲಿ ಒಟ್ಟು 96.40 ಕೋಟಿ ರೂಪಾಯಿ ನೆಟ್ ಗಳಿಕೆ ಹಾಗೂ 114.49 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಪೆದ್ದಿ ಹವಾ ಜೋರಾಗಿದೆ. ಎರಡನೇ ದಿನ ವಿದೇಶಿ ಮಾರುಕಟ್ಟೆಯಿಂದ 8.00 ಕೋಟಿ ರೂಪಾಯಿ ಗಳಿಸಿರುವ ಚಿತ್ರ, ತನ್ನ ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ ಅನ್ನು 36.00 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದೆ. ಈ ಎಲ್ಲಾ ಕಲೆಕ್ಷನ್ ಸೇರಿದರೆ ‘ಪೆದ್ದಿ’ ಸಿನಿಮಾ ವಿಶ್ವಾದ್ಯಂತ ಒಟ್ಟು 150.49 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದಂತಾಗುತ್ತದೆ.

ಇದನ್ನೂ ಓದಿ: ನಾಯಕಿಯ ‘ಅಂಗಾಂಗ’ಗಳ ಮೇಲೆ ‘ಕಣ್ಣು’, ‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ

ಈ ಸಿನಿಮಾ ಶನಿವಾರ ಮತ್ತು ಭಾನುವಾರ ಮತ್ತಷ್ಟು ದೊಡ್ಡ ಮಟ್ಟದ ಗಳಿಕೆ ಮಾಡುವ ಮುನ್ಸೂಚನೆ ನೀಡಿದೆ. ಬುಚ್ಚಿ ಬಾಬು ನಿರ್ದೇಶನದ ಈ ಚಿತ್ರಕ್ಕೆ ರಾಮ್ ಚರಣ್ ಹೀರೋ, ಜಾನ್ವಿ ಕಪೂರ್ ನಾಯಕಿ. ಈ ಚಿತ್ರದಲ್ಲಿ ಕನ್ನಡದ ಶಿವರಾಜ್​​ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us