‘ಅಮರನ್’ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ದಾಳಿ

|

Updated on: Nov 16, 2024 | 6:21 PM

Amaran Movie: ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟಿಸಿರುವ ‘ಅಮರನ್’ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ತಮಿಳುನಾಡಿನ ತಿರುನಾಲ್ವೇಲಿ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ.

‘ಅಮರನ್’ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ದಾಳಿ
Follow us on

ಎರಡು ವಾರದ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿರುವ ‘ಅಮರನ್’ ಸಿನಿಮಾದ ಬಗ್ಗೆ ಕೆಲವರು ಅಸಮಾಧಾನವನ್ನೂ ಸಹ ವ್ಯಕ್ತಪಡಿಸಿದ್ದಾರೆ. ‘ಅಮರನ್’ ಸಿನಿಮಾ ಬಿಡುಗಡೆ ಆದ ಮೊದಲಲ್ಲಿ ಜಾತಿಯ ಕಾರಣಕ್ಕೆ ಕೆಲವು ವಿವಾದಾದ್ಮಕ ಹೇಳಿಕೆಗಳು ಕೇಳಿಬಂದವು, ಇತ್ತೀಚೆಗೆ ಸಂಘಟನೆಯೊಂದು ಧರ್ಮದ ಕಾರಣಕ್ಕೆ ಸಿನಿಮಾದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿತು. ಇದೀಗ ‘ಅಮರನ್’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಹಾಕಲಾಗಿದೆ.

ತಮಿಳುನಾಡಿನ ತಿರುನಾಲ್ವೇಲಿಯ ಅಲಂಗಾರ್ ಚಿತ್ರಮಂದಿರದಲ್ಲಿ ‘ಅಮರನ್’ ಸಿನಿಮಾ ಕಳೆದ ಎರಡು ವಾರಗಳಿಂದಲೂ ಪ್ರದರ್ಶನಗೊಳ್ಳುತ್ತಿತ್ತು. ಆದರೆ ಶನಿವಾರ ಬೆಳ್ಳಂಬೆಳಿಗ್ಗೆ ಬೈಕ್​ನಲ್ಲಿ ಬಂದ ಇಬ್ಬರು ಮೂರು ಪೆಟ್ರೋಲ್ ಬಾಂಬ್​ಗಳನ್ನು ಚಿತ್ರಮಂದಿರದ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಬೈಕ್​ನಲ್ಲಿ ಬಂದವರು ಪೆಟ್ರೋಲ್ ಬಾಂಬ್ ಎಸೆಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

‘ಅಮರನ್’ ಸಿನಿಮಾದ ನಾಯಕ ಪಾತ್ರ ಮೇಜರ್ ಮುಕುಂದನ್ ಅವರ ಜಾತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ ಎಂದು ಒಂದು ಸಮುದಾಯದ ಗುಂಪಿನವರು ಮೊದಲಿಗೆ ಆಕ್ಷೇಪ ಎತ್ತಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ನಿರ್ದೇಶಕ ರಾಜಕುಮಾರ್ ಪೆರಿಸ್ವಾಮಿ, ಕುಟುಂಬದ ಅಭಿಲಾಷೆಯ ಮೇರೆಗೆ ನಾವು ಜಾತಿಯನ್ನು ತೋರಿಸಿರಲಿಲ್ಲ ಎಂದಿದ್ದರು.

ಇತ್ತೀಚೆಗೆ ಎಸ್​ಡಿಪಿಐ ಸಂಘಟನೆ ಸಹ ‘ಅಮರನ್’ ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದು, ‘ಅಮರನ್’ ಸಿನಿಮಾದಲ್ಲಿ ಕಾಶ್ಮೀರದಲ್ಲಿ ಇರುವ ಮುಸ್ಲೀಮರೆಲ್ಲ ಉಗ್ರವಾದಿಗಳೇ ಎಂಬರ್ಥ ಬರುವಂತೆ ತೋರಿಸಲಾಗಿದೆ ಇದು ಸರಿಯಲ್ಲ ಎಂದಿದ್ದರು. ಕೆಲವೆಡೆ ಪ್ರತಿಭಟನೆಯೂ ನಡೆದಿದ್ದವು. ಇದೆಲ್ಲದರ ಮಧ್ಯೆ ಈಗ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದ್ದು, ಈ ಕೃತ್ಯವನ್ನು ಯಾರು? ಯಾವ ಕಾರಣಕ್ಕೆ ಮಾಡಿದ್ದಾರೆ ಎಂದು ತಿಳಿಯಬೇಕಿದೆ.

ಇದನ್ನೂ ಓದಿ:‘ಭೈರತಿ’, ‘ಅಮರನ್’ ಹೊಡೆತಕ್ಕೆ ತತ್ತರಿಸಿದ ‘ಕಂಗುವ’; ಒಂದಂಕಿಗೆ ಬಂದ ಕಲೆಕ್ಷನ್

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‘ಅಮರನ್’ ಸಿನಿಮಾ ವಿರೋಧಿಸಿ ಈ ಕೃತ್ಯ ಎಸೆಗಲಾಗಿದೆ ಎಂದು ಖಾತ್ರಿಯಾಗಿ ಈಗಲೇ ಹೇಳಲಾಗದು ಎಂದಿರುವ ಪೊಲೀಸರು, ಚಿತ್ರಮಂದಿರ ಸ್ಥಳದ ವಿವಾದ ಕೆಲ ವರ್ಷಗಳಿಂದಲೂ ಚಾಲ್ತಿಯಲ್ಲಿದ್ದು, ಪೆಟ್ರೋಲ್ ಬಾಂಬ್ ದಾಳಿಗೆ ಬೇರೆ ಸ್ಥಳೀಯ ಕಾರಣವೂ ಇರಬಹುದು ಎಂದಿದ್ದಾರೆ.

‘ಅಮರನ್’ ಸಿನಿಮಾ ನಿಜ ಘಟನೆ ಆಧರಿಸಿದ ಸಿನಿಮಾ ಆಗಿದೆ. ಮೇಜರ್ ಮುಕುಂದನ್ ಅವರ ಜೀವನ ಮತ್ತು ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಮುಕುಂದನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದಾರೆ. ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಕಮಲ್ ಹಾಸನ್. ಸಿನಿಮಾ ಅಕ್ಟೋಬರ್ 31 ರಂದು ಬಿಡುಗಡೆ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ