ಗಾಯಗೊಂಡ ಬಾಲಕನ ಅಲ್ಲು ಅರ್ಜುನ್ ಭೇಟಿಯಾಗದಂತೆ ತಡೆದ ಪೊಲೀಸರು
Allu Arjun case: ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಲಕನನ್ನು ಭೇಟಿ ಆಗಲೆಂದು ಅಲ್ಲು ಅರ್ಜುನ್ ಯತ್ನಿಸುತ್ತಿದ್ದಾರೆ, ಆದರೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡಿದರೆ ಜನಜಂಗುಳಿ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಅವಕಾಶ ನಿರಾಕರಿಸಲಾಗಿದೆ.
ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ಗೆ ಜಾಮೀನು ದೊರೆತಿದೆ. ಪ್ರಕರಣದಲ್ಲಿ ಅಲ್ಲು ಅರ್ಜುನ್ ಬಂಧನವೂ ಆಗಿತ್ತು. ಬಂಧನವಾದಾಗ ಮೊದಲಿಗೆ ಅಲ್ಲು ಅರ್ಜುನ್ಗೆ ತೆಲಂಗಾಣ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಸಿಕ್ಕಿತ್ತು. ಅದಾದ ಬಳಿಕ ನಾಂಪಲ್ಲಿ ನ್ಯಾಯಾಲಯದಲ್ಲಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಎರಡು ದಿನದ ಹಿಂದೆ ಅಲ್ಲು ಅರ್ಜುನ್ಗೆ ಜಾಮೀನು ದೊರೆತಿದೆ. ನಿನ್ನೆಯಷ್ಟೆ ನಾಂಪಲ್ಲಿ ನ್ಯಾಯಾಲಯಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್ ಷರತ್ತುಗಳನ್ನು ಪೂರೈಸಿ ಜಾಮೀನು ಪಡೆದಿದ್ದಾರೆ. ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ಗಾಯಗೊಂಡಿರುವ ಬಾಲಕನ ಭೇಟಿಗೆ ಅಲ್ಲು ಅರ್ಜುನ್ ಪ್ರಯತ್ನಿಸಿದ್ದು, ಅದಕ್ಕೆ ಪೊಲೀಸರು ಅಡ್ಡಗಾಲು ಹಾಕುತ್ತಿದ್ದಾರೆ.
ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ನಿಧನ ಹೊಂದಿದ್ದು ಅವರ ಪುತ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಘಟನೆ ನಡೆದಾಗಿನಿಂದಲೂ ಐಸಿಯುನಲ್ಲಿಯೇ ಇರುವ ಬಾಲಕ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಜೈಲಿನಿಂದ ಹೊರಬಂದ ಬಳಿಕ ಅಲ್ಲು ಅರ್ಜುನ್, ಆ ಬಾಲಕನ ಭೇಟಿಯಾಗಲು ಯತ್ನಿಸಿದ್ದಾರೆ ಆದರೆ ಅದಕ್ಕೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.
ಬಾಲಕ ದಾಖಲಾಗಿರುವ ಆಸ್ಪತ್ರೆಯು ರಾಂಗೊಪಾಲ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತಿದ್ದು, ರಾಂಗೊಪಾಲ್ ನಗರ ಪೊಲೀಸರು ಅಲ್ಲು ಅರ್ಜುನ್ ಬಾಲಕನ ಭೇಟಿಗೆ ಆಸ್ಪತ್ರೆಗೆ ಬರುಬಾರದು ಎಂದು ನೊಟೀಸ್ ನೀಡಿದ್ದಾರೆ. ಅಲ್ಲು ಅರ್ಜುನ್ ಆಸ್ಪತ್ರೆಗೆ ಬಂದರೆ ಜನ ಜಂಗುಳಿ ಹೆಚ್ಚಾಗುತ್ತದೆ. ನೂಕಾಟ-ತಳ್ಳಾಟ ಉಂಟಾಗಬಹುದು, ಇದರಿಂದ ಇತರೆ ರೋಗಿಗಳಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣ ನೀಡಿ ಅಲ್ಲು ಅರ್ಜುನ್, ಆ ಗಾಯಗೊಂಡ ಬಾಲಕನನ್ನು ಭೇಟಿ ಆಗದಂತೆ ತಡೆದಿದ್ದಾರೆ ಪೊಲೀಸರು.
ಇದನ್ನೂ ಓದಿ:ಕಾಲ್ತುಳಿತ ಪ್ರಕರಣ: ‘ಪುಷ್ಪ 2’ ನಿರ್ಮಾಪಕರಿಗೆ ಹೈಕೋರ್ಟ್ ರಿಲೀಫ್: ಅಲ್ಲು ಅರ್ಜುನ್ ಕತೆ?
ಅಸಲಿಗೆ ಈ ಮೊದಲು ಅಲ್ಲು ಅರ್ಜುನ್ ವಿಷಯವನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಇತರೆ ಸಚಿವರು ವಿಧಾನಸಭೆಯಲ್ಲಿ ಮಾತನಾಡಿದಾಗ ಅಲ್ಲು ಅರ್ಜುನ್, ಆ ಗಾಯಗೊಂಡ ಬಾಲಕನನ್ನು ಮಾತನಾಡಿಸಲಿಲ್ಲ ಎಂದು ಒತ್ತಿ ಒತ್ತಿ ಹೇಳಿದ್ದರು. ಆದರೆ ಈಗ ಸ್ವತಃ ಅಲ್ಲು ಅರ್ಜುನ್ ಆ ಬಾಲಕನನ್ನು ಭೇಟಿ ಆಗುತ್ತೀನಿ ಎಂದು ಹೇಳುತ್ತಿರುವಾಗ ಪೊಲೀಸರು ಅದನ್ನು ತಡೆಯುತ್ತಿದ್ದಾರೆ.
ಜಾಮೀನಿಗೆ ವಿಧಿಸಲಾಗಿದ್ದ ಷರತ್ತಿನಂತೆ ಅಲ್ಲು ಅರ್ಜುನ್ ಪ್ರತಿ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ನಡುವೆ ಹೈದರಾಬಾದ್ನ ಚಿಕ್ಕಟಪಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಹಿ ಮಾಡಬೇಕಿದೆ. ಅದರಂತೆ ಇಂದು (ಜನವರಿ 05) ಅಲ್ಲು ಅರ್ಜುನ್ ಅವರು ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖಾಧಿಕಾರಿ ಮುಂದೆ ಹಾಜರಾದರು. ಈ ಸಮಯದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳು, ಮಾಧ್ಯಮಗಳವರು ಪೊಲೀಸ್ ಠಾಣೆ ಮುಂದೆ ಹಾಜರಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ