ಭಾರತ ಚಿತ್ರರಂಗದ (Indian Cinema) ಕಂಡ ಅತ್ಯಂತ ಯಶಸ್ವಿ ನಾಯಕಿಯರಲ್ಲಿ ಶ್ರೀದೇವಿ ಸಹ ಒಬ್ಬರು. ಶ್ರೀದೇವಿ ತೆರೆಯ ಮೇಲೆ ಹಾಗೂ ತೆರೆಯ ಆಚೆ ಏರಿಳಿತ ಜೀವನ ಕಂಡವರು. ಅವರ ಸಾವು ಸಹ ಸಾಕಷ್ಟು ಅನುಮಾನ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂದಿಗೂ ಸಹ ಆಗಾಗ್ಗೆ ಸುದ್ದಿಯಲ್ಲಿರುವ, ಚರ್ಚೆಯಲ್ಲಿರುವ ನಟಿ ಶ್ರೀದೇವಿ. ಇದೀಗ ಶ್ರೀದೇವಿಯ ಜೀವನ ಬೆಳ್ಳಿತೆರೆಗೆ ಬರುತ್ತಿದೆ. ನಿರ್ದೇಶಕರೊಬ್ಬರು ಶ್ರೀದೇವಿ ಜೀವನವನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಶ್ರೀದೇವಿ ಪಾತ್ರ ಮಾಡಲು ಹಲವು ನಟಿಯರು ತುದಿ ಗಾಲಮೇಲೆ ನಿಂತಿದ್ದಾರೆ.
ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ, ನಟಿಸುತ್ತಿರುವ ನಟಿ ಪೂಜಾ ಹೆಗ್ಡೆಗೆ ಶ್ರೀದೇವಿಯ ಬಯೋಪಿಕ್ ಸಿನಿಮಾನಲ್ಲಿ ನಟಿಸುವ ಆಸೆ ಇದೆಯಂತೆ. ಈ ಬಗ್ಗೆ ಮಾತನಾಡಿರುವ ನಟಿ ಪೂಜಾ ಹೆಗ್ಡೆ, ‘ನಾನು ಈಗಾಗಲೇ ಶ್ರೀದೇವಿಯ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ, ಶ್ರೀದೇವಿ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ ನಟಿ.
‘ಬಯೋಪಿಕ್ ಸಿನಿಮಾಗಳಲ್ಲಿ ಈವರೆಗೆ ನಾನು ನಟಿಸಿಲ್ಲ. ಆದರೆ ನಿಜ ಜೀವನದ ಹೀರೋ ಆಗಿರುವ ವ್ಯಕ್ತಿಗಳನ್ನು ತೆರೆಯ ಮೇಲೆ ಪ್ರತಿಬಿಂಬಿಸುವುದು ಆಸಕ್ತಿದಾಯಕ ಎನಿಸುತ್ತದೆ. ಅದರ ಜೊತೆಗೆ ಕ್ರೀಡಾ ಕತೆಗಳನ್ನು ಹೊಂದಿರುವ ಸಿನಿಮಾಗಳಲ್ಲಿಯೂ ನಟಿಸುವ ಆಸೆ ನನಗೆ ಇದೆ’ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ತೆಲುಗು ಪ್ರೇಕ್ಷಕರ ಬಗ್ಗೆಯೂ ಮಾತನಾಡಿರುವ ಪೂಜಾ ಹೆಗ್ಡೆ, ‘ತೆಲುಗು ಸಿನಿಮಾ ಪ್ರೇಕ್ಷಕರು ನನ್ನ ಹೃದಯಕ್ಕೆ ಬಹಳ ಹತ್ತಿರ’ ಎಂದಿದ್ದಾರೆ.
ಇದನ್ನೂ ಓದಿ:ಇಂಥ ಫೋಟೋ ಪೋಸ್ಟ್ ಮಾಡಿ ಟ್ರೋಲ್ ಆದ ಪೂಜಾ ಹೆಗ್ಡೆ
ಪೂಜಾ ಹೆಗ್ಡೆ ಕಳೆದ ಕೆಲ ವರ್ಷಗಳಿಂದ ಯಾವುದೇ ತೆಲುಗು ಸಿನಿಮಾನಲ್ಲಿ ನಟಿಸಿಲ್ಲ. ತೆಲುಗು ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಕಡಿಮೆ ಆಗಿದೆ ಎನ್ನಲಾಗುತ್ತಿದೆ. ಪೂಜಾ ಹೆಗ್ಡೆ ಪ್ರಸ್ತುತ ತಮಿಳಿನ ‘ರೆಟ್ರೊ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ಸೂರ್ಯ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನು ಶ್ರೀದೇವಿ, ಬಯೋಪಿಕ್ ಬಗ್ಗೆ ಕಳೆದ ಕೆಲ ವರ್ಷದಿಂದಲೂ ಸುದ್ದಿಗಳು ಹರಿದಾಡುತ್ತಲೇ ಇವೆ. ಶ್ರೀದೇವಿಯ ಪುತ್ರಿ ಜಾನ್ಹವಿ ಕಪೂರ್ ಅವರೇ ತಾಯಿ ಶ್ರೀದೇವಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಾತ್ರಿ ಇನ್ನೂ ವ್ಯಕ್ತವಾಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ