Prabhas: ‘ಪ್ರಾಜೆಕ್ಟ್​​-ಕೆ’ನಲ್ಲಿ ಅಮಿತಾಭ್- ಪ್ರಭಾಸ್ ಮುಖಾಮುಖಿ; ಮೊದಲ ದಿನದ ಶೂಟಿಂಗ್ ಮುಗಿಸಿ ತಾರೆಯರು ಹೇಳಿದ್ದಿದು..

Amitabh Bachchan | Project K: ಪ್ರಭಾಸ್ ಹಾಗೂ ಅಮಿತಾಭ್ ಬಚ್ಚನ್ ‘ಪ್ರಾಜೆಕ್ಟ್ ಕೆ’ ಮೂಲಕ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈರ್ವರೂ ಜತೆಯಾಗಿ ಶೂಟಿಂಗ್​ನಲ್ಲಿ ಭಾಗವಹಿಸಿದ್ದು, ಮೊದಲ ದಿನದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Prabhas: ‘ಪ್ರಾಜೆಕ್ಟ್​​-ಕೆ’ನಲ್ಲಿ ಅಮಿತಾಭ್- ಪ್ರಭಾಸ್ ಮುಖಾಮುಖಿ; ಮೊದಲ ದಿನದ ಶೂಟಿಂಗ್ ಮುಗಿಸಿ ತಾರೆಯರು ಹೇಳಿದ್ದಿದು..
ಅಮಿತಾಭ್ ಬಚ್ಚನ್, ಪ್ರಭಾಸ್ (ಸಂಗ್ರಹ ಚಿತ್ರ)
Updated By: shivaprasad.hs

Updated on: Feb 19, 2022 | 3:15 PM

ಬಾಲಿವುಡ್​ನಲ್ಲಿ ಅಮಿತಾಭ್ ಬಚ್ಚನ್ (Amitabh Bachchan) ದೊಡ್ಡ ಹೆಸರು. ಈಗಲೂ ಸಾಲುಸಾಲು ಚಿತ್ರಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಇತ್ತ ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಸ್ಟಾರ್ ಆದ ನಂತರ ಬಾಲಿವುಡ್​ ಸೇರಿದಂತೆ ಎಲ್ಲೆಡೆ ಅಭಿಮಾನಿ ಬಳಗ ಹೆಚ್ಚಾಗಿದೆ. ಈ ಈರ್ವರು ದಿಗ್ಗಜರು ಜತೆಯಾಗಿ ತೆರೆ ಹಂಚಿಕೊಳ್ಳುತ್ತಾರೆ ಎಂಬ ಸುದ್ದಿ ತಿಳಿದಾಗಿನಿಂದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಚಿತ್ರಕ್ಕೆ ‘ಪ್ರಾಜೆಕ್ಟ್​ ಕೆ’ (Project K) ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದ್ದು, ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಇದರಲ್ಲಿ ಬಣ್ಣಹಚ್ಚುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣವನ್ನು ಕಳೆದ ಡಿಸೆಂಬರ್​ನಲ್ಲಿ ಹೈದರಾಬಾದ್​ನಲ್ಲಿ ನಡೆಸಲಾಗಿತ್ತು. ಇದೀಗ ಚಿತ್ರತಂಡ ಮುಂದಿನ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ವಿಶೇಷವೆಂದರೆ ಈ ಹಂತದಲ್ಲಿ ಪ್ರಭಾಸ್ ಹಾಗೂ ಅಮಿತಾಭ್ ಪಾತ್ರಗಳು ಜತೆಯಾಗಿ ಕಾಣಿಸಿಕೊಳ್ಳುವ ಭಾಗಗಳನ್ನು ಚಿತ್ರೀಕರಿಸಲಾಗುತ್ತಿದೆ. ಶುಕ್ರವಾರ (ಫೆ.18) ಪ್ರಭಾಸ್ ಹಾಗೂ ಅಮಿತಾಭ್ ಮೊದಲ ಬಾರಿಗೆ ಶೂಟಿಂಗ್​ ಸೆಟ್​ನಲ್ಲಿ ಮುಖಾಮುಖಿಯಾಗಿದ್ದಾರೆ. ಈ ಸಂದರ್ಭದ ಅನುಭವವನ್ನು ಈರ್ವರೂ ತಾರೆಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ.

ಅಮಿತಾಭ್ ಬಚ್ಚನ್ ಪ್ರಭಾಸ್ ಜತೆ ಮೊದಲ ದಿನದ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದು, ಪ್ರಭಾಸ್​ಗೆ ಶಹಬ್ಬಾಸ್​ಗಿರಿ ನೀಡಿದ್ದಾರೆ. ‘ಮೊದಲ ದಿನ, ಮೊದಲ ಶಾಟ್.. ಬಾಹುಬಲಿ ಪ್ರಭಾಸ್ ಅವರೊಂದಿಗಿನ ಮೊದಲ ಚಿತ್ರ. ಅಂತಹ ಪ್ರತಿಭೆ, ನಮ್ರತೆಯ ವ್ಯಕ್ತಿತ್ವದ ಜತೆಗೆ ಕೆಲಸ ಮಾಡುವುದು ದೊಡ್ಡ ಗೌರವ ಮತ್ತು ಕಲಿಯಲು ಉತ್ತಮ ಅವಕಾಶ’ ಎಂದು ಅಮಿತಾಭ್ ಬರೆದುಕೊಂಡಿದ್ದಾರೆ.

ಅಮಿತಾಭ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಅಮಿತಾಭ್ ಜತೆ ತೆರೆ ಹಂಚಿಕೊಂಡಿರುವುದರ ಬಗ್ಗೆ ಪ್ರಭಾಸ್ ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಅಮಿತಾಭ್ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಕನಸು ನನಸಾಯಿತು’ ಎಂದು ಪ್ರಭಾಸ್ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಅವರು ಅಮಿತಾಭ್ ನಟನೆಯ 1975ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ ‘ದೀವಾರ್​’ನ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ಪ್ರಭಾಸ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

‘ಪ್ರಾಜೆಕ್ಟ್ ಕೆ’ ಕಳೆದ ವರ್ಷ ಅನೌನ್ಸ್ ಆಗಿದ್ದ ಚಿತ್ರ. ಸೈನ್ಸ್ ಫಿಕ್ಷನ್ ಮಾದರಿಯ ಈ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಬಜೆಟ್​​ನಲ್ಲಿ ತಯಾರಾಗಲಿರುವ ಚಿತ್ರ ಎನ್ನಲಾಗಿದೆ. ಆದ್ದರಿಂದ ಈ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿದೆ. ಆದರೆ ಚಿತ್ರತಂಡ ಇದುವರೆಗೆ ಚಿತ್ರದ ಕುರಿತು ಹೆಚ್ಚಿನ ಗುಟ್ಟುಗಳನ್ನು ಬಿಟ್ಟುಕೊಟ್ಟಿಲ್ಲ. ಇದರಿಂದ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಗರಿಗೆದರಿದೆ.

ಚಿತ್ರತಂಡ ಆದಷ್ಟು ಬೇಗ ಚಿತ್ರೀಕರಣ ಮುಗಿಸಲು ಪ್ಲಾನ್ ಹಾಕಿಕೊಂಡಿದೆ. ಕಾರಣ, 2023ರ ಬೇಸಿಗೆಯಲ್ಲಿ ಚಿತ್ರವನ್ನು ತೆರೆಕಾಣಿಸುವ ಯೋಚನೆ ಚಿತ್ರತಂಡಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2023ರ ಏಪ್ರಿಲ್ ಅಥವಾ ಮೇಯಲ್ಲಿ ‘ಪ್ರಾಜೆಕ್ಟ್ ಕೆ’ ತೆರೆಕಾಣಲಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಇದನ್ನೂ ಓದಿ:

ಪುನೀತ್​-ರಾಜೇಶ್​ ಕೊನೇ ಭೇಟಿಯ ಕ್ಷಣಗಳು; ಅಗಲಿದ ಸಾಧಕರಿಗೆ ಇದು ಚಿತ್ರನಮನ

Actor Rajesh: ನಟ ರಾಜೇಶ್​ಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ? ಅವರೇ ಹೇಳಿಕೊಂಡಿದ್ದ ಮಾತುಗಳು ಇಲ್ಲಿವೆ