ಅಭಿಮಾನಿಯೋರ್ವರ ತೋಟದಲ್ಲಿ ನಡೆಯಲಿದೆ ಹಿರಿಯ ನಟ ರಾಜೇಶ್ ಅಂತ್ಯಕ್ರಿಯೆ; ಅರ್ಜುನ್ ಸರ್ಜಾ ಮಾಹಿತಿ
Actor Rajesh Funeral: ನಟ ರಾಜೇಶ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದವರು. ಅವರ ಅಂತ್ಯಕ್ರಿಯೆಗೆ ತಮ್ಮ ಜಾಗದಲ್ಲೇ ನಡೆಸಬೇಕು ಎಂದು ಅಭಿಮಾನಿಯೋರ್ವರು ಕೋರಿಕೊಂಡಿದ್ದಾರೆ. ಈ ಕುರಿತು ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಹಿರಿಯ ನಟ ರಾಜೇಶ್ (Actor Rajesh) ಅವರ ಅಂತ್ಯಕ್ರಿಯೆಯ ಸ್ಥಳವನ್ನು ಬದಲಾಯಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ರಾಜೇಶ್ ಅವರ ಅಳಿಯ, ನಟ ಅರ್ಜುನ್ ಸರ್ಜಾ, ತುಮಕೂರು ರಸ್ತೆಯ, ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ. ರಾಜೇಶ್ ಅವರ ದೊಡ್ಡ ಅಭಿಮಾನಿಯೋರ್ವರು ತಮ್ಮ ಸ್ವಂತ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಇಚ್ಛಿಸಿದ್ದು, ಜಾಗ ಬಿಟ್ಟುಕೊಟ್ಟಿದ್ದಾರೆ. ಬಹಳಷ್ಟು ಬಾರಿ ರಾಜೇಶ್ ಅವರು ಸಿದ್ದಲಿಂಗಯ್ಯನವರ ಮನೆಗೂ ತೆರಳಿದ್ದರಂತೆ. ಈ ಕಾರಣದಿಂದ ಅವರಿಗೆ ರಾಜೇಶ್ ಮೇಲೆ ಬಹಳ ಅಭಿಮಾನವಿದೆ. ಇದೇ ರೂಪದಲ್ಲಿ ಅವರು ಅಂತ್ಯಕ್ರಿಯೆಗೆ ಜಾಗ ನೀಡಿದ್ದಾರೆ. ಮೊದಲಿಗೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಉದ್ದೇಶಿಸಲಾಗಿತ್ತು. ಇದನ್ನು ತಿಳಿದ ಸಿದ್ದಲಿಂಗಯ್ಯನವರು, ಅರ್ಜುನ್ ಸರ್ಜಾ ಅವರ ಬಳಿ ಮಾತನಾಡಿ, ತಮ್ಮ ಜಮೀನಿನಲ್ಲಿ ಸಂಸ್ಕಾರ ನಡೆಸಲು ಕೋರಿಕೊಂಡಿದ್ದಾರೆ. ಸ್ಮಾರಕ ಭೂಮಿಯನ್ನು ಅವರು ಉಚಿತವಾಗಿ ನೀಡಿದ್ದು, ಸುಮಾರು 10 ಗುಂಟೆ ಪ್ರದೇಶವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.
ನಟಿ ತಾರಾ ಮಾಹಿತಿ ನೀಡಿ, ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್ ಅವರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ‘‘ನಟ ರಾಜೇಶ್ ಅಗಲಿಕೆ ಸದಾಕಾಲ ನಮ್ಮನ್ನು ಕಾಡಲಿದೆ. ಅವರು ನಟಿಸಿರುವ ಚಿತ್ರಗಳು ಸದಾಕಾಲ ನೆನಪಿರುತ್ತದೆ. ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ’’ ಎಂದು ಬೊಮ್ಮಾಯಿ ನುಡಿದಿದ್ದಾರೆ. ಸಿಎಂ ಬೊಮ್ಮಾಯಿ ಜೊತೆ ಆಗಮಿಸಿದ್ದ ಸಚಿವ ಮುರುಗೇಶ್ ನಿರಾಣಿ ಕೂಡ ಅಂತಿಮ ದರ್ಶನ ಪಡೆದರು.
ಅರ್ಜುನ್ ಸರ್ಜಾ ಹಂಚಿಕೊಂಡ ಮಾಹಿತಿ ಇಲ್ಲಿದೆ:
ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದೆ ಸುಮಲತಾ ಅಂಬರೀಶ್, ಹಿರಿಯ ನಟಿ ಗಿರಿಜಾ ಲೋಕೇಶ್, ರಾಕ್ಲೈನ್ ವೆಂಕಟೇಶ್ ಮೊದಲಾದ ಗಣ್ಯರು, ಕಲಾವಿದರು ರಾಜೇಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಎಲ್ಲರೂ ರಾಜೇಶ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
‘ಕಲಾ ತಪಸ್ವಿ’ ಎಂದೇ ಖ್ಯಾತರಾಗಿದ್ದ ರಾಜೇಶ್ ಇಂದು (ಫೆ.19) ಮುಂಜಾನೆ ನಿಧನರಾಗಿದ್ದರು. ಮೊದಲು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು 196ಒರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ಪ್ರಖ್ಯಾತಿ ಪಡೆದರು. ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಚಿತ್ರರಂಗದ ಸೇವೆಗೆ ರಾಜೇಶ್ಗೆ ಗೌರವ ಡಾಕ್ಟರೇಟ್ ಲಭಿಸಿದೆ.
ಇದನ್ನೂ ಓದಿ:
ಪುನೀತ್-ರಾಜೇಶ್ ಕೊನೇ ಭೇಟಿಯ ಕ್ಷಣಗಳು; ಅಗಲಿದ ಸಾಧಕರಿಗೆ ಇದು ಚಿತ್ರನಮನ
‘ಕಲಾ ತಪಸ್ವಿ’ ರಾಜೇಶ್ ಅವರಿಗಿತ್ತು ಮೂರು ಹೆಸರು; ಹೆಸರಿನ ಹಿಂದಿನ ಕುತೂಹಲಕರ ಮಾಹಿತಿ ಇಲ್ಲಿದೆ




