Actor Rajesh: ನಟ ರಾಜೇಶ್ಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ? ಅವರೇ ಹೇಳಿಕೊಂಡಿದ್ದ ಮಾತುಗಳು ಇಲ್ಲಿವೆ
RIP Actor Rajesh: ಹಿರಿಯ ನಟ ರಾಜೇಶ್ ಇಂದು ಇಹಲೋಕ ತ್ಯಜಿಸಿದ್ದಾರೆ. ಸಿನಿಮಾ, ರಂಗಭೂಮಿಗೆ ಅನಿರೀಕ್ಷಿತವಾಗಿ ಪ್ರವೇಶ ನೀಡಿದ್ದ ರಾಜೇಶ್ ನಂತರ ಈ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡಿದರು. ಈ ಹಿಂದೆ ಟಿವಿ9 ಡಿಜಿಟಲ್ ಜತೆ ಅವರು ಮಾತನಾಡುತ್ತಾ ತಮ್ಮ ಸಿನಿ ಪಯಣದ ಆರಂಭವನ್ನು ಮೆಲುಕು ಹಾಕಿದ್ದರು. ಅದರ ವಿವರ ಇಲ್ಲಿದೆ.
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ‘ಕಲಾ ತಪಸ್ವಿ’ ಎಂದೇ ಖ್ಯಾತರಾಗಿದ್ದ ನಟ ರಾಜೇಶ್ (Actor Rajesh) ಇಂದು (ಫೆ.19) ಇಹಲೋಕ ತ್ಯಜಿಸಿದ್ದಾರೆ. ರಂಗಭೂಮಿ, ಸಿನಿಮಾಕ್ಕೆ ತಾವು ಪ್ರವೇಶ ನೀಡಿದ್ದು ಬಹಳ ಆಕಸ್ಮಿಕವಾಗಿ ಎಂದು ರಾಜೇಶ್ ಈ ಹಿಂದೆ ಹೇಳಿಕೊಂಡಿದ್ದರು. ನಂತರ ಸಿನಿಮಾ ಕ್ಷೇತ್ರದಲ್ಲಿ ರಾಜೇಶ್ ದೊಡ್ಡ ಹೆಸರು ಮಾಡಿದರು. ಈ ಹಿಂದೆ ಟಿವಿ9 ಡಿಜಿಟಲ್ ಜತೆ ಮಾತನಾಡುತ್ತಾ ತಮ್ಮ ವೃತ್ತಿ ಜೀವನದ ಆರಂಭದ ಬಗ್ಗೆ ಅವರು ಮೆಲುಕು ಹಾಕಿದ್ದರು. ಅದರಲ್ಲಿ ಅವರು ಸಿನಿಮಾ ಅವಕಾಶ ಸಿಕ್ಕಿದ ಕುತೂಹಲಕಾರಿ ಘಟನೆಯನ್ನು, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಪಾತ್ರಕ್ಕೆ ಆಯ್ಕೆ ಮಾಡಿ ಹೇಳಿದ ಮಾತನ್ನು ಹೇಳಿಕೊಂಡಿದ್ದರು. ರಾಜೇಶ್ ಆಡಿದ್ದ ಮಾತುಗಳು ಇಲ್ಲಿವೆ. ‘‘ಖ್ಯಾತ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಗಳು ಹೊಸಬರನ್ನೆಲ್ಲಾ ಸೇರಿಸಿ ‘ವೀರ ಸಂಕಲ್ಪ’ ಎಂಬ ಚಿತ್ರ ಮಾಡಲು ಮುಂದಾಗಿದ್ದರು. ಆಗ ಮದ್ರಾಸ್ನಿಂದ ಬಂದ ಅವರು ಗಾಂಧಿನಗರದ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ವೇದಿಕೆಯಲ್ಲಿ ಪ್ರದರ್ಶನ ಮಾಡುವ ಕಲಾವಿದರು ಯಾರಿದ್ದಾರೆ, ಅವರನ್ನು ಪರಿಚಯಿಸಿ ಎಂದು ಕೃಷ್ಣಮೂರ್ತಿಗಳು ಪತ್ರಕರ್ತರಲ್ಲಿ ಕೇಳಿಕೊಂಡಿದ್ದರು’’
‘‘ಆಗ ಹಾ.ವೆಂ ಸೀತಾರಾಮಯ್ಯ, ಹಾ.ವೆಂ ಗುರುರಾಜ್, ಹಾ.ವೆಂ ನಾಗರಾಜ ಮೊದಲಾದವರು ಪತ್ರಕರ್ತರು. ಗುರುರಾಜ್ ನಮ್ಮ ಮನೆಗೆ ಬಂದು ‘ನೀವು ಹುಣಸೂರು ಕೃಷ್ಣಮೂರ್ತಿಗಳನ್ನು ನೋಡಬೇಕಾಗಿದೆ ಎಂದರು. ‘ಏಕೆ?’ ಎಂದು ಪ್ರಶ್ನಿಸಿದೆ. ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ಒಳ್ಳೆಯ ಕಲಾವಿದರನ್ನು ಹುಡುಕುತ್ತಿದ್ದಾರೆ. ನಾನು ನಿಮ್ಮ ಹೆಸರು ವಿದ್ಯಾಸಾಗರ್ (ರಾಜೇಶ್ ಅವರ ರಂಗಭೂಮಿ ಹೆಸರು) ಅಂತ ಒಬ್ಬರಿದ್ದಾರೆ ಎಂದು ಹೇಳಿದ್ದೇನೆ ಎಂದು ಉತ್ತರಿಸಿದರು..’’ ರಾಜೇಶ್ ಅವರಿಗೆ ಸಿನಿಮಾ ಕುರಿತು ಮೊದಲ ಪ್ರಸ್ತಾಪ ಬಂದಿದ್ದು ಹೀಗೆ.
ಸಂದರ್ಶನದಲ್ಲಿ ಹುಣಸೂರು ಕೃಷ್ಣಮೂರ್ತಿ ರಾಜೇಶ್ಗೆ ಹೇಳಿದ್ದೇನು?
ಸಂದರ್ಶನಕ್ಕೆ ತೆರಳಿದ್ದ ರಾಜೇಶ್ ಅವರು ಅಲ್ಲಿ ನಡೆದಿದ್ದನ್ನು ಹೀಗೆ ವಿವರಿಸಿದ್ದರು. ‘‘ಅಲ್ಲಿಗೆ ಹೋದಾಗ ಒಂದು ಎಂಟು- ಹತ್ತು ಕಲಾವಿದರಿದ್ದರು. ಸಂದರ್ಶನ ನಡೆಯುತ್ತಿತ್ತು. ಹುಣಸೂರು ಕೃಷ್ಣಮೂರ್ತಿಯವರ ಬಗ್ಗೆ ನನಗೆ ಅಪಾರ ಗೌರವವಿತ್ತು. 1950ರ ದಶಕದಲ್ಲಿ ಬಹಳಷ್ಟು ಗೀತೆಗಳಿಗೆ ಕೃಷ್ಣಮೂರ್ತಿಯವರದ್ದೇ ಸಾಹಿತ್ಯವಿತ್ತು. ಆಗ ಬಹುತೇಕ ಅವರೊಬ್ಬರೇ ಚಿತ್ರಸಾಹಿತಿಯಾಗಿದ್ದರು. ನಾನು ನಮಸ್ಕಾರ ಮಾಡಿದೆ. ಎಲ್ಲರಿಗೂ ಯಾವುದಾದರೂ ಒಂದೊಂದು ತುಣುಕು ಪ್ರದರ್ಶಿಸಿ ಎಂದರು. ಒಬ್ಬೊಬ್ಬರು ಒಂದೊಂದು ತುಣಕನ್ನು ಪ್ರದರ್ಶಿಸಿ ಮರಳುತ್ತಿದ್ದರು. ರಾತ್ರಿ 10 ಗಂಟೆಯಾಗುತ್ತಾ ಬಂದರೂ ನನ್ನನ್ನಿನ್ನೂ ಕರೆದಿರಲಿಲ್ಲ’’
‘‘ಆಗ ಗುರುರಾಜ್ ಅವರು, ‘ವಿದ್ಯಾ ಸಾಗರ್’ (ರಾಜೇಶ್ ಅವರ ರಂಗಭೂಮಿ ಹೆಸರು) ಅವರನ್ನು ಏನೂ ಕೇಳಲೇ ಇಲ್ಲವಲ್ಲ ಎಂದು ಕೃಷ್ಣಮೂರ್ತಿಯವರಲ್ಲಿ ಪ್ರಶ್ನಿಸಿದರು. ಆಗ ಹುಣಸೂರು ಕೃಷ್ಣಮೂರ್ತಿ ಹೇಳಿದ್ದು ಹೀಗೆ..’’
‘‘ನೋಡ್ರೀ, ವಿದ್ಯಾ ಸಾಗರ್ ಬಂದಾಗ ಅವರ ನಡಿಗೆ ನೋಡಿದೆ. ಅದು ಕಲಾತ್ಮಕವಾದ ನಡಿಗೆ. ಅವರ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಶುದ್ಧ ಕನ್ನಡ ಮಾತನಾಡುತ್ತಿದ್ದರು. ಅಷ್ಟು ಸಾಕು ನನಗೆ. ಇನ್ನೇಕೆ ಅವರನ್ನು ಪ್ರಶ್ನಿಸಬೇಕು? ಸಂದರ್ಶನ ಏಕೆ ಬೇಕು? ಶುದ್ಧ ಕನ್ನಡ, ‘ಕಲಾವಿದರ ನಡಿಗೆ’ ಇರುವ ರಾಜೇಶ್ಗೆ ಸಂದರ್ಶನ ಬೇಕಾಗಿಲ್ಲ’’ ಎಂದರು. ನಂತರ ನನ್ನ ವಿಳಾಸ ಪಡೆದರು.
ಹುಣಸೂರು ಕೃಷ್ಣಮೂರ್ತಿಯವರ ಅಣ್ಣನ ಮಗ ಭಾರ್ಗವ, ತಂಗಿಯ ಮಗ ದ್ವಾರಕೀಶ್. ಭಾರ್ಗವ ಅವರು ಬಂದು ನನ್ನ ಅಳತೆ ತೆಗೆದುಕೊಂಡು ಹೋದರು. ಕೆಲಸದಿಂದ ಒಂದು ಹತ್ತು ದಿನ ರಜೆ ಸಿಗುತ್ತದೆಯೇ ಎಂದು ಕೇಳಿದ್ದರು. ಕೆಲಸ ಮಾಡುತ್ತಿದ್ದ ಕಚೇರಿಯಲ್ಲೂ ಪ್ರೋತ್ಸಾಹವಿತ್ತು. ಹೀಗೆ ‘ವೀರ ಸಂಕಲ್ಪ’ ಸಿನಿಮಾದಲ್ಲಿ ನಟಿಸಿದೆ. ‘ವೀರ ಸಂಕಲ್ಪ’ದಲ್ಲಿ ನಟಿಸುತ್ತಿರುವಾಗಲೇ ‘ರಾಮಾಂಜನೇಯ ಯುದ್ಧ’ ಚಿತ್ರಕ್ಕೆ ಆಫರ್ ಬಂತು.ಅಲ್ಲಿ ಭರತ ಪಾತ್ರ ಮಾಡಿದೆ. ಆಗ ರಾಜ್ ಕುಮಾರ್ ಪರಿಚಯವಾಯಿತು’’ ಎಂದು ಹೇಳಿಕೊಂಡಿದ್ದರು ರಾಜೇಶ್.
1968ರಲ್ಲಿ ‘ನಮ್ಮ ಊರು’ ಚಿತ್ರ ರಾಜೇಶ್ಗೆ ಪ್ರಸಿದ್ಧಿ ತಂದುಕೊಟ್ಟಿತು. ಅದುವರೆಗೆ ವಿದ್ಯಾ ಸಾಗರ್ ಎಂದು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅವರು, ನಂತರ ರಾಜೇಶ್ ಎಂದು ಗುರುತಿಸಿಕೊಂಡರು.
ಸಿನಿಮಾಗೆ ಆಯ್ಕೆಯಾಗಿದ್ದರ ಕುರಿತಂತೆ ರಾಜೇಶ್ ತಮ್ಮ ಮಾತುಗಳನ್ನು ರಾಜೇಶ್ ಹೀಗೆ ಹಂಚಿಕೊಂಡಿದ್ದರು:
150 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಕಲಾ ತಪಸ್ವಿ ಎಂದೇ ಗುರುತಿಸಿಕೊಂಡಿದ್ದ ರಾಜೇಶ್ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಅಪಾರ ಅಭಿಮಾನಿಗಳು ವೃಂದ, ಚಿತ್ರರಂಗ, ಗಣ್ಯರು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ ರಾಜೇಶ್ ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನೂ ಓದಿ:
‘ಕಲಾ ತಪಸ್ವಿ’ ರಾಜೇಶ್ ಅವರಿಗಿತ್ತು ಮೂರು ಹೆಸರು; ಹೆಸರಿನ ಹಿಂದಿನ ಕುತೂಹಲಕರ ಮಾಹಿತಿ ಇಲ್ಲಿದೆ
Actor Rajesh: ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ರಾಜೇಶ್ ಅಂತಿಮ ದರ್ಶನಕ್ಕೆ ಅವಕಾಶ: ಅರ್ಜುನ್ ಸರ್ಜಾ ಮಾಹಿತಿ