‘ಜೀವನಕ್ಕೆ ಹೊಸಬರು ಬರಲಿದ್ದಾರೆ’: ಕುತೂಹಲ ಮೂಡಿಸಿದ ಪ್ರಭಾಸ್ ಪೋಸ್ಟ್

|

Updated on: May 17, 2024 | 12:54 PM

ನಟ ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಪ್ರಭಾಸ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಶೀಘ್ರವೇ ವಿಶೇಷ ವ್ಯಕ್ತಿಯೊಬ್ಬರು ಜೀವನಕ್ಕೆ ಬರಲಿದ್ದಾರೆ ಎಂದಿದ್ದಾರೆ.

‘ಜೀವನಕ್ಕೆ ಹೊಸಬರು ಬರಲಿದ್ದಾರೆ’: ಕುತೂಹಲ ಮೂಡಿಸಿದ ಪ್ರಭಾಸ್ ಪೋಸ್ಟ್
Follow us on

ಪ್ರಭಾಸ್ (Prabhas) ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ಹಲವು ನಟಿಯರ ಹೆಸರು ಪ್ರಭಾಸ್ ಜೊತೆಗೆ ಹಲವು ಬಾರಿ ಕೇಳಿ ಬಂದಿವೆ. ಆದರೆ ಯಾವೊಂದು ಸತ್ಯವಾಗಿಲ್ಲ. ಅದರಲ್ಲಿಯೂ ನಟಿ ಅನುಷ್ಕಾ ಶೆಟ್ಟಿ ಜೊತೆಗಂತೂ ಪ್ರಭಾಸ್ ಮದುವೆಯೇ ಆಗಬಿಟ್ಟಿದ್ದಾರೆ ಎಂಬ ಸುದ್ದಿಗಳು ಸಹ ಹಲವು ಬಾರಿ ಹರಿದಾಡಿವೆ. ಆದರೆ ಅದೆಲ್ಲ ಊಹಾಪೋಹವಾಗಿಯಷ್ಟೆ ಉಳಿದಿದೆ. ಆದರೆ ಇದೀಗ ಸ್ವತಃ ಪ್ರಭಾಸ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಪ್ರಭಾಸ್ ಮದುವೆಯಾಗಲಿದ್ದಾರೆಯೇ ಎಂಬ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ.

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಪ್ರಭಾಸ್, ‘ಡಾರ್ಲಿಂಗ್ಸ್, ಕೊನೆಗೂ ಒಬ್ಬ ವಿಶೇಷ ವ್ಯಕ್ತಿ ನಮ್ಮ ಜೀವನಕ್ಕೆ ಬರಲಿದ್ದಾರೆ. ಸ್ವಲ್ಪ ಕಾಯಿರಿ’ ಎಂದು ಬರೆದುಕೊಂಡಿದ್ದಾರೆ. ಪ್ರಭಾಸ್, ‘ವಿಶೇಷ ವ್ಯಕ್ತಿ’ ಎಂದು ಬರೆದಿರುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು, ಪ್ರಭಾಸ್ ಮದುವೆಯಾಗಲಿದ್ದಾರೆ ಹಾಗಾಗಿಯೇ ಈ ಸಂದೇಶ ಹಂಚಿಕೊಂಡಿದ್ದಾರೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.

ಇದನ್ನೂ ಓದಿ:ಕಡಿಮೆ ಟಿಆರ್​ಪಿ ಪಡೆದ ‘ಸಲಾರ್​’ ಸಿನಿಮಾ; ಪ್ರಭಾಸ್​ ಅಭಿಮಾನಿಗಳಿಗೆ ನಿರಾಸೆ

ಪ್ರಭಾಸ್​ಗೆ ವಯಸ್ಸೀಗ 44 ವರ್ಷ. ಇನ್ನೂ ಮದುವೆಯಾಗದೆ ಬ್ಯಾಚುಲರ್ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ನಟಿ ಅನುಷ್ಕಾ ಶೆಟ್ಟಿಯನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡಿತ್ತು. ಆದರೆ ಅನುಷ್ಕಾ, ‘ಪ್ರಭಾಸ್ ತಮ್ಮ ಆತ್ಮೀಯ ಗೆಳೆಯ‘ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಇನ್ನು ಪ್ರಭಾಸ್ ಅಂತೂ ಮದುವೆ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ, ‘ಆಗುವ ಸಮಯಕ್ಕೆ ಆಗುತ್ತೆ’ ಎಂದಷ್ಟೆ ಉತ್ತರಿಸುತ್ತಿದ್ದರು. ಇಬ್ಬರೂ ಸಹ ಈ ವರೆಗೆ ಮದುವೆಯಾಗಿಲ್ಲ. ಈಗ ಪ್ರಭಾಸ್ ಹಾಕಿರುವ ಪೋಸ್ಟ್ ನೋಡಿದರೆ ಪ್ರಭಾಸ್ ಈಗಲಾದರೂ ಸಿಹಿ ಸುದ್ದಿ ಕೊಡುವ ನಿರೀಕ್ಷೆ ಹುಟ್ಟಿಸಿದ್ದಾರೆ.

ಇನ್ನು ಪ್ರಭಾಸ್, ‘ಕಲ್ಕಿ’ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಸಿನಿಮಾದ ಪ್ರಚಾರ ಕಾರ್ಯಗಳು ಈಗಾಗಲೇ ಆರಂಭಗೊಂಡಿವೆ. ಈಗ ಪ್ರಭಾಸ್ ಹಂಚಿಕೊಂಡಿರುವ ಇನ್​ಸ್ಟಾಗ್ರಾಂ ಪೋಸ್ಟ್ ಸಹ ಇದೇ ವಿಷಯದ ಕುರಿತಾಗಿರಬಹುದು ಎಂಬ ಅನುಮಾನ ಮೂಡಿದೆ. ‘ಕಲ್ಕಿ’ ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಅಂಥಹಾ ದಿಗ್ಗಜ ನಟರು ನಟಿಸಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಜಾರಿಯಲ್ಲಿದ್ದು, ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Fri, 17 May 24