
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಶನಿವಾರ (ಅ.23) ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಅಭಿಮಾನಿಗಳು ಭರ್ಜರಿಯಾಗಿ ಸಂಭ್ರಮಿಸಿದರು. 42ನೇ ವಸಂತಕ್ಕೆ ಕಾಲಿಟ್ಟ ಪ್ರಭಾಸ್ಗೆ ಎಲ್ಲರಿಂದಲೂ ಶುಭಾಶಯಗಳ ಮಳೆ ಸುರಿಸಲಾಗಿದೆ. ಬಹುನಿರೀಕ್ಷಿತ ‘ರಾಧೆ ಶ್ಯಾಮ್’ ಸಿನಿಮಾದಿಂದ ಟೀಸರ್ ಬಿಡುಗಡೆ ಆಗಿದ್ದು, ಜನರಿಂದ ಸಖತ್ ಮೆಚ್ಚುಗೆ ಸಿಗುತ್ತಿದೆ. ಇದರ ಜೊತೆಗೆ ‘ಸಲಾರ್’ ಮತ್ತು ‘ಆದಿಪುರುಷ್’ ಚಿತ್ರತಂಡದಿಂದ ಏನಾದರೂ ಅಪ್ಡೇಟ್ ಸಿಗಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಕೊನೇ ಕ್ಷಣದಲ್ಲಿ ಆಗಿದ್ದೇ ಬೇರೆ.
ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ‘ಕೆಜಿಎಫ್’ ಚಿತ್ರದ ಬಳಿಕ ಅವರು ಕೈಗೆತ್ತಿಕೊಂಡ ಸಿನಿಮಾ ಇದಾಗಿರುವುದರಿಂದ ಹೈಪ್ ಜೋರಾಗಿದೆ. ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ಆದರೆ ಪ್ರಭಾಸ್ ಬರ್ತ್ಡೇ ದಿನ ‘ಸಲಾರ್’ ತಂಡ ಹಂಚಿಕೊಂಡ ಪೋಸ್ಟರ್ ನಿರಾಸೆ ಮೂಡಿಸಿದೆ.
ಕೇವಲ ‘ಹ್ಯಾಪಿ ಬರ್ತ್ಡೇ ಪ್ರಭಾಸ್’ ಎಂಬ ವಾಕ್ಯ ಬಿಟ್ಟರೆ ಈ ಪೋಸ್ಟರ್ನಲ್ಲಿ ಬೇರೇನೂ ಇಲ್ಲ. ಕೊನೇ ಪಕ್ಷ ಪ್ರಭಾಸ್ ಅವರ ಒಂದು ಫೋಟೋ ಕೂಡ ಇಲ್ಲ. ಇದನ್ನು ಕಂಡು ಅವರ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಈ ರೀತಿ ಮಾಡಲು ಕಾರಣ ಏನು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸದ್ಯ ಇದಕ್ಕೆ ಪ್ರಶಾಂತ್ ನೀಲ್ ಉತ್ತರ ನೀಡಿಲ್ಲ.
ಇನ್ನು, ‘ಆದಿಪುರುಷ್’ ಚಿತ್ರತಂಡದಿಂದಲೂ ಇದೇ ರೀತಿ ಆಗಿದೆ. ಖ್ಯಾತ ನಿರ್ದೇಶಕ ಓಂ ರಾವುತ್ ಅವರು ‘ಆದಿಪುರುಷ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಅವರು ಕೂಡ ಪ್ರಭಾಸ್ ಹುಟ್ಟುಹಬ್ಬದ ಸಲುವಾಗಿ ಯಾವುದೇ ಹೊಸ ಅಪ್ಡೇಟ್ ಹಂಚಿಕೊಂಡಿಲ್ಲ. ಕಾಟಾಚಾರಕ್ಕೆ ಎಂಬಂತೆ ಒಂದು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅದು ಕೂಡ ಯಾವುದೋ ಹಳೇ ಫೋಟೋಶೂಟ್ನ ಚಿತ್ರ ಬಳಸಿಕೊಂಡು ಈ ಪೋಸ್ಟರ್ ವಿನ್ಯಾಸ ಮಾಡಲಾಗಿದೆ. ಆ ಫೋಟೋಗೂ, ಆದಿಪುರುಷ್ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಈ ಎಲ್ಲ ಬೆಳವಣಿಗೆಗಳಿಂದಾಗಿ ಪ್ರಭಾಸ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಯಶ್ಗೆ ಭೀಮನ ಪಾತ್ರ, ಪ್ರಶಾಂತ್ ನೀಲ್ ನಿರ್ದೇಶನ; ಹೀಗೊಂದು ನಕಲಿ ಸಿನಿಮಾದ ಟ್ರೇಲರ್ಗೆ ಲಕ್ಷಾಂತರ ವೀವ್ಸ್
Prabhas: ‘ಸಲಾರ್’ ವಿಡಿಯೋ ಲೀಕ್: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್ ಅಭಿಮಾನಿಗಳಿಗೆ ಪದೇಪದೇ ನಿರಾಸೆ