
‘ಕೆಜಿಎಫ್’ (KGF) ಸಿನಿಮಾ ಸರಣಿ ಕರ್ನಾಟಕದ ಮಟ್ಟಿಗೆ ಮಾತ್ರವಲ್ಲ ಭಾರತೀಯ ಚಿತ್ರರಂಗದ ಪಾಲಿಗೆ ಮಹತ್ವದ ಕಮರ್ಶಿಯಲ್ ಸಿನಿಮಾ. ಕಮರ್ಶಿಯಲ್ ಸಿನಿಮಾ ನಿರ್ದೇಶಕರುಗಳಿಗೆ ಒಂದು ಮಾದರಿಯನ್ನು ಹಾಕಿಕೊಟ್ಟ ಸಿನಿಮಾ ಅದು. ‘ಕೆಜಿಎಫ್’ನ ಸೂತ್ರಗಳನ್ನೇ ಇರಿಸಿಕೊಂಡು ಆ ನಂತರ ಹಲವು ಸಿನಿಮಾಗಳು ಬಂದವು. ಸೂಪರ್ ಸ್ಟಾರ್ ನಟರುಗಳು ಸಹ ‘ಕೆಜಿಎಫ್’ ಮೂಲಕ ಸಾಕಷ್ಟು ಕಲಿತಿದ್ದಾರೆ. ಖುದ್ದು ಪ್ರಭಾಸ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ಕೆಜಿಎಫ್’ ಮೂಲಕ ತಾವು ಕಲಿತ ಪಾಠವೇನು ಅದರಿಂದಾದ ಲಾಭವೇನು ಎಂದು ಅವರು ಹಂಚಿಕೊಂಡಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಜೊತೆಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಪ್ರಭಾಸ್, ‘ಕೆಜಿಎಫ್’ ಬಿಡುಗಡೆ ಆದಾಗ ನಾನು ನೋಡಿರಲಿಲ್ಲ. ಬಳಿಕ ನಾನು ನನ್ನ ಕೆಲವು ಆಪ್ತ ಗೆಳೆಯರು, ನನ್ನ ಸಹೋದರರು, ಸಂಬಂಧಿಗಳು ಎಲ್ಲ ಒಟ್ಟು 40 ಮಂದಿಯನ್ನು ಸೇರಿಸಿಕೊಂಡು ಸಿನಿಮಾ ನೋಡುವ ಪ್ಲಾನ್ ಮಾಡಿದೆವು, ಬಲೂನ್ಗಳು, ವಿಷಲ್ಗಳು ಎಲ್ಲವನ್ನೂ ಖರೀದಿಸಿ, ಪ್ರಸಾದ್ ಲ್ಯಾಬ್ನಲ್ಲಿ ಶೋ ಹಾಕಿಕೊಂಡು ಒಟ್ಟಿಗೆ ಸಿನಿಮಾ ನೋಡಿದೆವು’ ಎಂದು ಪ್ರಭಾಸ್ ವಿವರಿಸಿದ್ದಾರೆ.
‘ನನ್ನ ಜೊತೆಗೆ ಅಂದು ಸಿನಿಮಾ ನೋಡಿದವರ್ಯಾರು ಚಿತ್ರರಂಗಕ್ಕೆ ಸಂಬಂಧಿಸಿದವರಲ್ಲ, ಅವರು ಸಾಮಾನ್ಯ ಪ್ರೇಕ್ಷಕರಕ್ಕೆ. ಅಂದು ಅವರೊಟ್ಟಿಗೆ ‘ಕೆಜಿಎಫ್’ ನೋಡುವಾಗ ನನಗೆ ನಿಜವಾದ ಚಿತ್ರಮಂದಿರದ ಅನುಭವ ಆಯ್ತು, ಅವರು ಯಾವುದಕ್ಕೆ ವಿಷಲ್ ಹಾಕಿದರು, ಯಾವ ಸೀನ್ಗೆ ನಕ್ಕರು, ಯಾವ ಸೀನ್ ಅವರನ್ನು ಭಾವುಕರನ್ನಾಗಿಸಿತು ಎಂಬುದು ನನಗೆ ಸ್ಪಷ್ಟವಾಗಿ ಅರ್ಥವಾಯ್ತು’ ಎಂದಿದ್ದಾರೆ ಪ್ರಭಾಸ್.
ಇದನ್ನೂ ಓದಿ:ನಡುರಾತ್ರಿ ರೌಡಿ ಶೀಟರ್ಗಳ ಬೆವರಿಳಿಸಿದ ಕೆಜಿಎಫ್ ಎಸ್ಪಿ: ಖಡಕ್ ವಾರ್ನಿಂಗ್ ಕೊಟ್ಟ ಶಿವಾಂಶು ರಜಪೂತ್
ಅದಾದ ಬಳಿಕ ನಾನು ಅದನ್ನು ಒಂದು ಸಂಪ್ರದಾಯದಂತೆ ಪಾಲಿಸುತ್ತಿದ್ದೇನೆ. ನನ್ನ ಸಿನಿಮಾಗಳನ್ನು ಸಹ ನಾನು ಬಿಡುಗಡೆ ಆಗುವ ಮುಂಚೆಯೇ ಅವರುಗಳೊಟ್ಟಿಗೆ ಚಿತ್ರಮಂದಿರದಲ್ಲಿ ನೋಡುತ್ತೇನೆ. ಆಗ ನನಗೆ ಸಿನಿಮಾ ಹೇಗಿದೆ, ಯಾವ ಸೀನ್ ಜನರನ್ನು ತಲುಪಲಿದೆ ಯಾವ ಸೀನ್ ವೀಕ್ ಆಗಿದೆ ಎಂಬುದು ಅರ್ಥವಾಗುತ್ತದೆ ಎಂದು ಪ್ರಭಾಸ್ ಹೇಳಿದ್ದಾರೆ.
‘ಸಲಾರ್’ ಸಿನಿಮಾದ ಉದಾಹರಣೆ ನೀಡಿದ ಪ್ರಭಾಸ್, ‘ಸಲಾರ್ನಲ್ಲಿ ನಾನು ಪೃಥ್ವಿರಾಜ್ ಅವರ ಪಾತ್ರಕ್ಕೆ ಸಾರಿ ಕೇಳುವ ದೃಶ್ಯವಿದೆ. ಆ ದೃಶ್ಯ ಶೂಟ್ ಮಾಡುವಾಗ ಈ ದೃಶ್ಯಕ್ಕೆ ಜನ ನಗುತ್ತಾರೆ ಎಂದು ನೀಲ್ ಹೇಳಿದ್ದರು. ನಾನು ಗೆಳೆಯರೊಟ್ಟಿಗೆ ಸಿನಿಮಾ ನೋಡುವಾಗ ಅವರು ಅದೇ ಸೀನ್ಗೆ ನಕ್ಕರು. ನೀಲ್ ಬಿಡಿ, ಅವರು ದೊಡ್ಡ ನಿರ್ದೇಶಕ, ಅವರಿಗೆ ಪ್ರೇಕ್ಷಕರ ಪಲ್ಸ್ ಚೆನ್ನಾಗಿ ಅರ್ಥ ಆಗುತ್ತದೆ’ ಎಂದಿದ್ದಾರೆ ಪ್ರಭಾಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ