ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ಪ್ರಭಾಸ್ ಅವರಿಗೆ ‘ಕಲ್ಕಿ 2898 ಎಡಿ’ ಸಿನಿಮಾದಿಂದ ದೊಡ್ಡ ಸಕ್ಸಸ್ ಸಿಕ್ಕಿದೆ. ಈ ಖುಷಿಯಲ್ಲಿ ಅವರು ತೇಲಾಡುತ್ತಿದ್ದಾರೆ. ಜೂನ್ 27ರಂದು ಬಿಡುಗಡೆಯಾದ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ನಿರ್ದೇಶಕ ನಾಗ್ ಅಶ್ವಿನ್ ಅವರ ಕೆಲಸಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈವರೆಗೂ ಅತಿಹೆಚ್ಚು ಕಲೆಕ್ಷನ್ ಮಾಡಿದ ಭಾರತದ 6ನೇ ಸಿನಿಮಾ ಎಂಬ ಖ್ಯಾತಿಗೆ ‘ಕಲ್ಕಿ 2898 ಎಡಿ’ ಸಿನಿಮಾ ಪಾತ್ರವಾಗಿದೆ. ಈ ಖುಷಿಯಲ್ಲಿ ಪ್ರಭಾಸ್ ಅವರು ಧನ್ಯವಾದ ತಿಳಿಸಿದ್ದಾರೆ.
‘ಕಲ್ಕಿ 2898 ಎಡಿ’ ಸಿನಿಮಾದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಭಾಸ್ ಅವರ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮೊದಲಿಗೆ ತಮ್ಮ ಕೈಹಿಡಿದ ಅಭಿಮಾನಿಗಳಿಗೆ ಪ್ರಭಾಸ್ ಧನ್ಯವಾದ ಅರ್ಪಿಸಿದ್ದಾರೆ. ಬಳಿಕ ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕರಾದ ಅಶ್ವಿನಿ ದತ್, ಪ್ರಿಯಾಂಕಾ, ಸ್ವಪ್ನಾ ಅವರಿಗೆ ಪ್ರಭಾಸ್ ಥ್ಯಾಂಕ್ಸ್ ಹೇಳಿದ್ದಾರೆ. ಚಿತ್ರದ ಗೆಲುವಿಗಾಗಿ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
‘ನನ್ನ ಅಭಿಮಾನಿಗಳಿಗೆಲ್ಲ ಹಾಯ್.. ಈ ದೊಡ್ಡ ಯಶಸ್ಸಿಗಾಗಿ ಧನ್ಯವಾದಗಳು. ನೀವು ಇಲ್ಲದಿದ್ದರೆ ನಾನು ಜೀರೋ. 5 ವರ್ಷಗಳ ಕಾಲ ಕಷ್ಟಪಟ್ಟಿರುವ ನಾಗ್ ಅಶ್ವಿನ್ ಅವರಿಗೆ ಕೂಡ ಥ್ಯಾಂಕ್ಸ್. ಇಂಥ ದೊಡ್ಡ ಸಿನಿಮಾ ಮಾಡಿದ್ದಕ್ಕಾಗಿ ನಿರ್ಮಾಪಕ ಅಶ್ವಿನಿ ದತ್ ಅವರಿಗೆ ನಾವು ಧನ್ಯವಾದ ಹೇಳಲೇಬೇಕು. ಅವರು ಅತಿ ಧೈರ್ಯವಂತ ನಿರ್ಮಾಪಕರು. ಅವರು ಖರ್ಚು ಮಾಡಿದ್ದನ್ನು ನೋಡಿ ನನಗೇ ಚಿಂತೆ ಆಗಿತ್ತು’ ಎಂದು ಪ್ರಭಾಸ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಮೇಲೆ ದಿಶಾ ಪಟಾನಿಗೆ ಪ್ರೀತಿ? ನಟಿಯ ಹೊಸ ಟ್ಯಾಟೂ ನೋಡಿ ಜನರಿಗೆ ಅಚ್ಚರಿ
‘ಸರ್ ನೀವು ತುಂಬ ಖರ್ಚು ಮಾಡುತ್ತಿದ್ದೀರಿ ಅಂತ ಅಶ್ವಿನಿ ದತ್ ಅವರಿಗೆ ನಾನು ಹೇಳಿದ್ದೆ. ಅದಕ್ಕೆ ಉತ್ತರಿಸಿದ್ದ ಅವರು, ಇಲ್ಲ.. ಇಲ್ಲ.. ನಾವು ದೊಡ್ಡ ಹಿಟ್ ನೀಡುತ್ತೇವೆ, ಚಿಂತೆ ಬೇಡ, ನಾವು ಅತ್ಯುತ್ತಮ ಗುಣಮಟ್ಟದ ಸಿನಿಮಾ ಮಾಡಬೇಕು ಅಂತ ಅವರು ಹೇಳಿದ್ದರು. ಸ್ವಪ್ನಾ ಮತ್ತು ಪ್ರಿಯಾಂಕಾ ಅವರಿಗೂ ಧನ್ಯವಾದಗಳು. ಈ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ನಾನು ಥ್ಯಾಂಕ್ಸ್ ಹೇಳಬೇಕು. ಯಾಕೆಂದರೆ ಭಾರತೀಯ ಚಿತ್ರರಂಗದ ದಿಗ್ಗಜರ ಜೊತೆ ಸಿನಿಮಾ ಮಾಡಲು ನನಗೆ ಅವಕಾಶ ಮಾಡಿಕೊಟ್ಟರು’ ಎಂದಿದ್ದಾರೆ ಪ್ರಭಾಸ್.
‘ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಅವರನ್ನು ನೋಡಿಕೊಂಡು ನಾವೆಲ್ಲ ಬೆಳೆದವರು. ಅವರಿಂದ ನಾವು ಸಾಕಷ್ಟು ಕಲಿತಿದ್ದೇವೆ. ಅತಿ ಸುಂದರಿ ದೀಪಿಕಾ ಪಡುಕೋಣೆ ಅವರಿಗೂ ಧನ್ಯವಾದ. ನಾವು ಇದಕ್ಕಿಂತ ದೊಡ್ಡದಾದ ಪಾರ್ಟ್ 2 ಮಾಡುತ್ತೇವೆ. ನನ್ನ ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದ. ನಿಮ್ಮೆಲ್ಲರನ್ನು ನಾನು ಪ್ರೀತಿಸುತ್ತೇನೆ’ ಎಂದು ಪ್ರಭಾಸ್ ಅವರು ಈ ವಿಡಿಯೋ ಪೂರ್ಣಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.