
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಇದೇ ವರ್ಷದ ಆರಂಭದಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಬಳಿಕ ಆಗಸ್ಟ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡಿತು. ಆದರೆ ಈಗ ಸ್ವತಃ ನಿರ್ಮಾಪರೇ ಹೇಳಿರುವಂತೆ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ, ಈ ವರ್ಷ ‘ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗುವುದೇ ಅನುಮಾನ ಎನ್ನುವಂತಿದೆ ನಿರ್ಮಾಪಕರ ಮಾತುಗಳು.
ಪ್ರಭಾಸ್ ನಟಿಸಿರು ಹಾರರ್ ಕಾಮಿಡಿ ಸಿನಿಮಾ ‘ದಿ ರಾಜಾ ಸಾಬ್’. ಸಿನಿಮಾನಲ್ಲಿ ಪ್ರಭಾಸ್ ಎರಡು ಶೇಡ್ಗಳಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಹಾರರ್, ಕಾಮಿಡಿ ಜೊತೆಗೆ ಲವ್ ಸ್ಟೋರಿಯೂ ಸಹ ಇರಲಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಗಮನ ಸೆಳೆದಿದೆ. ಆದರೆ ಸಿನಿಮಾದ ಬಿಡುಗಡೆ ಮಾತ್ರ ತಡವಾಗುತ್ತಲೇ ಸಾಗುತ್ತಿದೆ. ಮೊದಲಿಗೆ ವಿಎಫ್ಎಕ್ಸ್ ಕಾರಣಕ್ಕೆ ತಡವಾಯ್ತು. ಆ ನಂತರ ಸಿನಿಮಾದ ಕೆಲವು ಭಾಗಗಳನ್ನು ಮತ್ತೆ ಚಿತ್ರೀಕರಣ ಮಾಡಿ, ಮತ್ತೆ ವಿಎಫ್ಎಕ್ಸ್ ಕೆಲಸ ಮಾಡಲಾಯ್ತು. ಈಗ ಮತ್ತೆ ಸಿನಿಮಾ ಬಿಡುಗಡೆ ಮುಂದೂಡಿಕೆ ಆಗಿದೆ.
ಸಿನಿಮಾದ ನಿರ್ಮಾಪಕ ಟಿಜಿ ವಿಶ್ವಪ್ರಸಾದ್ ಹೇಳಿರುವಂತೆ, ‘ಹಲವು ಮಂದಿ ‘ದಿ ರಾಜಾ ಸಾಬ್’ ಸಿನಿಮಾ ಮುಂದಿನ ಸಂಕ್ರಾಂತಿಗೆ ಬಿಡುಗಡೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ಅಭಿಮಾನಿಗಳು ಸಹ ಅದನ್ನೇ ಕೋರಿಕೊಳ್ಳುತ್ತಿದ್ದಾರೆ, ತೆಲುಗು ಸಿನಿಮಾ ವ್ಯವಹಾರ ಪರಿಣಿತರೂ ಸಹ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ’ ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ‘ದಿ ರಾಜಾ ಸಾಬ್’ ಸಿನಿಮಾ ಅನ್ನು ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡುವ ಉಮೇದನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:‘ಆದಿಪುರುಷ್’ ಚೆನ್ನಾಗಿಲ್ಲ ಎಂದಾಗ ಪ್ರಭಾಸ್ ಹೇಳಿದ್ದೇನು?
ಮಾತು ಮುಂದುವರೆಸಿ, ‘ಜನವರಿ 9 ರ ಸಂಕ್ರಾಂತಿ ಸಮಯಕ್ಕೆ ಬಾಲಿವುಡ್ ನಟ ರಣ್ವೀರ್ ಸಿಂಗ್ ನಟನೆಯ ‘ದುರಂಧರ್’ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ಬಾಲಿವುಡ್ನ ಕೆಲವು ಮಂದಿ, ‘ದಿ ರಾಜಾ ಸಾಬ್’ ಸಿನಿಮಾ ಡಿಸೆಂಬರ್ 5ಕ್ಕೆ ಬಿಡುಗಡೆ ಮಾಡಬೇಕು ಎಂಬ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಇನ್ನೂ ಯಾವುದೇ ದಿನಾಂಕ ನಿಗದಿಪಡಿಸಿಕೊಂಡಿಲ್ಲ. ಸಿನಿಮಾದ ಕೆಲಸ ಅಕ್ಟೋಬರ್ ತಿಂಗಳಲ್ಲಿ ಪೂರ್ಣವಾಗಲಿದ್ದು, ಆ ವೇಳೆಗೆ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಲಿದ್ದೇವೆ’ ಎಂದಿದ್ದಾರೆ.
ಸಿನಿಮಾದ ಬಗ್ಗೆ ಮತ್ತೊಂದು ಪ್ರಮುಖ ಅಂಶವನ್ನು ಬಹಿರಂಗಪಡಿಸಿರುವ ನಿರ್ಮಾಪಕ ಟಿಜಿ ವಿಶ್ವಪ್ರಸಾದ್, ‘ದಿ ರಾಜಾ ಸಾಬ್’ ಸಿನಿಮಾದ ಎರಡನೇ ಭಾಗವೂ ಬರಲಿದೆ. ಆದರೆ ಅದು ಇದೇ ಕತೆಯ ಮುಂದುವರೆದ ಭಾಗ ಆಗಿರುವುದಿಲ್ಲ ಆದರೆ ಇದೇ ಸಿನಿಮ್ಯಾಟಿಕ್ ಯೂನಿವರ್ಸ್ನ ಭಾಗ ಆಗಿರಲಿದೆ. ಸಿನಿಮಾದ ಫುಟೇಜ್ ನಾಲ್ಕು ಗಂಟೆ ಮೂರು ನಿಮಿಷ ಇದ್ದು, ಅದನ್ನು ಸರಿಯಾಗಿ ಎಡಿಟ್ ಮಾಡಿ ಮೂರು ಗಂಟೆಗೆ ಇಳಿಸಲಾಗುತ್ತದೆ. ಕೆಲವು ದೃಶ್ಯಗಳನ್ನು ಮುಂದಿನ ಭಾಗದ ಸಿನಿಮಾನಲ್ಲಿ ಬಳಸಿಕೊಳ್ಳಲಾಗುತ್ತದೆ’ ಎಂದಿದ್ದಾರೆ.
‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಆಗಿದ್ದು, ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ನಟಿಸಿದ್ದಾರೆ. ಸಿನಿಮಾ ಅನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ