ಚಿತ್ರರಂಗದಲ್ಲಿ ನಟ ನಟಿಯರು ಚಿತ್ರೀಕರಣದ ಸಂದರ್ಭದಲ್ಲಿ ಹೇಗೆ ವರ್ತಿಸಿದ್ದರು ಎಂಬುದು ಬಹಳಷ್ಟು ಚರ್ಚೆಗೊಳಪಡುತ್ತವೆ. ಕೆಲವೊಮ್ಮೆ ಈ ಕುರಿತು ಗಾಸಿಪ್ ಗಳೂ ಹರಿದಾಡುತ್ತವೆ. ಬಹುನಿರೀಕ್ಷಿತ, ಬಿಗ್ ಬಜೆಟ್ ಚಿತ್ರವಾದ ‘ರಾಧೆ ಶ್ಯಾಮ್'(Radhe Shyam) ಚಿತ್ರವೂ ಸದ್ಯ ಇದೇ ಕಾರಣಕ್ಕೆ ಸುದ್ದಿಯಲ್ಲಿತ್ತು. ಚಿತ್ರದ ನಾಯಕ ನಟಿ ಪೂಜಾ ಹೆಗ್ಡೆ(Pooja Hegde) ನಡವಳಿಕೆಯಿಂದಾಗಿ ನಟ ಪ್ರಭಾಸ್(Prabhas) ಕಿರಿಕಿರಿಗೊಂಡಿದ್ದರು ಎಂಬುದಾಗಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಆರೋಪಕ್ಕೆ ಚಿತ್ರತಂಡ ಸ್ಪಷ್ಟನೆ ನೀಡಿದೆ.
ನಿರ್ಮಾಣ ಸಂಸ್ಥೆಯಾದ ಯುವಿ ಕ್ರಿಯೇಷನ್ಸ್(UV Creations) ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಪೂಜಾ ಹೆಗ್ಡೆ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿದೆ. ಜೊತೆಗೆ ಅಂತಹ ಸುದ್ದಿಗಳಲ್ಲಿ ಹುರುಳಿಲ್ಲ ಎಂದಿದೆ. ಈ ಹಿಂದೆ ಸುದ್ದಿಯಾಗಿದ್ದ ಪ್ರಕಾರ, ಪೂಜಾ ಸೆಟ್ಗೆ ತಡವಾಗಿ ಬರುತ್ತಾರೆ. ಇದರಿಂದ ಪ್ರಭಾಸ್ ಕುಪಿತಗೊಂಡಿದ್ದರು. ಹಾಗಾಗಿಯೇ ಈರ್ವರೂ ಪರಸ್ಪರ ಮುಖಕ್ಕೆ ಮುಖ ಕೊಟ್ಟು ಮಾತನ್ನೂ ಆಡುತ್ತಿರಲಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಅದಕ್ಕೆ ನಿರ್ಮಾಣ ಸಂಸ್ಥೆ ತಕ್ಕ ಉತ್ತರ ನೀಡಿದೆ.
ಪೂಜಾ ಹೆಗ್ಡೆ ಮೇಲಿರುವ ಎಲ್ಲಾ ಅಪವಾದಗಳನ್ನು ತಿರಸ್ಕರಿಸಿರುವ ನಿರ್ಮಾಣ ಸಂಸ್ಥೆ, ‘ಅವರು ಸಮಯಕ್ಕೆ ಸರಿಯಾಗಿ ಬರುತ್ತಿದ್ದರು. ಬಹಳ ಪ್ರೊಫೆಶನಲ್ ಆಗಿ ಚಿತ್ರೀಕರಣದ ಸಂದರ್ಭದಲ್ಲಿ ನಡೆದುಕೊಂಡಿದ್ದಾರೆ’ ಎಂದು ಹೇಳಿದೆ. ಅಲ್ಲದೇ, ‘ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಪರಸ್ಪರರ ಮೇಲೆ ಬಹಳ ಗೌರವ ಹೊಂದಿದ್ದರು. ಭಿನ್ನಾಭಿಪ್ರಾಯದ ವರದಿಗಳು ಸಂಪೂರ್ಣ ಆಧಾರ ರಹಿತವಾದದ್ದು’ ಎಂದು ಯುವಿ ಕ್ರಿಯೇಷನ್ಸ್ ತಿಳಿಸಿದೆ. ಈ ಮೂಲಕ ಎದ್ದಿದ್ದ ಗೊಂದಲವನ್ನು ಪರಿಹರಿಸುವ ಪ್ರಯತ್ನವನ್ನು ಮಾಡಿದೆ.
‘ರಾಧೆ ಶ್ಯಾಮ್’ ಚಿತ್ರದ ಮೂಲಕ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಯುವಿ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ರೊಮ್ಯಾಂಟಿಕ್ ಡ್ರಾಮಾ ಮಾದರಿಯ ಈ ಚಿತ್ರ ಈ ವರ್ಷ ಜುಲೈನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದು, ಮುಂದಿನ ವರ್ಷ ಜನವರಿ 14 ರಂದು ಬಿಡುಗಡೆಯಾಗಲಿದೆ. ಒಟ್ಟು ನಾಲ್ಕು ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ.
ನಟ ಪ್ರಭಾಸ್ ಬತ್ತಳಿಕೆಯಲ್ಲಿ ‘ಸಲಾರ್’, ‘ಆದಿಪುರುಷ್’ ಹಾಗೂ ‘ಪ್ರಾಜೆಕ್ಟ್- ಕೆ’ ಚಿತ್ರಗಳಿವೆ. ಇತ್ತ ಪೂಜಾ ಹೆಗ್ಡೆ ಟಾಲಿವುಡ್ ಜೊತೆಜೊತೆಗೆ ಬಾಲಿವುಡ್ನಲ್ಲೂ ಸಕ್ರಿಯರಾಗಿದ್ದಾರೆ. ಅವರು ‘ಸರ್ಕಸ್’, ‘ಆಚಾರ್ಯ’, ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಹಾಗೂ ‘ಕಭಿ ಈದ್ ಕಭಿ ದಿವಾಲಿ’ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
Deepika Padukone: ದೀಪಿಕಾ- ಸಿಂಧು ಬ್ಯಾಡ್ಮಿಂಟನ್ ಆಟ ಬಲು ಜೋರು; ಬಯೋಪಿಕ್ ಮಾಡ್ತೀರಾ ಎಂದು ಪ್ರಶ್ನಿಸಿದ ಫ್ಯಾನ್ಸ್
Salman Khan: ಬಿಗ್ಬಾಸ್ 15ಕ್ಕೆ ಸಲ್ಮಾನ್ ಪಡೆಯೋ ಸಂಭಾವನೆ ನೂರಿನ್ನೂರು ಕೋಟಿಯಲ್ಲ; ಬರೋಬ್ಬರಿ ₹ 350 ಕೋಟಿ!
ಅಳುಮುಖ ಹೊತ್ತುಕೊಂಡು ಮನೆಗೆ ಬಂದ ರಾಜ್ ಕುಂದ್ರಾ: ಶಿಲ್ಪಾ ಶೆಟ್ಟಿ ಪತಿಗೆ ಸದ್ಯಕ್ಕೆ ರಿಲೀಫ್
(Prabhas starring Radhe Shyam production house UV creations clarify on rumour of Pooja Hegde’s annoying behavior on sets)