ಪ್ರಭಾಸ್ (Prabhas) ಮತ್ತೊಂದು ಮೆಗಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಭಾರತದ ಈವರೆಗಿನ ಅತಿದೊಡ್ಡ ಬಜೆಟ್ ಸಿನಿಮಾ ಎಂದೇ ಹೇಳಲಾಗುತ್ತಿರುವ ಪ್ರಭಾಸ್ ನಟನೆಯ ಆದಿಪುರುಷ್ (Adipurush) ಸಿನಿಮಾ ಬಿಡುಗಡೆ ದಿನಾಂಕ ಸನಿಹ ಬಂದಿದೆ. ದೇಶವೆಲ್ಲ ಸುತ್ತಿ ಸಂದರ್ಶನಗಳನ್ನು ನೀಡಿ ಸಿನಿಮಾ ಪ್ರಚಾರ ಮಾಡುವ ಬದಲಿಗೆ ಒಂದು ಭರ್ಜರಿ ಪ್ರೀ ರಿಲೀಸ್ ಇವೆಂಟ್ ಮಾತ್ರವನ್ನಷ್ಟೆ ಮಾಡುವ ನಿರ್ಧಾರ ಮಾಡಿದೆ ಚಿತ್ರತಂಡ. ತಿರುಪತಿಯಲ್ಲಿ (Tirupathi) ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಈಗಾಗಲೇ ದೇಶದ ಹಲವು ರಾಜ್ಯಗಳಿಂದ ಅಭಿಮಾನಿಗಳು ತಿರುಪತಿಯತ್ತ ಸಾಗುತ್ತಿದ್ದಾರೆ.
ಜೂನ್ 6 ರಂದು ತಿರುಪತಿಯಲ್ಲಿ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು. ಭಾರಿ ಅದ್ಧೂರಿಯಾಗಿ ನಡೆಯಲಿರುವ ಈ ಇವೆಂಟ್ಗೆ ಸಕಲ ಸಿದ್ಧತೆ ನಡೆದಿದೆ. ಆದಿಪುರುಷ್ ಸಿನಿಮಾ ಬಗ್ಗೆ ತೀವ್ರ ನಿರೀಕ್ಷೆ ಇಟ್ಟುಕೊಂಡಿರುವ ನಟ ಪ್ರಭಾಸ್, ಪ್ರೀ ರಿಲೀಸ್ ಇವೆಂಟ್ ಯಶಸ್ವಿಯಾಗಬೇಕು ಎಂದು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದ್ದಾರೆ. ನಿರ್ದೇಶಕ ಓಂ ರಾವತ್ ಹಾಗೂ ಇನ್ನಿತರೆ ಮಂದಿಯ ಜೊತೆ ಪ್ರಭಾಸ್ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಿರುಮಲ ಆಡಳಿತ ಮಂಡಳಿ ಸದಸ್ಯರು ಪ್ರಭಾಸ್ ಹಾಗೂ ಆದಿಪುರುಷ್ ಚಿತ್ರತಂಡವನ್ನು ಸನ್ಮಾನ ಮಾಡಿದೆ.
ತಿರುಪತಿಯ ಶ್ರೀ ವೆಂಕಟೇಶ್ವರ್ ವಿಶ್ವವಿದ್ಯಾಲಯದ ದೊಡ್ಡ ಮೈದಾನದಲ್ಲಿ ಭಾರಿ ದೊಡ್ಡ ವೇದಿಕೆಯನ್ನು ಹಾಕಲಾಗಿದ್ದು ಹಲವು ರಾಜಕೀಯ ಪ್ರಮುಖರು, ತೆಲುಗು, ತಮಿಳು, ಸ್ಯಾಂಡಲ್ವುಡ್ನ ಕೆಲವು ಹಿರಿಯ ನಟರು ಸಹ ಇವೆಂಟ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರ ಜೊತೆಗೆ ತಿರುಮಲದ ಚಿನ್ನ ಜೀಯಾರ್ ಸ್ವಾಮಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ.
ಆದಿಪುರುಷ್ ಸಿನಿಮಾ ಜೂನ್ 16 ರಂದು ಭಾರತ ಹಾಗೂ ವಿಶ್ವದ ಇತರೆ ರಾಷ್ಟ್ರಗಳಲ್ಲಿ ಬಿಡುಗಡೆ ಆಗಲಿದೆ. ಆದಿಪುರುಷ್ ಸಿನಿಮಾವು ರಾಮಾಯಣದ ಕತೆಯನ್ನು ಹೊಂದಿದ್ದು ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ನಟ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮೊದಲು ಆದಿಪುರುಷ್ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದಾಗ ಸಿನಿಮಾದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ರಾಮಾಯಣದ ಕತೆಯನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿತ್ತು. ಸಿನಿಮಾದಲ್ಲಿ ಬಳಕೆಯಾಗಿದ್ದ ಕಳಪೆ ವಿಎಫ್ಎಕ್ಸ್ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. ಹಲವು ಕಡೆ ಕೇಸುಗಳ ಸಹ ದಾಖಲಾಗಿದ್ದವು. ಆದರೆ ಎರಡನೇ ಟೀಸರ್ ಬಿಡುಗಡೆ ವೇಳೆಗೆ ತಪ್ಪುಗಳನ್ನು ತಿದ್ದುಕೊಂಡಿದ್ದ ಚಿತ್ರತಂಡ ವಿಎಫ್ಎಕ್ಸ್ನಲ್ಲಿ ಹಾಗೂ ಕಲರ್ ಗ್ರೇಡಿಂಗ್ನಲ್ಲಿ ಬದಲಾವಣೆ ಮಾಡಿತ್ತು. ಹಾಗಾಗಿ ಎರಡನೇ ಟೀಸರ್ ಜನರಿಗೆ ಹೆಚ್ಚು ಇಷ್ಟವಾಗಿ ಕೆಲವೇ ಗಂಟೆಗಳಲ್ಲಿ ಅತ್ಯಧಿಕ ವೀಕ್ಷಿಸಲಾದ ಟೀಸರ್ ಎನಿಸಿಕೊಂಡಿತು.
ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ನಟಿಸಿರುವ ಎರಡು ಸಿನಿಮಾಗಳು ಬಿಡುಗಡೆ ಆಗಿ ಫ್ಲಾಪ್ ಆಗಿವೆ. ಹಾಗಾಗಿ ಒಂದು ದೊಡ್ಡ ಯಶಸ್ವಿ ಸಿನಿಮಾಕ್ಕಾಗಿ ಪ್ರಭಾಸ್ ಕಾಯುತ್ತಿದ್ದಾರೆ. ಪ್ರಭಾಸ್ರ ಗೆಲುವಿನ ಕೊರತೆಯನ್ನು ಆದಿಪುರುಷ್ ಸಿನಿಮಾ ನೀಗಿಸುತ್ತದೆಯೇ ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ