MAA election ಸೋತ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಕಾಶ್​ ರಾಜ್​

| Updated By: ರಾಜೇಶ್ ದುಗ್ಗುಮನೆ

Updated on: Oct 11, 2021 | 1:46 PM

ಪ್ರಕಾಶ್​ ರೈ ಅವರು ಮೂಲತಃ ತೆಲುಗು ನಟ ಅಲ್ಲ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತಪಡಿಸಲಾಗಿತ್ತು. ಅವರು ಹೊರಗಿನವರು ಎನ್ನುವ ರೀತಿಯಲ್ಲೇ ಮೊದಲಿನಿಂದಲೂ ಬಿಂಬಿಸುತ್ತಲೇ ಬರಲಾಯಿತು

MAA election ಸೋತ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಕಾಶ್​ ರಾಜ್​
ಪ್ರಕಾಶ್​ ರೈ
Follow us on

ಭಾರೀ ಹೈಪ್​ ಪಡೆದುಕೊಂಡಿದ್ದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ (MAA) ಚುನಾವಣೆಯಲ್ಲಿ ವಿಚ್ಣು ಮಂಚು ಗೆದ್ದಿದ್ದಾರೆ. ಈ ಮೂಲಕ ಬಹುಭಾಷಾ ನಟ ಪ್ರಕಾಶ್​ ರಾಜ್​ಗೆ ಸೋಲಾಗಿದೆ. ಈ ಸೋಲನ್ನು ಅವರು ಸ್ವೀಕರಿಸುವುದರ ಜತೆಗೆ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಅವರು ಓಪನ್​ ಆಗಿ ಹೇಳಿಕೆ ನೀಡಿದ್ದಾರೆ.

ಪ್ರಕಾಶ್​ ರೈ ಅವರು ಮೂಲತಃ ತೆಲುಗು ನಟ ಅಲ್ಲ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತಪಡಿಸಲಾಗಿತ್ತು. ಅವರು ತೆಲುಗು ಚಿತ್ರರಂಗಕ್ಕೆ ಕೇವಲ ಅತಿಥಿ. ಅವರು ಹೊರಗಿನವರು ಎನ್ನುವ ರೀತಿಯಲ್ಲೇ ಮೊದಲಿನಿಂದಲೂ ಬಿಂಬಿಸುತ್ತಲೇ ಬರಲಾಯಿತು. ಈ ತಂತ್ರ ಯಶಸ್ವಿಯಾಗಿದೆ. ಪ್ರಕಾಶ್​ ರೈ ಸೋಲೋಕೆ ಇದು ಪ್ರಮುಖ ಕಾರಣವಾಗಿದೆ. ವಿಷ್ಣು ಮಂಚು 381 ಮತ ಗಳಿಸಿದರೆ ಪ್ರಕಾಶ್ ರಾಜ್ 274 ಮತ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭರ್ಜರಿ ಅಂತರದಿಂದ ವಿಷ್ಣು ಗೆದ್ದರು. ಇದು ಪ್ರಕಾಶ್​ ರಾಜ್​ಗೆ ಪಾಠವಾಗಿದೆ. ಈ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ.

‘ನಾನು ತೆಲುಗು ಚಿತ್ರರಂಗದವನಲ್ಲ ಎಂದು ಹೇಳುತ್ತಲೇ ಬಂದರು ಮತ್ತು ಮಾ ಪೀಠಕ್ಕೆ ತೆಲುಗು ಹಿನ್ನೆಲೆ ಹೊಂದಿರುವ ವ್ಯಕ್ತಿಯನ್ನೇ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು. ನಾನು ಅತಿಥಿ ಎಂದು ಜನರು ಹೇಳಿದ್ದಾರೆ. ನಾನು ಹಾಗೆಯೇ ಇರುತ್ತೇನೆ. ವಿಷ್ಣು ಮಂಚು ಗೆಲುವನ್ನು ಸ್ವಾಗತಿಸುತ್ತೇನೆ. ನಾನು ಇನ್ನುಮುಂದೆ ಮಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ. ನನ್ನ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ’ ಎಂದಿದ್ದಾರೆ. ಇದರ ಜತೆಗೆ ಮಾ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.

ಪ್ರಕಾಶ್​ ರಾಜ್​ ಅವರು ಮಾ ಜತೆ 22 ವರ್ಷದ ನಂಟು ಹೊಂದಿದ್ದಾರೆ. ಆದರೆ, ಅವರು ಚುನಾವಣೆಗೆ ನಿಂತ ನಂತರದಲ್ಲಿ ಹೊರಗಿನವರು vs ತೆಲುಗು ನಾಡಿನವರು ಎನ್ನುವ ಚರ್ಚೆ ಆರಂಭವಾಗಿತ್ತು. ಇದು ಅವರಿಗೆ ಬೇಸರ ತರಿಸಿದೆ. ಈ ಕಾರಣಕ್ಕೆ ಮಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಾ ಚುನಾವಣೆ ಭಾನುವಾರ (ಅಕ್ಟೋಬರ್​ 10) ನಡೆದಿತ್ತು. ಅಂದೇ ರಾತ್ರಿ ಫಲಿತಾಂಶ ಹೊರ ಬಿದ್ದಿತ್ತು.

ಇದನ್ನೂ ಓದಿ: MAA Election Result: ಕನ್ನಡದ ಪ್ರಕಾಶ್​ ರಾಜ್​ಗೆ ಮುಖಭಂಗ; ತೆಲುಗು ನಟ ವಿಷ್ಣು ಮಂಚುಗೆ ಜಯ