
ಅನೇಕ ಸೆಲೆಬ್ರಿಟಿಗಳು ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿ ಪೇಚಿಗೆ ಸಿಲುಕಿದ್ದಾರೆ. ಸಿಐಡಿ (CID) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಲವು ನಟರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರಿಗೂ ಸಮನ್ಸ್ ನೀಡಲಾಗಿತ್ತು. ನವೆಂಬರ್ 12ರಂದು ಪ್ರಕಾಶ್ ರಾಜ್ ಅವರು ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಬೆಟ್ಟಿಂಗ್ ಆ್ಯಪ್ (Betting App) ಪ್ರಚಾರ ಮಾಡಿದ್ದಕ್ಕಾಗಿ ಅವರು ಜನರ ಬಳಿ ಕ್ಷಮೆ ಕೇಳಿದರು.
ಸಿಐಡಿ ಕಚೇರಿಯಿಂದ ಹೊರಬಂದ ಪ್ರಕಾಶ್ ರಾಜ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ‘2016ರಲ್ಲಿ ನಾನು ಒಂದು ಗೇಮಿಂಗ್ ಆ್ಯಪ್ ಪ್ರಚಾರ ಮಾಡಿದ್ದೆ. ಆದರೆ ನಂತರ 2017ರಲ್ಲಿ ಅದು ಬೆಟ್ಟಿಂಗ್ ಆ್ಯಪ್ ಆಗಿ ಬದಲಾಯಿತು. ನನ್ನ ಒಪ್ಪಂದ ಕ್ಯಾನ್ಸಲ್ ಆಯಿತು. ನಾನು ಗೊತ್ತಿದ್ದು ಮಾಡಿದ್ದರೂ ಗೊತ್ತಿಲ್ಲದೇ ಮಾಡಿದ್ದರೂ ಇದು ತಪ್ಪು. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತನಿಖೆಗೆ ಪ್ರಕಾಶ್ ರಾಜ್ ಅವರು ಪೂರ್ತಿ ಸಹಕಾರ ನೀಡಿದ್ದಾರೆ. ಆ ಕುರಿತು ಕೂಡ ಅವರು ವಿವರಿಸಿದ್ದಾರೆ. ‘ನಾನು ಎಲ್ಲ ದಾಖಲೆಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದೇನೆ. ಬ್ಯಾಂಕ್ ಮಾಹಿತಿ ಮತ್ತು ಸಂಬಂಧಿಸಿದ ಎಲ್ಲ ವಿವರಗಳನ್ನು ತನಿಖಾ ತಂಡಕ್ಕೆ ನೀಡಿದ್ದೇನೆ’ ಎಂದು ಹೇಳಿದ್ದಾರೆ ಪ್ರಕಾಶ್ ರಾಜ್. ಯುವ ಜನರು ಬೆಟ್ಟಿಂಗ್ ಜಾಲಕ್ಕೆ ಸಿಲುಕಿಕೊಳ್ಳುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
‘ಹಲವು ಯುವಕರು ಇದರಿಂದಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಅವರ ಕುಟುಂಬದವರು ತೊಂದರೆ ಅನುಭವಿಸುವಂತಾಗಿದೆ. ಕಷ್ಟಪಟ್ಟು ದುಡಿದರೆ ಮಾತ್ರ ಹಣ ಮತ್ತು ಯಶಸ್ಸು ಸಿಗುತ್ತದೆ. ಆ್ಯಪ್ ವಿಷಯದಲ್ಲಿ ನನ್ನನ್ನು ದಯವಿಟ್ಟು ಕ್ಷಮಿಸಿ. ನಾನು ಎಂದಿಗೂ ಈ ರೀತಿಯ ತಪ್ಪನ್ನು ಮತ್ತೆ ಮಾಡುವುದಿಲ್ಲ ಅಂತ ಭರವಸೆ ನೀಡುತ್ತೇನೆ’ ಎಂದಿದ್ದಾರೆ ಪ್ರಕಾಶ್ ರಾಜ್.
ಇದನ್ನೂ ಓದಿ: ಪ್ರಕಾಶ್ ರಾಜ್ ವಿಚ್ಛೇದನಕ್ಕೆ ಕಾರಣವಾದ ವಿಚಾರವೇನು? ಜಯಂತಿ ಕಣ್ಣಪ್ಪ ವಿವರಿಸಿದ್ದು ಹೀಗೆ
ಅಕ್ರಮ ಬೆಟ್ಟಿಂಗ್ ಮತ್ತು ಆನ್ಲೈನ್ ಬೆಟ್ಟಿಂಗ್ ಜಾಲದ ಬಗ್ಗೆ ತನಿಖೆ ನಡೆಸಲು ತೆಲಂಗಾಣ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಬೆಟ್ಟಿಂಗ್ ಹಾವಳಿಗೆ ಸಿಲುಕಿ ಅನೇಕ ಯುವಕರು ಜೀವನ ಹಾಳು ಮಾಡಿಕೊಂಡಿರುವ ಬಗ್ಗೆ ಪೊಲೀಸ್ ದೂರು ಹೆಚ್ಚಾದ ಬಳಿಕ ಸರ್ಕಾರವು ತನಿಖೆ ನಡೆಸಲು ಮುಂದಾಯಿತು. ಇದಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.