ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚಿದ ‘ಪ್ರಣಯ ಪಯಣ’ ಗೀತೆ; ಡಿ.27ಕ್ಕೆ ಬಿಡುಗಡೆ
ಅರ್ಜುನ್ ಕಿಶೋರ್ ಚಂದ್ರ ಅವರ ಹೊಸ ಹಾಡನ್ನು ಬಿಡುಗಡೆ ಮಾಡಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದಾಗಿದ್ದಾರೆ. ಇದೇ ಶನಿವಾರದಿಂದ (ಡಿ.27) ‘ಪಿಆರ್‌ಕೆ ಆಡಿಯೋ’ ಯೂಟ್ಯೂಬ್ ಚಾನೆಲ್ ಮೂಲಕ ಈ ವಿಡಿಯೋ ಸಾಂಗ್ ವೀಕ್ಷಿಸಬಹುದು. ಅರ್ಜುನ್ ಕಿಶೋರ್ ಚಂದ್ರ ಮತ್ತು ಎಡೆಲ್ ಆಶ್ಲಿಂಗ್ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಹೊಸ ಪ್ರತಿಭೆಗಳಿಗೆ ಪುನೀತ್ ರಾಜ್‌ಕುಮಾರ್ ಅವರು ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ಈಗ ಆ ಕೆಲಸವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಮಾಡುತ್ತಿದ್ದಾರೆ. ‘ಪಿಆರ್‌ಕೆ ಪ್ರೊಡಕ್ಷನ್ಸ್’ ಮತ್ತು ‘ಪಿಆರ್‌ಕೆ ಆಡಿಯೋ’ ಕಂಪನಿ ಮೂಲಕ ಹೊಸಬರ ಬೆನ್ನುತಟ್ಟುತ್ತಿದ್ದಾರೆ. ಅದಕ್ಕೆ ಹೊಸ ಉದಾಹರಣೆ ಇಲ್ಲಿದೆ. ಅರ್ಜುನ್ ಕಿಶೋರ್ ಚಂದ್ರ ಅವರು ಸಿದ್ಧಪಡಿಸಿದ ಹೊಸ ವಿಡಿಯೋ ಸಾಂಗ್ ಅನ್ನು ‘ಪಿಆರ್‌ಕೆ ಆಡಿಯೋ’ (PRK Audio) ಮೂಲಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ.
ಅರ್ಜುನ್ ಕಿಶೋರ್ ಚಂದ್ರ ಅವರು ‘ಲೈಫ್ 360’ ಸಿನಿಮಾದಲ್ಲಿ ನಾಯಕನಾಗಿ ನಟಿಸಿ, ನಿರ್ದೇಶನ ಕೂಡ ಮಾಡಿದ್ದರು. ಬಳಿಕ ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದರು. ಆದರೂ ಕೂಡ ಅವರ ಮನಸ್ಸು ಮಾತ್ರ ಬಣ್ಣದ ಲೋಕದತ್ತ ಸೆಳೆಯುತ್ತಿತ್ತು. ಬಿಡುವಿನ ಸಮಯದಲ್ಲಿ ಏನಾದರೂ ಮಾಡಬೇಕು ಎಂಬ ತುಡಿತ ಅವರಲ್ಲಿ ಇತ್ತು. ಅದರ ಫಲವಾಗಿ ಹೊಸ ಸಾಂಗ್ ಮಾಡಿದ್ದಾರೆ.
ಹೊಸ ಗೀತೆಗೆ ‘ಪ್ರಣಯ ಪಯಣ’ ಎಂದು ಶೀರ್ಷಿಕೆ ಇಡಲಾಗಿದೆ. Loving & Travelling ಎಂಬ ಅಡಿಬರಹ ಇದೆ. ಇದು 5 ನಿಮಿಷ ಅವಧಿಯ ವಿಡಿಯೋ ಸಾಂಗ್. ಅರ್ಜುನ್ ಕಿಶೋರ್ ಚಂದ್ರ ಅವರೇ ಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಮುಖ್ಯ ಭೂಮಿಕೆ ಕೂಡ ನಿಭಾಯಿಸಿದ್ದಾರೆ. ರಂಗಭೂಮಿ ನಟಿ ಎಡೆಲ್ ಆಶ್ಲಿಂಗ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
‘ಪ್ರಣಯ ಪಯಣ’ ಲಿರಿಕಲ್ ವಿಡಿಯೋ:
ಹಿರಿಯ ಉದ್ಯಮಿ ರಾಜಶೇಖರ್ ಎಸ್. ಅವರು ‘ಶ್ರೀಸಾಯಿ ಗಗನ್ ಪ್ರೊಡಕ್ಷನ್ಸ್’ ಮೂಲಕ ಹಾಡನ್ನು ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಹಾಡನ್ನು ವೀಕ್ಷಿಸಿ ಇಷ್ಟಪಟ್ಟಿದ್ದಾರೆ. ತಮ್ಮದೇ ‘ಪಿಆರ್‌ಕೆ ಆಡಿಯೋ’ ಕಂಪನಿಯಿಂದ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ನಿರ್ದೇಶಕ ಹಾಗೂ ನಿರ್ಮಾಪಕರನ್ನು ಕಚೇರಿಗೆ ಕರೆಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾರೈಕೆಯಿಂದ ಸೆಟ್ಟೇರಿತು ‘ರಕ್ಕಿ’ ಸಿನಿಮಾ
ಅಜೇಶ್ ಎಂ.ಸಿ. ಅವರು ಈ ಹಾಡಿಗೆ ಸಂಗೀತ ನೀಡಿದ್ದಾರೆ. ಟಲೋ ಕೆನಡಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಶ್ರೀಪಾದ್ ಜೋಶಿ ಅವರು ಚಿತ್ರಕಥೆ ಬರೆದಿದ್ದಾರೆ. ಸಿದ್ದಾರ್ಥ್ ಬೆಲ್‌ಮಣ್ಣು ಅವರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಅದ್ವಿಕ್-ವಿನೋದ್ ಅವರು ಸಂಕಲನ ಮಾಡಿದ್ದಾರೆ. ಅನಿಲ್‌ಕುಮಾರ್ ಕೆ. ಅವರು ಕಲರಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಐರ‍್ಲೆಂಡ್ ದೇಶದ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




