370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ

ಆಗಿರುವ ತಪ್ಪಿಗೆ ಈಗಾಗಲೇ ಪ್ರಣಿತ್ ಮೋರೆ ಕ್ಷಮೆ ಕೇಳಿದ್ದಾರೆ. ಹಾಗಿದ್ದರೂ ಕೂಡ ಜನರ ಆಕ್ರೋಶ ಕಡಿಮೆ ಆಗಿಲ್ಲ. ಹಾಗಾಗಿ ಅವರು ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ಪ್ರಣೀತ್ ಮೋರೆ ಅವರು ತಮ್ಮ ಶೋನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದರಿಂದ ಈ ವಿವಾದ ಶುರುವಾಗಿದೆ.

370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ
Pranit More
Image Credit source: instagram/maharashtrianbhau

Updated on: Jun 10, 2026 | 7:35 PM

ಸ್ಟ್ಯಾಂಡಪ್ ಕಾಮಿಡಿ ಶೋ ಒಂದರಲ್ಲಿ ಪ್ರೇಕ್ಷಕನೊಬ್ಬ ಯುವತಿಯ ಬಗ್ಗೆ ಮಾಡಿದ್ದ ಅಸಭ್ಯ ಮತ್ತು ವಿವಾದಾತ್ಮಕ ಕಾಮೆಂಟ್‌ಗೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮತ್ತು ಸೆಲೆಬ್ರಿಟಿಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದ ಪ್ರಸಿದ್ಧ ಕಾಮಿಡಿಯನ್ ಪ್ರಣಿತ್ ಮೋರೆ (Pranit More) ಇದೀಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದಾರೆ. 370 ರೂಪಾಯಿ ಬಿರಿಯಾನಿ (370 Rupees Biryani) ವಿವಾದವೇ ಇಷ್ಟಕ್ಕೆಲ್ಲ ಕಾರಣ ಆಗಿದೆ.

ಕೆಲವು ದಿನಗಳ ಹಿಂದೆ ಪ್ರಣಿತ್ ಮೋರೆ ಅವರ ಕಾಮಿಡಿ ಶೋನ ವಿಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಗುರ್ಗಾಂವ್ ಮೂಲದ 23 ವರ್ಷದ ಹಿಮಾಂಶು ಜಾಂಗ್ರಾ ಎಂಬ ಯುವಕ, ತಾನು ಇತ್ತೀಚೆಗೆ ಒಬ್ಬ ಯುವತಿಯೊಂದಿಗೆ ಡೇಟ್‌ಗೆ ಹೋಗಿದ್ದಾಗಿ ಹೇಳಿದ್ದನು. ‘ಅಲ್ಲಿ ನಾನು 370 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಕೊಡಿಸಿದೆ. ಅಷ್ಟು ಹಣ ಖರ್ಚು ಮಾಡಿದ ಮೇಲೆ ನನಗೆ ಅದಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದುಕೊಂಡೆ. ಬಿರಿಯಾನಿ ತಿಂದ ನಂತರ ಆಕೆ ಮನೆಗೆ ಬಿಡುವಂತೆ ಕೇಳಿಕೊಂಡಳು. ಆದರೆ ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ವಸೂಲಿ ಮಾಡದೆ ಬಿಡುವುದಿಲ್ಲ ಎಂದುಕೊಂಡೆ’ ಎಂದು ವೇದಿಕೆಯಲ್ಲಿದ್ದ ಪ್ರಣಿತ್ ಎದುರು ಹೇಳಿಕೊಂಡಿದ್ದನು.

ಅಷ್ಟಕ್ಕೇ ನಿಲ್ಲಿಸದ ಆತ, ಆ ಯುವತಿಯನ್ನು ತನ್ನ ರೂಮಿಗೆ ಕರೆಯುವ ಬಗ್ಗೆ ಯೋಚಿಸಿದ್ದಾಗಿ ಮತ್ತು ಆಕೆ ನಿರಾಕರಿಸಿದಾಗ ಕತ್ತಲಿರುವ ಪಾರ್ಕ್‌ಗೆ ಕರೆದುಕೊಂಡು ಹೋದ ಬಗ್ಗೆ ಅತ್ಯಂತ ಅಸಭ್ಯವಾಗಿ ವಿವರಿಸಿದ್ದನು. ಯುವತಿ ಎಷ್ಟೇ ಬೇಡವೆಂದರೂ ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾಗಿ ಆತ ಹೆಮ್ಮೆಯಿಂದ ಹೇಳಿಕೊಂಡಿದ್ದನು. ಆತ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಜನಾಕ್ರೋಶ ವ್ಯಕ್ತವಾಗಿದೆ.

ಯುವಕ ಇಷ್ಟೆಲ್ಲಾ ವಿಕೃತವಾಗಿ ಮಾತನಾಡುತ್ತಿದ್ದರೂ, ಶೋ ನಡೆಸಿಕೊಡುತ್ತಿದ್ದ ಪ್ರಣಿತ್ ಮೋರೆ ಅದನ್ನು ತಡೆಯುವ ಬದಲು ಜೋರಾಗಿ ನಕ್ಕು ಹಗುರವಾಗಿ ಪರಿಗಣಿಸಿದ್ದರು. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮಹಿಳೆಯರು ಸೇರಿದಂತೆ ಲಕ್ಷಾಂತರ ಜನರು ಆಕ್ರೋಶ ಹೊರಹಾಕಿದ್ದಾರೆ. ಎಲ್ವಿಶ್ ಯಾದವ್ ಸೇರಿದಂತೆ ಹಲವು ಪ್ರಮುಖ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಪ್ರಣಿತ್ ಮೋರೆ ಅವರ ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಒಬ್ಬ ಯುವತಿಯ ಸುರಕ್ಷತೆಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡುತ್ತಿದ್ದರೂ ಅದನ್ನು ತಡೆಯದ ಪ್ರಣಿತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಮತ್ತು ಆಕ್ರೋಶಕ್ಕೆ ಒಳಗಾದ ಹಿಮಾಂಶು ಜಾಂಗ್ರಾ ಈಗಾಗಲೇ ಕ್ಷಮೆಯಾಚಿಸಿ ತನ್ನ ಅಕೌಂಟ್‌ಗಳನ್ನು ಡಿಲೀಟ್ ಮಾಡಿದ್ದಾನೆ. ಇದೀಗ ಸುಮಾರು 3.8 ಮಿಲಿಯನ್ (38 ಲಕ್ಷ) ಫಾಲೋವರ್ಸ್ ಹೊಂದಿದ್ದ ಮುಖ್ಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರಣಿತ್ ಮೋರೆ ಕೂಡ ಡಿಆಕ್ಟಿವೇಟ್ ಮಾಡಿದ್ದಾರೆ. ಆದರೆ, ಕಾಮಿಡಿ ಕಂಟೆಂಟ್ ಹಂಚಿಕೊಳ್ಳುವ ಅವರ ಮತ್ತೊಂದು ಖಾತೆ @maharashtrianbhau ಇನ್ನೂ ಸಕ್ರಿಯವಾಗಿದೆ.

ವಿವಾದ ತಾರಕಕ್ಕೇರುತ್ತಿದ್ದಂತೆ ಪ್ರಣಿತ್ ಮೋರೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದರು. ‘ಶೋನಲ್ಲಿ ಪ್ರೇಕ್ಷಕರು ಮಾಡಿದ ಕಾಮೆಂಟ್‌ಗಳು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ. ಆ ಸಮಯದಲ್ಲಿ ಆತನ ಮಾತನ್ನು ತಡೆಯುವ ಬದಲು ನಾನು ನಕ್ಕು ಸುಮ್ಮನಾಗಿದ್ದು ನನ್ನ ತಪ್ಪು ನಿರ್ಧಾರವಾಗಿತ್ತು. ಇದೊಂದು ದೊಡ್ಡ ಪಾಠವಾಗಿದ್ದು, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us