ಸ್ಟ್ಯಾಂಡ್-ಅಪ್ ಕಾಮಿಡಿ ಶೋ: 370ರೂ. ಬಿರಿಯಾನಿ ಬದಲಾಗಿ ಆಕೆಯಿಂದ ಇನ್ನೇನೋ ಬಯಸಿದ್ದೆ ಎಂದು ಹೇಳಿ ಕೆಲಸ ಕಳೆದುಕೊಂಡ ಯುವಕ
ಸ್ಟ್ಯಾಂಡ್-ಅಪ್ ಕಾಮಿಡಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ ಯುವಕನಿಗೆ ಗುರುಗ್ರಾಮದ ಕಂಪನಿ ಗೇಟ್‌ಪಾಸ್ ನೀಡಿದೆ. 370 ರೂ. ಬಿರಿಯಾನಿ ಬದಲಾಗಿ ಲೈಂಗಿಕತೆ ನಿರೀಕ್ಷೆ ಎಂಬ ಹೇಳಿಕೆ ವೈರಲ್ ಆದ ನಂತರ, ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಕಾರ್ಪೊರೇಟ್ ವಲಯದಲ್ಲಿ ನೈತಿಕ ಮೌಲ್ಯಗಳು ಮತ್ತು ಸಾರ್ವಜನಿಕವಾಗಿ ಜವಾಬ್ದಾರಿಯುತ ನಡವಳಿಕೆಯ ಮಹತ್ವವನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ಗುರುಗ್ರಾಮ, ಜೂನ್ 10: ಕೆಲವು ಸೆಕೆಂಡುಗಳಲ್ಲಿ ತಾವು ವೈರಲ್ ಆಗಬೇಕು ಪ್ರಸಿದ್ಧಿ ಪಡೆಯಬೇಕು ಎಂದು ಸಾರ್ವಜನಿಕವಾಗಿ ಆಡುವ ಕೆಲವು ಮಾತುಗಳು ಹೇಗೆ ಇಡೀ ವೃತ್ತಿ ಜೀವನವನ್ನೇ ಬಲಿ ಪಡೆಯಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರ್ ಅವರ ಲೈವ್ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ವೇಳೆ ಮಹಿಳೆಯರ ಘನತೆಗೆ ಕುಂದುಂಟಾಗುವಂತೆ ಅಸಭ್ಯ ಕಮೆಂಟ್ ಮಾಡಿದ್ದ ಯುವಕನನ್ನು ಆತ ಕೆಲಸ ಮಾಡುತ್ತಿದ್ದ ಕಂಪನಿ ವಜಾ ಮಾಡಿರುವ ಘಟನೆ ನಡೆದಿದೆ.
ಕಾರ್ಪೊರೇಟ್ ವಲಯದಲ್ಲಿ ಮಹಿಳಾ ಉದ್ಯೋಗಿಗಳ ಗೌರವ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಂಪನಿ ತೆಗೆದುಕೊಂಡಿರುವ ಈ ಕಟ್ಟುನಿಟ್ಟಿನ ನಿರ್ಧಾರಕ್ಕೆ ಇಂಟರ್ನೆಟ್‌ನಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಏನಿದು ‘370 ರೂ. ಬಿರಿಯಾನಿ’ ವಿವಾದ? ಹಾಸ್ಯನಟ ಪ್ರಣೀತ್ ಮೋರ್ ಅವರ ಲೈವ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ಒಂದು ಭಾಗವಿತ್ತು. ಈ ವೇಳೆ ಮೈಕ್ ಪಡೆದ ಗುರುಗ್ರಾಮದ ಈ ಯುವಕ, ತಾನು ಇತ್ತೀಚೆಗೆ ಒಬ್ಬ ಹುಡುಗಿಯೊಂದಿಗೆ ಡೇಟಿಂಗ್‌ಗೆ ಹೋಗಿದ್ದ ಕಥೆಯನ್ನು ವಿವರಿಸಿದ್ದಾನೆ. ಅಲ್ಲಿ ಚಿಕನ್ ಬಿರಿಯಾನಿಗೆ 370 ರೂ. ಖರ್ಚು ಮಾಡಿದ್ದಾಗಿ ಹೇಳಿದ ಆತ, ಅದಕ್ಕೆ ಪ್ರತಿಯಾಗಿ ಆ ಹುಡುಗಿಯಿಂದ ಲೈಂಗಿಕತೆಯನ್ನು ನಿರೀಕ್ಷಿಸಿದ್ದಾಗಿ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾನೆ.
ಕಾರ್ಯಕ್ರಮದಲ್ಲಿದ್ದ ಕೆಲವರು ಆ ಕ್ಷಣಕ್ಕೆ ನಕ್ಕರಾದರೂ, ಈ ಕೃತ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ ಇಡೀ ದೇಶಾದ್ಯಂತ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿತು.
View this post on Instagram
ಉದ್ಯೋಗಿ ವಿರುದ್ಧ ಕಂಪನಿಯ ತ್ವರಿತ ಮತ್ತು ಕಠಿಣ ಕ್ರಮ ವೀಡಿಯೊ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಸಾರ್ವಜನಿಕರು ಯುವಕನ ಉದ್ಯೋಗದ ಪ್ರೊಫೈಲ್ ಅನ್ನು ಪತ್ತೆಹಚ್ಚಿ ಆತ ಕೆಲಸ ಮಾಡುತ್ತಿದ್ದ ಗುರುಗ್ರಾಮದ ಡಿಸೈನಿಂಗ್ ಕಂಪನಿಯನ್ನು ಟ್ಯಾಗ್ ಮಾಡಲು ಆರಂಭಿಸಿದರು. ವಿಷಯದ ಗಂಭೀರತೆಯನ್ನು ಅರಿತ ಕಂಪನಿಯ ಆಡಳಿತ ಮಂಡಳಿ ಮತ್ತು ಮಾಲೀಕರು ತಕ್ಷಣವೇ ಆಂತರಿಕ ಸಭೆ ನಡೆಸಿದರು.
ಕಂಪನಿಯ ಮಾಲೀಕರು ಅಧಿಕೃತ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿ, ಉದ್ಯೋಗಿ ಕಠಿಣ ಪರಿಶ್ರಮಿಯಾಗಿದ್ದರೂ, ಆತ ಸಾರ್ವಜನಿಕ ವೇದಿಕೆಯಲ್ಲಿ ನೀಡಿರುವ ಹೇಳಿಕೆಯು ನಮ್ಮ ಕಂಪನಿಯ ನೈತಿಕತೆ, ಸಂಸ್ಕೃತಿ ಮತ್ತು ಮಹಿಳೆಯರಿಗೆ ನೀಡುವ ಗೌರವದ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಮತ್ತಷ್ಟು ಓದಿ: ‘ಸ್ಟಾಂಡ್ಅಪ್’ ಕಾಮಿಡಿ; ಟ್ರಂಪ್ ಮುಂದೆ ಶಾಲಾ ಬಾಲಕನಾದ ಪಾಕಿಸ್ತಾನದ ಪ್ರಧಾನಿ
ಇಂತಹ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಾರಿದ ಕಂಪನಿಯು, ಆತನನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿ ಸಾರ್ವಜನಿಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
ಕ್ಷಮೆಯಾಚನೆಯ ನಂತರವೂ ತಪ್ಪದ ಸಾರ್ವಜನಿಕ ಆಕ್ರೋಶ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹಾಸ್ಯನಟ ಪ್ರಣೀತ್ ಮೋರ್ ಮತ್ತು ತಪ್ಪು ಮಾಡಿದ ಯುವಕ ಇಬ್ಬರೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶ ತಮಗಿರಲಿಲ್ಲ ಎಂದು ಅವರು ಹೇಳಿಕೊಂಡರೂ ಇಂಟರ್ನೆಟ್ ಬಳಕೆದಾರರ ಕೋಪ ಶಮನವಾಗಲಿಲ್ಲ.
ವಿಶೇಷವೆಂದರೆ, ಕೆಲಸ ಕಳೆದುಕೊಂಡ ನಂತರವೂ ಆ ಯುವಕ ಇದೇ ವಿವಾದದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆಯ ರೀಲ್ಸ್‌ಗಳನ್ನು ಮಾಡಲು ಮುಂದಾಗಿದ್ದು ಸಾರ್ವಜನಿಕರನ್ನು ಮತ್ತಷ್ಟು ಕೆರಳಿಸಿದೆ. ಯುವ ಪೀಳಿಗೆಯು ಇಂಟರ್ನೆಟ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವಾಗ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂಬುದಕ್ಕೆ ಈ ಘಟನೆ ಪ್ರಮುಖ ಎಚ್ಚರಿಕೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




