AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್ ಬಗ್ಗೆ ಹಾಸ್ಯ: ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪೊಲೀಸರ ವಶಕ್ಕೆ

Pawan Kalyan: ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದ ಬಗ್ಗೆ ಹಾಸ್ಯ ಮಾಡಿದ ಆರೋಪದ ಮೇಲೆ ಹೈದರಾಬಾದ್ ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುದೀಪ್ ಕಾಟಿಕಾಲ ಅನ್ನು ಆಂಧ್ರ ಪೊಲೀಸರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಅನುದೀಪ್ ವಿರುದ್ಧ ಈಗಾಗಲೇ ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಟಾಂಡಪ್ ಕಾಮಿಡಿ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಗಲಾಟೆ ಸಹ ಮಾಡಿದ್ದರು.

ಪವನ್ ಕಲ್ಯಾಣ್ ಬಗ್ಗೆ ಹಾಸ್ಯ: ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪೊಲೀಸರ ವಶಕ್ಕೆ
Pawan Kalyan Niharika
ಮಂಜುನಾಥ ಸಿ.
|

Updated on:Apr 15, 2026 | 3:21 PM

Share

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಅವರ ವೈಯಕ್ತಿಕ ಜೀವನದ ಬಗ್ಗೆ ಹಾಸ್ಯ ಮಾಡಿದ ಆರೋಪದ ಮೇಲೆ ಹೈದರಾಬಾದ್ ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುದೀಪ್ ಕಾಟಿಕಾಲ ಅನ್ನು ಆಂಧ್ರ ಪೊಲೀಸರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಅನುದೀಪ್ ವಿರುದ್ಧ ಈಗಾಗಲೇ ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಟಾಂಡಪ್ ಕಾಮಿಡಿ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಗಲಾಟೆ ಸಹ ಮಾಡಿದ್ದರು. ಇದೀಗ ಆಂಧ್ರ ಪೊಲೀಸರು ಅನುದೀಪ್ ಅನ್ನು ವಶಕ್ಕೆ ಪಡೆದಿದ್ದಾರೆ.

ಅನುದೀಪ್ ಅವರು ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಸ್ಟ್ಯಾಂಡ್-ಅಪ್ ಕಾಮಿಡಿ ವಿಡಿಯೋವೊಂದರಲ್ಲಿ ಪವನ್ ಕಲ್ಯಾಣ್ ಅವರ ವಿಚ್ಛೇದನಗಳು ಮತ್ತು ನಿಹಾರಿಕಾ ಕೊನಿಡೇಲ ವಿಚ್ಛೇದನ, ಮೆಗಾ ಕುಟುಂಬದ ಸದಸ್ಯರ ಬಗ್ಗೆ ಹಾಸ್ಯ ಮಾಡಿದ್ದರು. ಇದು ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮತ್ತು ಜನಸೇನಾ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ಪವನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರಂತೂ ಸ್ಟುಡಿಯೋಕ್ಕೆ ನುಗ್ಗಿ ಗಲಾಟೆ ಮಾಡಿದ್ದರು.

ಜನಸೇನಾ ಪಕ್ಷದ ಪದಾಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಆಂಧ್ರಪ್ರದೇಶದ ಕಾಕಿನಾಡ ಪೊಲೀಸರು ಅನುದೀಪ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಏಪ್ರಿಲ್ 14ರಂದು ಪ್ರಯಾಗ್‌ರಾಜ್‌ನಲ್ಲಿ ತಮ್ಮ ಕುಟುಂಬದವರನ್ನು ಭೇಟಿ ಮಾಡಲು ಹೋಗಿದ್ದ ಅನುದೀಪ್ ಅನ್ನು ಆಂಧ್ರ ಪೊಲೀಸರು ಅಲ್ಲಿಗೆ ಹೋಗಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:‘ಜೈಲರ್ 2’ ಸಿನಿಮಾದಲ್ಲಿ ಪವನ್ ಕಲ್ಯಾಣ್? ಶಾರುಖ್ ಮಾಡಬೇಕಿದ್ದ ಪಾತ್ರ ಈಗ ಪವರ್ ಸ್ಟಾರ್ ಪಾಲು

ಅನುದೀಪ್ ಅವರು ತಮ್ಮ ಪ್ರದರ್ಶನದಲ್ಲಿ, ‘ಹೆಂಡತಿಗೆ ಹೇಗೆ ವಿಚ್ಛೇದನ ನೀಡಬೇಕು ಎಂಬುದನ್ನು ಪವನ್ ಕಲ್ಯಾಣ್ ಅವರಿಂದ ಕಲಿಯಬೇಕು’ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ ಇತ್ತೀಚೆಗೆ ವಿಚ್ಛೇದನ ಪಡೆದ ಪವನ್ ಕಲ್ಯಾಣ್ ಅವರ ಸೋದರಸಂಬಂಧಿ ನಿಹಾರಿಕಾ ಕೊನಿಡೆಲ ಅವರು ಈ ವಿಷಯದಲ್ಲಿ ತಮ್ಮ ಚಿಕ್ಕಪ್ಪನಿಂದ ಸಲಹೆ ಪಡೆಯಬಹುದು ಎಂದು ಕಾಲೆಳೆದಿದ್ದರು. ರಾಮ್ ಚರಣ್ ಅವರನ್ನು ವಿನಾಕಾರಣ ಕೆಟ್ಟ ಪದ ಬಳಸಿ ನಿಂದಿಸಿದ್ದರು. ಜೂ ಎನ್​​ಟಿಆರ್, ನಂದಮೂರಿ ಬಾಲಕೃಷ್ಣ ಅವರುಗಳ ಬಗ್ಗೆಯೂ ವ್ಯಂಗ್ಯ ಮಾಡಿದ್ದರು ಅನುದೀಪ್.

ಅನುದೀಪ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಮಾನನಷ್ಟ ಮೊಕದ್ದಮೆ, ಸಾರ್ವಜನಿಕ ಶಾಂತಿ ಭಂಗ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ಅನುದೀಪ್ ಅವರನ್ನು ರೈಲಿನ ಮೂಲಕ ಕಾಕಿನಾಡಕ್ಕೆ ಕರೆತರುತ್ತಿದ್ದಾರೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಪೊಲೀಸರು ವಶಕ್ಕೆ ಪಡೆಯುವ ಮೊದಲೇ ಈ ಬಗ್ಗೆ ಮಾತನಾಡಿದ್ದ ಅನುದೀಪ್, ‘ನನ್ನ ಉದ್ದೇಶ ವಿಚ್ಛೇದನದ ಬಗ್ಗೆ ಇರುವ ಸಾಮಾಜಿಕ ಹಿಂಜರಿಕೆಯನ್ನು ಹೋಗಲಾಡಿಸುವುದಾಗಿತ್ತು ಮತ್ತು ಅಭಿಮಾನಿಗಳ ಅತಿರೇಕದ ವರ್ತನೆಗಳ್ನು ಪ್ರಶ್ನಿಸುವುದಾಗಿತ್ತು. ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ’ ಎಂದು ಹೇಳಿ ಕ್ಷಮೆಯಾಚಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Wed, 15 April 26

Follow Us