370 ರೂ. ಬಿರಿಯಾನಿ ವಿವಾದ: ಪ್ರಣಿತ್ ಮೋರೆ, ಹಿಮಾಂಶು, ಡಾ. ಸೆಜಲ್​ಗೆ ಮಹಿಳಾ ಆಯೋಗ ನೋಟಿಸ್

ಕಾಮಿಡಿ ಶೋನಲ್ಲಿ ಮಹಿಳೆಯರ ಬಗ್ಗೆ ಮತ್ತು ಪುರುಷರ ಮೃತದೇಹಗಳ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕಾಗಿ ಪ್ರಣಿತ್ ಮೋರೆ, ಹಿಮಾಂಶು ಜಾಂಗ್ರಾ ಮತ್ತು ಡಾ. ಸೇಜಲ್​ ಪವಾರ್​ಗೆ ಸಂಕಷ್ಟ ಎದುರಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪೊಲೀಸರು ಕೂಡ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

370 ರೂ. ಬಿರಿಯಾನಿ ವಿವಾದ: ಪ್ರಣಿತ್ ಮೋರೆ, ಹಿಮಾಂಶು, ಡಾ. ಸೆಜಲ್​ಗೆ ಮಹಿಳಾ ಆಯೋಗ ನೋಟಿಸ್
Pranit More, Himanshu Jangra, Sejal Pawar

Updated on: Jun 11, 2026 | 10:44 PM

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ‘370 ರೂಪಾಯಿ ಬಿರಿಯಾನಿ’ ಜೋಕ್ ಮತ್ತು ಮೃತದೇಹಗಳ ಕುರಿತಾದ ಆಕ್ಷೇಪಾರ್ಹ ಹಾಸ್ಯ ಪ್ರಹಸನಗಳು ಈಗ ಸ್ಟ್ಯಾಂಡಪ್ ಕಾಮಿಡಿಯನ್‌ಗಳಿಗೆ ಭಾರೀ ಸಂಕಷ್ಟ ತಂದಿಟ್ಟಿವೆ. ಮಹಿಳೆಯರ ಕುರಿತು ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪದ ಮೇಲೆ ಕಾಮಿಡಿಯನ್ ಪ್ರಣಿತ್ ಮೋರೆ (Pranit More), ಹಿಮಾಂಶು ಜಾಂಗ್ರಾ (Himanshu Jangra) ಮತ್ತು ಡಾ. ಸೇಜಲ್ ಪವಾರ್ (Sejal Pawar) ವಿರುದ್ಧ ಮುಂಬೈ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮತ್ತೊಂದೆಡೆ, ಈ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಜೂನ್ 22ರಂದು ಸಂಜೆ 4 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಆಯೋಗವು ಸಮನ್ಸ್ ಜಾರಿ ಮಾಡಿದೆ.

ಹರಿಯಾಣದ ಗುರುಗ್ರಾಮದಲ್ಲಿ ಪ್ರಣಿತ್ ಮೋರೆ ನಡೆಸಿಕೊಡುತ್ತಿದ್ದ ಸ್ಟ್ಯಾಂಡಪ್ ಕಾಮಿಡಿ ಶೋ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಹಿಮಾಂಶು ಜಾಂಗ್ರಾ ಎಂಬಾತ ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಕಾಮೆಂಟ್ ಮಾಡಿದ್ದ. ತಾನು ಡೇಟಿಂಗ್‌ಗೆ ಹೋದಾಗ ಹುಡುಗಿಗೆ 370 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಕೊಡಿಸಿದ್ದೆ. ಅವಳು ಮನೆಗೆ ಬಿಡಲು ಕೇಳಿದಾಗ, ‘ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ವಸೂಲಿ ಮಾಡದೆ ಬಿಡುವುದಿಲ್ಲ’ ಎಂದು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾಗಿ ಹೇಳಿಕೊಂಡಿದ್ದ. ಇದನ್ನು ಕೇಳಿ ಕಾಮಿಡಿಯನ್ ಪ್ರಣಿತ್ ಮೋರೆ ನಕ್ಕಿದ್ದರು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಡೇಟಿಂಗ್ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಬಲವಂತವನ್ನು ಹಾಸ್ಯದ ರೂಪದಲ್ಲಿ ವೈಭವೀಕರಿಸಿದ್ದಕ್ಕೆ ನೆಟ್ಟಿಗರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಶೋನ ಮತ್ತೊಂದು ಕ್ಲಿಪ್‌ನಲ್ಲಿ ಡಾ. ಸೆಜಲ್ ಪವಾರ್ ಎಂಬಾಕೆ, ವೈದ್ಯಕೀಯ ಶಿಕ್ಷಣಕ್ಕಾಗಿ ಬಳಸುವ ಮೃತದೇಹಗಳ ಬಗ್ಗೆ ಮತ್ತು ಮೃತ ಪುರುಷರ ದೇಹಗಳ ಬಗ್ಗೆ ಅತ್ಯಂತ ಅಶ್ಲೀಲ ಹಾಗೂ ವಿಕೃತವಾಗಿ ಮಾತನಾಡಿದ್ದರು. ಇದು ಸತ್ತವರ ಘನತೆಗೆ ಅಪಚಾರ ಎಸಗಿದಂತೆ ಇದೆ ಎಂದು ಸಾರ್ವಜನಿಕರು ಹಾಗೂ ಸೈಬರ್ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹಟ್ಕರ್ ಅವರು ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಈ ಬಗ್ಗೆ ತಕ್ಷಣವೇ ಕಟ್ಟುನಿಟ್ಟಿನ ಮತ್ತು ಸಮಯದ ಮಿತಿಯೊಳಗೆ ಕ್ರಮ ಕೈಗೊಳ್ಳಬೇಕು ಹಾಗೂ 7 ದಿನಗಳ ಒಳಗಾಗಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ

‘ಮಹಿಳೆಯರ ಒಪ್ಪಿಗೆ, ಘನತೆ ಮತ್ತು ಸ್ವಾತಂತ್ರ್ಯವನ್ನು ಕೇವಲ ಮನರಂಜನೆಗಾಗಿ ಬಳಸಿಕೊಳ್ಳುವುದು ಮತ್ತು ಇಂತಹ ವಿಕೃತ ನಡವಳಿಕೆಗಳನ್ನು ಸಾಮಾನ್ಯೀಕರಿಸುವುದು ಸಮಾಜದಲ್ಲಿ ಲಿಂಗ ಆಧಾರಿತ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತೆ ಆಗುತ್ತದೆ’ ಎಂದು ಮಹಿಳಾ ಆಯೋಗ ಕಳವಳ ವ್ಯಕ್ತಪಡಿಸಿದೆ. ಸದ್ಯ ಮಹಾರಾಷ್ಟ್ರ ಸೈಬರ್ ಪೊಲೀಸರು ಮೂವರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us