ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ (Prashanth Sambargi) ಅವರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ವಾಟ್ಸಪ್ ಮತ್ತು ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಆ್ಯಸಿಡ್ ಹಾಕುವುದಾಗಿ ಅಪರಿಚಿತರು ಎಚ್ಚರಿಸಿದ್ದಾರೆ. ಈ ಸಂಬಂಧವಾಗಿ ಪ್ರಶಾಂತ್ ಸಂಬರ್ಗಿ ಅವರು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆದರಿಕೆ (Life Threat) ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಪ್ರಶಾಂತ್ ಸಂಬರ್ಗಿ ಅವರು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಮೇಶ್ವರಂ ಕೆಫೆ (Rameshwaram Cafe) ಬಗ್ಗೆ ಪಸ್ತಾಪಿಸಿ ಪ್ರಶಾಂತ್ ಸಂಬರ್ಗಿಗೆ ಬೆದರಿಕೆ ಹಾಕಲಾಗಿದೆ.
ವಿದೇಶದ ಮೊಬೈಲ್ ಸಂಖ್ಯೆಗಳಿಂದ ಪ್ರಶಾಂತ್ ಸಂಬರ್ಗಿ ಅವರಿಗೆ ಬೆದರಿಕೆ ಸಂದೇಶ ಬಂದಿದೆ. ಅಮೆರಿಕ, ಕ್ರೊಯೇಷ್ಯಾ ಮುಂತಾದ ದೇಶಗಳ ವಾಟ್ಸಪ್ ಸಂಖ್ಯೆಗಳನ್ನು ಬಳಸಿ ಬೆದರಿಕೆ ಸಂದೇಶ ಕಳಿಸಲಾಗಿದೆ. ಪ್ರಶಾಂತ್ ಸಂಬರ್ಗಿ ಅವರ ಫ್ಯಾಮಿಲಿ ಫೋಟೋವನ್ನು ಕಳಿಸಿ, ‘ಟಾರ್ಗೆಟ್’ ಎಂದು ಬರೆಯಲಾಗಿದೆ. ಪತ್ನಿ ಮತ್ತು ಮಕ್ಕಳನ್ನು ಕೂಡ ಬಲಿ ತೆಗೆದುಕೊಳ್ಳುವುದಾಗಿ ಬೆದರಿಕೆ ಸಂದೇಶ ಕಳಿಸಲಾಗಿದೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಸ್ಗೂ ಕಾಫಿನಾಡಿಗೂ ನಂಟು: ಬಂಧಿತ ಬ್ಲಾಸ್ಟ್ನ ಮಾಸ್ಟರ್ ಮೈಂಡ್ ಕಳಸ ಮೂಲದವನು
‘ಮಾರ್ಚ್ 10ರ ಮಧ್ಯರಾತ್ರಿಯಿಂದ ನನಗೆ ಮೇಲ್ಕಂಡ ಮೊಬೈಲ್ ಸಂಖ್ಯೆಗಳಿಂದ ಬೆದರಿಕೆ ಸಂದೇಶ ಬಂದಿದೆ. ನಮ್ಮ ಫೋಟೋ ಕಳಿಸಿ ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಹಾಕಲಾಗಿದೆ. ನಮ್ಮ ಮೊಬೈಲ್ ಹ್ಯಾಕ್ ಮಾಡಲಾಗಿದೆ. ಅದರಲ್ಲಿನ ಖಾಸಗಿ ಮಾಹಿತಿಯನ್ನು ಕದಿಯಲಾಗಿದೆ. ವೈಯಕ್ತಿಕ ಫೋಟೋ, ಕಾಲ್ ರೆಕಾರ್ಡ್, ಎಸ್ಎಂಎಸ್ ಹಾಗೂ ಇಮೇಲ್ಗಳನ್ನು ಟ್ರಾನ್ಸ್ಫರ್ ಮಾಡಲಾಗಿದೆ’ ಎಂದು ಪ್ರಶಾಂತ್ ಸಂಬರ್ಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ಸ್ಫೋಟಕ ವಿಚಾರ ಬಯಲಿಗೆ; ಬೆಂಗಳೂರಿನ ಸಮೀಪವೇ ಬಾಂಬ್ ತಯಾರಿ
ಪ್ರಶಾಂತ್ ಸಂಬರ್ಗಿಗೆ ಬೆದರಿಕೆ ಹಾಕಿದ ಕಿಡಿಗೇಡಿಗಳಿಗೆ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ನಂಟು ಇರುವುದು ಕಂಡುಬಂದಿದೆ. ಯಾಕೆಂದರೆ, ಬೆದರಿಕೆ ಸಂದೇಶದಲ್ಲಿ ರಾಮೇಶ್ವರಂ ಕೆಫೆ ಬಗ್ಗೆ ಉಲ್ಲೇಖ ಮಾಡಲಾಗಿದೆ. ದೂರಿನಲ್ಲಿ ತಿಳಿಸಿರುವಂತೆ, ಪ್ರಶಾಂತ್ ಸಂಬರ್ಗಿ ಅವರು ಮಾರ್ಚ್ 8ರಂದು ರಾಮೇಶ್ವರಂ ಕೆಫೆ ರೀ-ಓಪನಿಂಗ್ಗೆ ತೆರಳಿದ್ದರು. ಆಗ ಕೆಲವು ಸುದ್ದಿ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆ ಬಳಿಕ ಕಿಡಿಗೇಡಿಗಳಿಂದ ಬೆದರಿಕೆ ಸಂದೇಶ ಬರಲು ಆರಂಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.