2 ವಾರ ಮೊದಲೇ ಬಿಡುಗಡೆ ಆಗಲಿದೆ ‘ಆಡುಜೀವಿತಂ’; ಸಿಹಿ ಸುದ್ದಿ ನೀಡಿದ ಪೃಥ್ವಿರಾಜ್​

|

Updated on: Feb 21, 2024 | 11:51 AM

ಹಲವು ಕಾರಣಗಳಿಂದಾಗಿ ‘ಆಡುಜೀವಿತಂ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇದರಲ್ಲಿ ಖ್ಯಾತ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಗೆಟಪ್​ ತುಂಬ ಭಿನ್ನವಾಗಿದೆ. ಹಲವು ವರ್ಷಗಳಿಂದ ಈ ಸಿನಿಮಾದ ಕೆಲಸ ಸಾಗಿಬಂದಿದೆ. ಈಗ ಈ ಚಿತ್ರಕ್ಕೆ ಬಿಡುಗಡೆ ಭಾಗ್ಯ ಸಿಗುತ್ತಿದೆ. ರಿಲೀಸ್​ ಡೇಟ್​ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

2 ವಾರ ಮೊದಲೇ ಬಿಡುಗಡೆ ಆಗಲಿದೆ ‘ಆಡುಜೀವಿತಂ’; ಸಿಹಿ ಸುದ್ದಿ ನೀಡಿದ ಪೃಥ್ವಿರಾಜ್​
ಪೃಥ್ವಿರಾಜ್​ ಸುಕುಮಾರನ್​
Follow us on

ಕಡೆಯೂ ಪೃಥ್ವಿರಾಜ್​ ಸುಕುಮಾರನ್​ (Prithviraj Sukumaran) ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಹಳ ವಿಳಂಬವಾಗಿದ್ದ ‘ಆಡುಜೀವಿತಂ’ (Aadujeevitham) ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಕೆಲವು ವರ್ಷಗಳ ಹಿಂದೆ ಸೆಟ್ಟೇರಿದ ಈ ಸಿನಿಮಾದ ರಿಲೀಸ್​ ತಡವಾಗುತ್ತಲೇ ಇತ್ತು. ಏಪ್ರಿಲ್​ 10ರಂದು ಬಿಡುಗಡೆ ಆಗಲಿದೆ ಎಂದು ಈ ಮೊದಲು ತಿಳಿಸಲಾಗಿತ್ತು. ಆದರೆ ಈಗ ನಟ ಪೃಥ್ವಿರಾಜ್​ ಅವರು ಗುಡ್​ ನ್ಯೂಸ್​ ನೀಡಿದ್ದಾರೆ. ಎರಡು ವಾರ ಮುಂಚಿತವಾಗಿಯೇ ‘ಆಡುಜೀವಿತಂ’ (The Goat Life) ಸಿನಿಮಾ ತೆರೆಕಾಣಲಿದೆ. ಮಾರ್ಚ್​ 28ರಂದು ಈ ಸಿನಿಮಾ ಬಿಡುಗಡೆ ಆಗುವುದು ಖಚಿತ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಹೊಸ ಪೋಸ್ಟರ್​ಗಳ ಮೂಲಕ ‘ಆಡುಜೀವಿತಂ’ ಸಿನಿಮಾದ ರಿಲೀಸ್​ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಕಾನ್ಸೆಪ್ಟ್​ ಸಿದ್ಧಗೊಂಡು 16 ವರ್ಷದಿಂದ, ಸ್ಕ್ರಿಪ್​ ಕೆಲಸ ಶುರುವಾಗಿ 10 ವರ್ಷದಿಂದ, ಶೂಟಿಂಗ್​ ಶುರುವಾಗಿ 6 ವರ್ಷದಿಂದ ಆ ಕಾಯುವಿಕೆಯ ಅವಧಿ ಈಗ ಚಿಕ್ಕದಾಗಿದೆ’ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ. ಈ ಸಿನಿಮಾ ಮಾರ್ಚ್​ 28ರಂದು ಹಲವು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

‘ಆಡುಜೀವಿತಂ’ ಸಿನಿಮಾದಲ್ಲಿ ಪೃಥ್ವಿರಾಜ್​ ಸುಕುಮಾರನ್​ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಗೆಟಪ್​ ತುಂಬ ಡಿಫರೆಂಟ್​ ಆಗಿದೆ. ಮಲಯಾಳಂನ ಜನಪ್ರಿಯ ‘ಆಡುಜೀವಿತಂ’ ಕಾದಂಬರಿ ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಸತ್ಯ ಘಟನೆಗಳನ್ನು ಆಧರಿಸಿ ಬರೆದ ಈ ಕಾದಂಬರಿ 12 ಭಾಷೆಗಳಿಗೆ ಭಾಷಾಂತರಗೊಂಡಿದೆ. 90ರ ದಶಕದಲ್ಲಿ ಉತ್ತಮ ಭವಿಷ್ಯ ಹುಡುಕಿಕೊಂಡು ಬೇರೆ ದೇಶಕ್ಕೆ ಹೋದ ನಜೀಬ್​ ಎಂಬ ಯುವಕನ ಕಹಾನಿಯನ್ನು ಈ ಸಿನಿಮಾ ಒಳಗೊಂಡಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡೈರೆಕ್ಟರ್​ ಬ್ಲೆಸ್ಸಿ ಥಾಮಸ್​ ಅವರು ‘ಆಡುಜೀವಿತಂ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆ ಕಾರಣದಿಂದ ಬಹಳ ನಿರೀಕ್ಷೆ ಮೂಡಿದೆ. ‘ವಿಷ್ಯುವಲ್​ ರೊಮ್ಯಾನ್ಸ್​’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಹಾಲಿವುಡ್​ ನಟ ಜಿಮ್ಮಿ ಜೀನ್​ ಲೂಯಿಸ್​ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಮಲಾ ಪೌಲ್​ ಮತ್ತು ಪೃಥ್ವಿರಾಜ್​ ಅವರು ತೆರೆಹಂಚಿಕೊಂಡಿದ್ದಾರೆ. ಜನಪ್ರಿಯ ಅರಬ್​ ನಟರಾದ ತಲಿಬ್​ ಅಲ್​ ಬಲುಶಿ, ರಿಕ್​ ಅಬಿ ಅವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ: ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ, ಕುಟುಂಬ ಇತ್ಯಾದಿ ಮಾಹಿತಿ

ಈ ಸಿನಿಮಾದ ತಾಂತ್ರಿಕ ವಿಭಾಗದಲ್ಲಿ ನುರಿತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಆಸ್ಕರ್​ ಪ್ರಶಸ್ತಿ ಪುರಸ್ಕೃತರಾದ ಎ.ಆರ್​. ರೆಹಮಾನ್​ ಅವರು ‘ಆಡುಜೀವಿತಂ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಸೂಲ್​ ಪೂಕುಟ್ಟಿ ಅವರು ಸೌಂಡ್​ ಡಿಸೈನ್ ಮಾಡಿದ್ದಾರೆ. ಸುನಿಲ್​ ಕೆ.ಎಸ್​. ಛಾಯಾಗ್ರಹಣ, ಎ. ಶ್ರೀಕರ್​ ಪ್ರಸಾದ್​ ಅವರ ಸಂಕಲನ ಈ ಸಿನಿಮಾಗಿದೆ. ಪೃಥ್ವಿರಾಜ್​ ಸುಕುಮಾರನ್​ ಅವರ ವೃತ್ತಿಜೀವನದಲ್ಲಿ ಇದು ಗಮನಾರ್ಹ ಸಿನಿಮಾ ಆಗಿರಲಿದೆ ಎಂದು ಫ್ಯಾನ್ಸ್​ ನಿರೀಕ್ಷಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.