Ameen Sayani: ದಿಗ್ಗಜ ರೇಡಿಯೋ ನಿರೂಪಕ ಅಮೀನ್ ಸಯಾನಿ ನಿಧನ; ‘ಬಿನಾಕಾ ಗೀತ್ ಮಾಲಾ’ ಹಿಂದಿನ ಧ್ವನಿ ಇನ್ನಿಲ್ಲ
‘ರೇಡಿಯೋ ಸಿಲೋನ್’ ಮೂಲಕ ಅಮೀನ್ ಸಯಾನಿ ಅವರು 1951ರಲ್ಲಿ ಕೆಲಸ ಆರಂಭಿಸಿದ್ದರು. ಅವರ ಧ್ವನಿಗೆ ಇಡೀ ದೇಶದ ಜನರು ಮಾರು ಹೋಗಿದ್ದರು. ಅನೇಕ ವರ್ಷಗಳ ಕಾಲ ರೇಡಿಯೋ ಕೇಳುಗರ ಆಪ್ತ ನಿರೂಪಕರಾಗಿದ್ದ ಅಮೀನ್ ಸಯಾನಿ ಅವರು ಈಗ ನೆನಪು ಪಾತ್ರ. ಅವರ ನಿಧನಕ್ಕೆ ದೇಶಾದ್ಯಂತ ಜನರು ಕಂಬನಿ ಮಿಡಿಯುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಅಮೀನ್ ಸಯಾನಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಆಲ್ ಇಂಡಿಯಾ ರೇಡಿಯೋದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಮೀನ್ ಸಯಾನಿ (Ameen Sayani) ಅವರು ನಿಧನರಾಗಿದ್ದಾರೆ. 91ನೇ ವಯಸ್ಸಿನಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುತ್ರ ರಾಜಿಲ್ ಸಯಾನಿ ಅವರು ತಂದೆಯ ಸಾವಿನ (Ameen Sayani Death) ಸುದ್ದಿಯನ್ನು ಖಚಿತಪಡಿಸಿದ್ದಾರೆ. ಮಂಗಳವಾರ (ಫೆಬ್ರವರಿ 20) ರಾತ್ರಿ ಅಮೀನ್ ಸಯಾನಿ ಅವರಿಗೆ ಹಾರ್ಟ್ ಅಟ್ಯಾಕ್ ಆಯಿತು. ಕೂಡಲೇ ಅವರನ್ನು ಮುಂಬೈನ ಎಚ್ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ‘ಬಿನಾಕಾ ಗೀತ್ ಮಾಲಾ’ (Binaca Geetmala) ರೀತಿಯ ಜನಪ್ರಿಯ ಶೋಗಳನ್ನು ನಡೆಸಿಕೊಡುವ ಮೂಲಕ ಅಮೀನ್ ಸಯಾನಿ ಅವರು ಜನರ ಮೆಚ್ಚುಗೆ ಗಳಿಸಿದ್ದರು. ಅವರ ನಿಧನಕ್ಕೆ ದೇಶಾದ್ಯಂತ ಕಂಬನಿ ಮಿಡಿಯಲಾಗುತ್ತಿದೆ.
ಇಂದು (ಫೆಬ್ರವರಿ 21) ಅಮೀನ್ ಸಯಾನಿ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ನಡೆಯಲಿದೆ. ಕೆಲವು ಸಂಬಂಧಿಕರು ಅಂತಿಮ ದರ್ಶನಕ್ಕೆ ಬರುವುದರಿಂದ ಕಾಯಲಾಗುತ್ತಿದೆ. ಜನ ಸಾಮಾನ್ಯರಿಂದ ಸೆಲೆಬ್ರಿಟಿಗಳ ತನಕ ಅನೇಕರು ಅಮೀನ್ ಸಯಾನಿ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. 1932ರಲ್ಲಿ ಜನಿಸಿದ ಅಮೀನ್ ಸಯಾನಿ ಅವರು 1951ರಲ್ಲಿ ರೇಡಿಯೋದಲ್ಲಿ ಕೆಲಸ ಮಾಡಲು ಆರಂಭಿಸಿದರು. ಹಲವು ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು.
ಹೃದಯಾಘಾತದಿಂದ ಖ್ಯಾತ ನಟ ರಿತುರಾಜ್ ಸಿಂಗ್ ನಿಧನ; ಕಂಬನಿ ಮಿಡಿದ ಬಾಲಿವುಡ್
1952ರಿಂದ 42 ವರ್ಷಗಳ ಕಾಲ ‘ಬಿನಾಕಾ ಗೀತ್ ಮಾಲಾ’ ಕಾರ್ಯಕ್ರಮ ಪ್ರಸಾರವಾಯಿತು. ಮೊದಲು ‘ರೆಡಿಯೋ ಸಿಲೋನ್’ನಲ್ಲಿ ಹಾಗೂ ನಂತರ ‘ವಿವಿಧ್ ಭಾರತಿ’ಯಲ್ಲಿ ಈ ಕಾರ್ಯಕ್ರಮ ಬಿತ್ತರವಾಯಿತು. ‘ನಮಸ್ಕಾರ್ ಭಾಯಿಯೋ ಔರ್ ಬೆಹನೋ. ಮೈ ಆಪ್ಕಾ ದೋಸ್ತ್ ಅಮೀನ್ ಸಯಾನಿ ಬೋಲ್ ರಹಾ ಹು’ ಎಂಬ ಧ್ವನಿಯನ್ನು ಕೇಳಿದರೆ ಅನೇಕರ ನೆನಪಿನ ಪುಟಗಳು ತೆರೆಯುತ್ತವೆ. ಅಷ್ಟರಮಟ್ಟಿಗೆ ದೇಶದ ಜನತೆಗೆ ಆಪ್ತವಾದ ಧ್ವನಿ ಅವರದ್ದಾಗಿತ್ತು.
I used to listen him in my childhood! Great voice to attract people of all ages on Radio!
Rest in Peace Sir! 🙏#AmeenSayani pic.twitter.com/6kD3hN9ebB
— SK SINGH🇮🇳 (@SKSINGH194) February 21, 2024
ರೇಡಿಯೋದಲ್ಲಿ 54 ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಿಗೆ ಅಮೀನ್ ಸಯಾನಿ ಅವರು ಧ್ವನಿ ನೀಡಿದ್ದರು. 19 ಸಾವಿರಕ್ಕೂ ಅಧಿಕ ಜಿಂಗಲ್ಸ್ಗೆ ಅವರ ಧ್ವನಿ ಬಳಕೆ ಆಗಿತ್ತು. ನಿರೂಪಕನಾಗಿ ಅವರು ಕೆಲವು ಸಿನಿಮಾಗಳಿಗೂ ಕೆಲಸ ಮಾಡಿದ್ದರು. ದೇಶಾದ್ಯಂತ ಆಲ್ ಇಂಡಿಯಾ ರೇಡಿಯೋವನ್ನು ಜನಪ್ರಿಯಗೊಳಿಸಿದ ಅಮೀನ್ ಸಯಾನಿ ಅವರನ್ನು ಕೇಳುಗರು ಈಗ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ. ಆ ದಿನಗಳನ್ನು ಮೆಲುಕು ಹಾಕಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.