Oscars: ಮತ್ತೊಂದು ತೆಲುಗು ಸಿನಿಮಾವನ್ನು ಆಸ್ಕರ್​ಗೆ ಕಳಿಸಲು ಸಿದ್ಧತೆ, ಬಜೆಟ್ ರೆಡಿ ಎಂದ ನಿರ್ಮಾಪಕ

|

Updated on: Apr 05, 2023 | 10:16 PM

ತೆಲುಗು ಸಿನಿಮಾ ಆರ್​ಆರ್​ಆರ್ ಆಸ್ಕರ್​ಗೆ ಹೋಗಿ ಪ್ರಶಸ್ತಿ ಗೆದ್ದ ಬೆನ್ನಲ್ಲೆ ಇದರಿಂದ ಸ್ಪೂರ್ತಿ ಪಡೆದ ಮತ್ತೊಂದು ತೆಲುಗು ಸಿನಿಮಾ ಆಸ್ಕರ್​ಗೆ ತೆರಳಲು ಸಜ್ಜಾಗುತ್ತಿದೆ.

Oscars: ಮತ್ತೊಂದು ತೆಲುಗು ಸಿನಿಮಾವನ್ನು ಆಸ್ಕರ್​ಗೆ ಕಳಿಸಲು ಸಿದ್ಧತೆ, ಬಜೆಟ್ ರೆಡಿ ಎಂದ ನಿರ್ಮಾಪಕ
ಬಲಗಂ
Follow us on

ಆರ್​ಆರ್​ಆರ್​ (RRR) ಸಿನಿಮಾ ಆಸ್ಕರ್​ಗೆ (Oscar) ನಾಮಿನೇಟ್ ಆಗಿ ಒಂದು ಆಸ್ಕರ್ ಬಾಚಿರುವ ಬೆನ್ನಲ್ಲೆ ‘ನಾವೂ ಗೆಲ್ಲಬಲ್ಲೆವು’ ಎಂಬ ವಿಶ್ವಾಸ ಭಾರತದ ಹಲವು ನಿರ್ದೇಶಕ, ನಿರ್ಮಾಣ ಸಂಸ್ಥೆಗಳಿಗೆ ಮೂಡಿದೆ. ಆರ್​ಆರ್​ಆರ್ ತೋರಿಸಿದ ಹಾದಿಯಲ್ಲಿ ನಡೆಯಲು ಸಿನಿಮಾಗಳು ಕಾತರವಾಗಿವೆ. ಇದೀಗ ಮತ್ತೊಂದು ತೆಲುಗು ಸಿನಿಮಾವನ್ನು (Telugu Movie) ಆಸ್ಕರ್​ಗೆ ಕಳಿಸಲು ಚಿತ್ರತಂಡ ರೆಡಿಯಾಗಿದ್ದು, ಬಜೆಟ್ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ನಿರ್ಮಾಪಕ ಹೇಳಿದ್ದಾರೆ.

ಕಳೆದ ತಿಂಗಳಷ್ಟೆ ಬಿಡುಗಡೆ ಆದ ಬಲಗಂ (Balagam) ತೆಲುಗು ಸಿನಿಮಾ ಸಣ್ಣ ಬಜೆಟ್​ನಲ್ಲಿ ನಿರ್ಮಾಣಗೊಂಡು ಭಾರಿ ಜನಮನ್ನಣೆ ಗಳಿಸಿದೆ. ಸಂಬಂಧಗಳ ಪ್ರಾಮುಖ್ಯತೆ ಹೇಳುವ ಹಳ್ಳಿಯಲ್ಲಿ ನಡೆಯುವ ಕತೆಯನ್ನು ಬಲಗಂ ಸಿನಿಮಾ ಒಳಗೊಂಡಿದ್ದು, ಸಿನಿಮಾದ ಪಾತ್ರವರ್ಗ ಹಾಗೂ ಹಾಡುಗಳು ಬಹಳ ಗಮನ ಸೆಳೆದಿದೆ. ಸಿನಿಮಾ ದೊಡ್ಡ ಹಿಟ್ ಆಗಿದ್ದು, ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮನ್ನಣೆ ಪಡೆದುಕೊಂಡಿದೆ. ವಾಷಿಂಗ್ಟನ್ ಡಿಸಿ ಸಿನಿಮಾ ಉತ್ಸವದಲ್ಲಿ ಈ ಸಿನಿಮಾಕ್ಕೆ ನಾಲ್ಕು ಪ್ರಶಸ್ತಿಗಳು ದೊರೆತಿದ್ದು, ಉಕ್ರೇನ್ ಸಿನಿಮಾ ಉತ್ಸವದಲ್ಲಿಯೂ ಪ್ರಶಸ್ತಿ ಗಳಿಸಿದೆ. ಇದೀಗ ಈ ಸಿನಿಮಾವನ್ನು ಆಸ್ಕರ್​ಗೆ ಕಳಿಸಲು ಚಿತ್ರತಂಡ ಸಜ್ಜಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಸಿನಿಮಾದ ನಿರ್ಮಾಪಕ ದಿಲ್ ರಾಜು, ಇಪ್ಪತ್ತು ವರ್ಷಗಳ ಹಿಂದೆ ‘ಬೊಮ್ಮರಿಲ್ಲು’ ಸಿನಿಮಾ ನಿರ್ಮಾಣ ಮಾಡಿದ್ದೆ. ಆ ಸಿನಿಮಾ ಮಾಡಿದಾಗಲೂ ಇದೊಂದು ಒಳ್ಳೆಯ ಸಿನಿಮಾ ಆಗುತ್ತದೆ ಎಂದು ನಿರ್ಮಿಸಿದ್ದೆ, ಆದರೆ ಅದೊಂದು ಅದ್ಭುತ ಸಿನಿಮಾ ಆಗಿತ್ತು. ಈಗಲೂ ಅಷ್ಟೆ ಬಲಗಂ ಒಳ್ಳೆಯ ಸಿನಿಮಾ ಆಗುತ್ತದೆ ಎಂದು ಹಣ ತೊಡಗಿಸಿದೆ ಆದರೆ ಇದು ಮಹಾನ್ ಸಿನಿಮಾ ಆಗಿಬಿಟ್ಟಿತು. ಅಂದು ಬೊಮ್ಮರಿಲ್ಲು ನಿರ್ಮಿಸಿದಾಗ ಯಾವ ಭಾವವಿತ್ತೊ, ಇಂದು ಬಲಗಂ ಸಿನಿಮಾದಿಂದ ಅದೇ ಭಾವ ಆವರಿಸಿದೆ ಎಂದಿದ್ದಾರೆ.

ಆರ್​ಆರ್​ಆರ್ ಸಿನಿಮಾವು ಆಸ್ಕರ್​ ದ್ವಾರವನ್ನು ತೆರೆದಿದೆ. ಅಲ್ಲಿ ಸ್ಕ್ರೀನಿಂಗ್ ಮಾಡಲು ಆಸ್ಕರ್ ಅಭಿಯಾನ ಮಾಡಲು ಎಷ್ಟು ಹಣ ಖರ್ಚಾಗುತ್ತದೆ ತಿಳಿದುಕೊಳ್ಳುತ್ತೇನೆ. ದಿ ಎಲಿಫೆಂಟ್ ವಿಸ್ಪರರ್ಸ್​ ಡಾಕ್ಯುಮೆಂಟರಿಗೆ ಪ್ರಶಸ್ತಿ ಬರಲು ಹಣ ಖರ್ಚು ಮಾಡಿಲ್ಲ. ಅದ್ಭುತವಾದ ಪ್ರೇಕ್ಷಕರ ಪ್ರೇಮ ಗಳಿಸಿರುವ ಬಲಗಂ ಸಿನಿಮಾವನ್ನು ಆಸ್ಕರ್​ ನಾಮಿನೇನಷ್​ನಲ್ಲಿ ಸ್ಥಾನ ಪಡೆಯುವಂತೆ ಮಾಡಲು ಪ್ರಯತ್ನಿಸುತ್ತೇನೆ. ಇದಕ್ಕಾಗಿ ಏನೇನು ಮಾಡಬೇಕು ಎಂಬ ಬಗ್ಗೆ ರಾಜಮೌಳಿ ಪುತ್ರ ಕಾರ್ತಿಕೇಯ ಜೊತೆಗೆ ಮಾತನಾಡುತ್ತೇನೆ ಎಂದಿದ್ದಾರೆ ನಿರ್ಮಾಪಕ ದಿಲ್ ರಾಜು.

ಅಂತರಾಷ್ಟ್ರೀಯ ಸಿನಿಮಾ ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು. ಇಪ್ಪತ್ತು ವರ್ಷದಲ್ಲಿ ಒಮ್ಮೆಯೂ ಪ್ರಶಸ್ತಿ ಬಂದಿಲ್ಲ ಆದರೆ ನಿರ್ದೇಶಕ ವೇಣುಗೆ ಮೊದಲನೇ ಸಿನಿಮಾದಲ್ಲಿಯೇ ಪ್ರಶಸ್ತಿ ಬಂದಿದೆ. ನನಗೂ ಅಂತರಾಷ್ಟ್ರೀಯ ಗುಣಮಟ್ಟದ ಸಿನಿಮಾ ಮಾಡಬೇಕೆಂಬ ಕನಸು ಇದೆ. ಭವಿಷ್ಯದಲ್ಲಿ ಖಂಡಿತ ಅಂಥಹಾ ಸಿನಿಮಾ ಮಾಡುತ್ತೇನೆ. ಆದರೆ ಈಗ ಐದು ವರ್ಷ ಎಂಥಹಾ ಸಿನಿಮಾ ಮಾಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದೇನೆ ಅದನ್ನು ಫಾಲೋ ಮಾಡಬೇಕಿದೆ ಎಂದಿದ್ದಾರೆ ದಿಲ್ ರಾಜು.

ಬಲಗಂ ಸಿನಿಮಾವು ಕೇವಲ ನಾಲ್ಕು ಕೋಟಿ ಹಣದಲ್ಲಿ ನಿರ್ಮಾಣವಾಗಿರುವ ಸಿನಿಮಾ. ಜಬರ್ದಸ್ತ್ ಕಾರ್ಯಕ್ರಮದಲ್ಲಿ ಕಮಿಡಿಯನ್ ಆಗಿದ್ದ ವೇಣು ಯೆಲದಂಡಿ ಈ ಸಿನಿಮಾದ ನಿರ್ದೇಶಕ. ಹಾಸ್ಯನಟ ಪ್ರಿಯದರ್ಶಿ ಸೇರಿದಂತೆ ಬಹುತೇಕ ಹೊಸಬರು, ಹೆಚ್ಚು ಜನರಿಗೆ ಪರಿಚಯವಿಲ್ಲದ ನಟರನ್ನು ಮಾತ್ರವೇ ಹಾಕಿಕೊಂಡು ಅದ್ಭುತವಾದ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ