Puneeth Rajkumar Birthday: ಪುನೀತ್ ರಾಜ್​ಕುಮಾರ್ ಜನ್ಮದಿನ; ಅಪರೂಪದ ವ್ಯಕ್ತಿಯ ನೆನಪು ಸದಾ ಜೀವಂತ

|

Updated on: Mar 17, 2023 | 6:38 AM

ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ರಾಜ್​ಕುಮಾರ್ ಕುಟುಂಬ ಆಗಮಿಸಿ, ಪೂಜೆ ಸಲ್ಲಿಕೆ ಮಾಡಲಿದೆ. ಈಗಾಗಲೇ ಪುನೀತ್ ರಾಜ್​ಕುಮಾರ್ ಅವರ ಸಮಾಧಿಯನ್ನು ಅಲಂಕರಿಸುವ ಕೆಲಸ ಆಗಿದೆ.

Puneeth Rajkumar Birthday: ಪುನೀತ್ ರಾಜ್​ಕುಮಾರ್ ಜನ್ಮದಿನ; ಅಪರೂಪದ ವ್ಯಕ್ತಿಯ ನೆನಪು ಸದಾ ಜೀವಂತ
ಪುನೀತ್ ರಾಜ್​ಕುಮಾರ್
Follow us on

ಇಂದು (ಮಾರ್ಚ್ 17) ಪುನೀತ್ ರಾಜ್​ಕುಮಾರ್ ಅವರ ಜನ್ಮದಿನ (Puneeth Rajkumar Birthday). ಇದು ಪುನೀತ್ ಇಲ್ಲದೆ ಆಚರಿಸಲಾಗುತ್ತಿರುವ ಎರಡನೇ ಜನ್ಮದಿನ. ಪುನೀತ್ ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಪುನೀತ್ (Puneeth Rajkumar) ನಮ್ಮ ಜೊತೆ ಇದ್ದಿದ್ದರೆ ಈ ದಿನದ ಮೆರುಗು ಮತ್ತಷ್ಟು ಹೆಚ್ಚುತ್ತಿತ್ತು. ಆದರೆ, ಅವರಿಲ್ಲ ಎನ್ನುವ ಬೇಸರದಲ್ಲೇ ಈ ದಿನವನ್ನು ಆಚರಿಸಲಾಗುತ್ತಿರುವುದು ನಿಜಕ್ಕೂ ದುಃಖಕರ ವಿಚಾರ. ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ದಿನದಂದು ‘ಕಬ್ಜ’ ಕೂಡ ರಿಲೀಸ್ ಆಗುತ್ತಿರುವುದು ವಿಶೇಷ.

ಸಮಾಧಿಗೆ ಪೂಜೆ

ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ರಾಜ್​ಕುಮಾರ್ ಕುಟುಂಬ ಆಗಮಿಸಿ, ಪೂಜೆ ಸಲ್ಲಿಕೆ ಮಾಡಲಿದೆ. ಈಗಾಗಲೇ ಪುನೀತ್ ರಾಜ್​ಕುಮಾರ್ ಅವರ ಸಮಾಧಿಯನ್ನು ಅಲಂಕರಿಸುವ ಕೆಲಸ ಆಗಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್, ಶಿವರಾಜ್​ಕುಮಾರ್ ಸೇರಿದಂತೆ ಕುಟುಂಬದ ಅನೇಕರು ಕಂಠೀರವ ಸ್ಟುಡಿಯೋಗೆ ಬಂದು ಪೂಜೆಯಲ್ಲಿ ಭಾಗಿ ಆಗಲಿದ್ದಾರೆ. ಅಪ್ಪು ಜನ್ಮದಿನ ಅವರ ಸಮಾಧಿಗೆ ಭೇಟಿ ನೀಡಬೇಕು ಅನ್ನೋದು ಅನೇಕ ಅಭಿಮಾನಿಗಳ ಆಸೆ. ಈ ಕಾರಣಕ್ಕೆ ಕಂಠೀರವ ಸ್ಟುಡಿಯೋದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆಯಲಿದ್ದಾರೆ.

ಸಾಮಾಜಿಕ ಕೆಲಸ

ಪುನೀತ್ ರಾಜ್​ಕುಮಾರ್ ಅವರು ನಟನೆಯ ಜೊತೆ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿ ಗುರುತಿಸಿಕೊಂಡಿದ್ದರು. ಅಭಿಮಾನಿಗಳು ಕೂಡ ಈಗ ಅಪ್ಪು ಹಾದಿಯಲ್ಲಿ ಸಾಗುತ್ತಿದ್ದಾರೆ. ಅಪ್ಪು ಜನ್ಮದಿನದಂದು ರಕ್ತದಾನ, ಅನ್ನದಾನದಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಈ ಕೆಲಸ ಆಗುತ್ತಿದೆ. ಇದಕ್ಕಾಗಿ ಅನೇಕ ಅಭಿಮಾನಿ ಬಳಗ ಮುಂದೆ ಬಂದಿದೆ.

‘ಗಂಧದ ಗುಡಿ’ ಸಾಕ್ಷ್ಯಚಿತ್ರ ರಿಲೀಸ್

‘ಗಂಧದ ಗುಡಿ’ ಸಾಕ್ಷ್ಯಚಿತ್ರ ಪುನೀತ್ ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು. ಪುನೀತ್ ಅವರ ಮೊದಲ ವರ್ಷದ ಪುಣ್ಯತಿಥಿಗೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 28ರಂದು ಇದನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನು ನೋಡಿ ಅನೇಕರು ಮೆಚ್ಚಿಕೊಂಡಿದ್ದರು. ಈಗ ಈ ಡಾಕ್ಯುಮೆಂಟರಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಇಂದಿನಿಂದ (ಮಾರ್ಚ್​ 17) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಗಂಧದ ಗುಡಿ’ ಪ್ರಸಾರ ಆರಂಭಿಸಲಿದೆ. ಇದು ಅಭಿಮಾನಿಗಳ ಪಾಲಿಗೆ ವಿಶೇಷ ಗಿಫ್ಟ್ ಆಗಿದೆ.

‘ಕಬ್ಜ’ ರಿಲೀಸ್

ಪುನೀತ್ ರಾಜ್​ಕುಮಾರ್ ಬದುಕಿರುವಾಗಲೇ ‘ಕಬ್ಜ’ ಚಿತ್ರ ಸೆಟ್ಟೇರಿತ್ತು. ನಿರ್ದೇಶಕ ಆರ್. ಚಂದ್ರು ಅವರನ್ನು ಅಪ್ಪು ಹುರಿದುಂಬಿಸಿದ್ದರು. ಈ ಕಾರಣಕ್ಕೆ ಪುನೀತ್​ ಬಗ್ಗೆ ಚಂದ್ರುಗೆ ವಿಶೇಷ ಗೌರವ ಇದೆ. ಪುನೀತ್ ಅವರ ನೆನಪಿನಲ್ಲೇ ‘ಕಬ್ಜ’ ಚಿತ್ರ ಮಾರ್ಚ್ 17ಕ್ಕೆ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಪುನೀತ್ ಸಹೋದರ ಶಿವಣ್ಣ ನಟಿಸಿದ್ದಾರೆ.

ಪುನೀತ್ ಅಮರ

ಪುನೀತ್ ರಾಜ್​ಕುಮಾರ್ ಅವರು ದೈಹಿಕವಾಗಿ ಇಂದು ನಮ್ಮ ಜೊತೆ ಇರದೇ ಇರಬಹುದು. ಅವರು ಮಾಡಿದ ಕೆಲಸದ ಮೂಲಕ, ಸಿನಿಮಾ ಮೂಲಕ, ಹಾಡಿದ ಹಾಡುಗಳ ಮೂಲಕ ಅವರು ಸದಾ ಜೀವಂತ. ಅವರ ನಗುಮುಖ ಎಂದಿಗೂ ಮಾಸುವಂತದ್ದಲ್ಲ. ಸೋಶಿಯಲ್ ಮೀಡಿಯಾದಲ್ಲಿ #PuneethRajkumarLiveson ಹ್ಯಾಶ್​ಟ್ಯಾಗ್ ಟ್ರೆಂಡ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:31 am, Fri, 17 March 23