ಪುನೀತ್ ರಾಜ್ಕುಮಾರ್ ಪುತ್ಥಳಿ ಮೆರವಣಿಗೆ ವೇಳೆ ಗಲಭೆ, ಶಾಸಕರ ಪುತ್ರನಿಂದ ಎಸ್ಐ ಮೇಲೆ ಹಲ್ಲೆ
ಪುನೀತ್ ರಾಜ್ಕುಮಾರ್ ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಸಿಂಧನೂರಿನಲ್ಲಿ ಜೆಡಿಎಸ್ ಶಾಸಕರ ಪುತ್ರ ಅಭಿಷೇಕ್ ನಾಡಗೌಡ, ನೂತನ ಕಲಾಮಂದಿರಕ್ಕೆ ಪುನೀತ್ ಹೆಸರಿಡಬೇಕೆಂದು ಒತ್ತಾಯಿಸಿ, ಪುನೀತ್ ಪುತ್ಥಳಿಯನ್ನು ಮೆರವಣಿಗೆ ಮಾಡುವಾಗ ಗಲಭೆ ಉಂಟಾಗಿದೆ.
ರಾಯಚೂರು (Raichur) ಜಿಲ್ಲೆ ಸಿಂಧನೂರಿನಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಪುತ್ಥಳಿ ಮೆರವಣಿಗೆ ವೇಳೆ ಗಲಭೆ ಸಂಭವಿಸಿದ್ದು, ಮೆರವಣಿಗೆ ನೇತೃತ್ವ ವಹಿಸಿದ್ದ ಜೆಡಿಎಸ್ ಶಾಸಕ (JDS MLA) ವೆಂಕಟರಮಣ ನಾಡಗೌಡ ಅವರ ಪುತ್ರ ಅಭಿಷೇಕ್ ನಾಡಗೌಡ ಪಿಎಸ್ಐ ಒಬ್ಬರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಸಿಂಧನೂರಿನಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ರಂಗಮಂದಿರಕ್ಕೆ ಯಾರ ಹೆಸರು ಇಡಬೇಕೆಂಬ ವಿಷಯವು ರಾಜಕೀಯ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ರಾಜಕೀಯಕ್ಕೆ ಪುನೀತ್ ರಾಜ್ಕುಮಾರ್ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ.
ಕಲಾಮಂದಿರಕ್ಕೆ ಯಾರ ಹೆಸರು ಇಡಬೇಕು ಎಂಬುದು ಕೆಲ ದಿನಗಳಿಂದಲೂ ತುರುಸಿನ ರಾಜಕೀಯಕ್ಕೆ ಕಾರಣವಾಗಿತ್ತು. ಸ್ಥಳೀಯರೇ ಆದ ಮೃಡದೇವ ಗವಾಯಿಯವರ ಹೆಸರಿಡಬೇಕೆಂದು ಹಲವರು ಒತ್ತಾಯಿಸಿದ್ದರು. ಆದರೆ ಶಾಸಕರ ಪುತ್ರ ಹಾಗೂ ಅವರ ಬೆಂಬಲಿಗರು ಕಲಾಮಂದಿರಕ್ಕೆ ಪುನೀತ್ ರಾಜ್ಕುಮಾರ್ ಹೆಸರು ಇಡಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ನಗರಸಭೆಯಲ್ಲಿ ಚರ್ಚೆಯಾಗಿ ವಿಷಯ ಇತ್ಯರ್ಥವಾಗದೇ ಇದ್ದ ಕಾರಣ ನಿರ್ಣಯ ಮುಂದೂಡಲಾಗಿತ್ತು.
ವಿಷಯ ತೀರ್ಮಾನವಾಗುವ ಮುನ್ನವೇ ಶಾಸಕರ ಪುತ್ರ ಅಭಿಷೇಕ್ ಗೌಡ, ಕಲಾಮಂದಿರಕ್ಕೆ ಪುನೀತ್ ರಾಜ್ಕುಮಾರ್ ಹೆಸರಿಡುವುದಾಗಿ ನಿಶ್ಚಯಿಸಿ, ಕಲಾಮಂದಿರದ ಮುಂದೆ ಪುನೀತ್ ಪುತ್ಥಳಿ ಸ್ಥಾಪಿಸಲು ಪುತ್ಥಳಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದರು. ಅನುಮತಿ ರಹಿತ ಮೆರವಣಿಗೆಯನ್ನು ಪೊಲೀಸರು ಹಾಗೂ ತಹಶೀಲ್ದಾರ್ ತಡೆದರು. ಈ ವೇಳೆ ಗಲಭೆ ಉಂಟಾಗಿ ಅಭಿಷೇಕ್ ಗೌಡ ಪಿಎಸ್ಐ ಮಣಿಕಂಠ ಮೇಲೆ ಹಲ್ಲೆ ನಡೆಸಿದರು. ಮೆರವಣಿಗೆ ತಡೆಯುವ ವೇಳೆಯಲ್ಲಿ ಪಿಎಸ್ಐ ಸಹ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ್ದರು.
ಗಲಭೆಯ ಬಳಿಕ ಅಭಿಷೇಕ್ ಹಾಗೂ ಕೆಲವು ಸಂಗಡಿಗರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿಯೂ ಸುಮ್ಮನಾಗದ ಅಭಿಷೇಕ್, ಎಸ್ಐಗೆ ಬೆದರಿಕೆಗಳನ್ನು ಹಾಕಿದ್ದಾರೆ. ಐದು ನಿಮಿಷ ಯೂನಿಫಾರಂ ಬಿಚ್ಚಿ ಹೊರಗೆ ಬಾ ನೋಡಿಕೊಳ್ತೀನಿ ಎಂದು ಠಾಣೆಯಲ್ಲಿ ನಿಂತು ಅಭಿಷೇಕ್ ಅಬ್ಬರಿಸುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಧನೂರು ಜೆಡಿಎಸ್ ಶಾಸಕ ವೆಂಕಟರಮಣ ನಾಡಗೌಡರ್, ಪುನೀತ್ ರಾಜ್ಕುಮಾರ್ ಹೆಸರು ಇಡುವ ಕುರಿತಾಗಿ ಮಾರ್ಚ್ 21 ರ ವರೆಗೆ ನಗರಾಡಳಿತ ಕಾಲಾವಕಾಶ ಕೊಟ್ಟಿರುವ ಕಾರಣ ಆ ವರೆಗೆ ಪುನೀತ್ ಅಭಿಮಾನಿಗಳು ಸುಮ್ಮನಿರುವಂತೆ ಸೂಚಿಸಿದ್ದೆ. ಪುತ್ಥಳಿ ಅನುಷ್ಠಾನಕ್ಕೆ ಸಮ್ಮತಿ ಸಿಕ್ಕಲ್ಲದೇ ಇದ್ದರೂ ಪುತ್ಥಳಿಯನ್ನು ನಗರಸಭೆಯವರ ಸುಪರ್ಧಿಗೆ ನೀಡಲು ಅನುಮತಿಯನ್ನು ಪುನೀತ್ ಅಭಿಮಾನಿಗಳು ಪಡೆದಿದ್ದರು. ಮೆರವಣಿಗೆ ವೇಳೆ ಪಿಎಸ್ಐ ಮಣಿಕಂಠ ಕಾರ್ಯಕರ್ತರನ್ನು ಹೊಡೆಯದೇ ಇದ್ದಿದ್ದರೆ ಈ ಗಲಾಟೆಯೇ ನಡೆಯುತ್ತಿರಲಿಲ್ಲ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Wed, 15 March 23