ಮದುವೆ ನಿರಾಕರಿಸಿದ್ದಕ್ಕೆ ಗಾಯಕಿ ಇಂದರ್ ಕೌರ್ ಅಪಹರಣ; 6 ದಿನದ ಬಳಿಕ ಹೆಣವಾಗಿ ಪತ್ತೆ

ಗಾಯಕಿ ಇಂದರ್ ಕೌರ್ ಮೃತದೇಹ ಪತ್ತೆಯಾಗಿದೆ. ಕಾಲುವೆಯಲ್ಲಿ ಸಿಕ್ಕ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇಂದರ್ ಕೌರ್ ನಿಧನದಿಂದ ಅವರ ಕುಟುಂಬಕ್ಕೆ ತೀವ್ರ ಆಘಾತವಾಗಿದೆ. ಪ್ರಕರಣದ ಬಗ್ಗೆ ಇಲ್ಲಿದೆ ಮಾಹಿತಿ..

ಮದುವೆ ನಿರಾಕರಿಸಿದ್ದಕ್ಕೆ ಗಾಯಕಿ ಇಂದರ್ ಕೌರ್ ಅಪಹರಣ; 6 ದಿನದ ಬಳಿಕ ಹೆಣವಾಗಿ ಪತ್ತೆ
Inder Kaur

Updated on: May 19, 2026 | 5:22 PM

ಕಳೆದ 6 ದಿನಗಳ ಹಿಂದೆ 29 ವರ್ಷದ ಪಂಜಾಬಿ ಗಾಯಕಿ ಇಂದರ್ ಕೌರ್ (Inder Kaur) ಅವರಿಗೆ ಗನ್ ತೋರಿಸಿ ಅಪಹರಣ ಮಾಡಲಾಗಿತ್ತು. ಈಗ ಪಂಜಾಬ್‌ನ ಲೂಧಿಯಾನದ ಕಾಲುವೆಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮಂಗಳವಾರ (ಮೇ 19) ಮುಂಜಾನೆ ಸ್ಥಳೀಯ ಪೊಲೀಸರು ನೀಲೋ ಕಾಲುವೆಯಿಂದ ಗಾಯಕಿಯ (Punjabi Singer) ಶವವನ್ನು ಹೊರತೆಗೆದಿದ್ದಾರೆ. ಸುಖ್ವಿಂದರ್ ಸಿಂಗ್ ಎಂಬಾತ ಇಂದರ್ ಕೌರ್ ಅವರನ್ನು ಮದುವೆಯಾಗುವಂತೆ ತೀವ್ರ ಒತ್ತಾಯ ಹೇರುತ್ತಿದ್ದರಿಂದ ಆತನ ಮೇಲೆಯೇ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ಮೇ 13ರಂದು ರಾತ್ರಿ ಸುಮಾರು 8.30ಕ್ಕೆ ಇಂದರ್ ಕೌರ್ ಅವರು ತಮ್ಮ ಫೋರ್ಡ್ ಫಿಗೊ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರಟಿದ್ದರು. ಆದರೆ ಅವರು ಮತ್ತೆ ಮನೆಗೆ ಮರಳಲೇ ಇಲ್ಲ. ಗಾಯಕಿ ನಾಪತ್ತೆಯಾದ ನಂತರ, ಆಕೆಯ ಸಹೋದರ ಜೋತಿಂದರ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು. ಇಂದರ್ ಕೌರ್ ಮನೆಗೆ ಮರಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಆಘಾತ ಆಗಿದೆ.

ಪೊಲೀಸ್ ತನಿಖೆಯ ಪ್ರಕಾರ, ಇಂದರ್ ಕೌರ್ ಮತ್ತು ಆರೋಪಿ ಸುಖ್ವಿಂದರ್ ಸಿಂಗ್ ಮೂರು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದರು. ಆದರೆ, ಸುಖ್ವಿಂದರ್‌ನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ಸತ್ಯ ತಿಳಿದ ತಕ್ಷಣ ಇಂದರ್ ಆತನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು. ಅಲ್ಲದೆ ಆತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ ಸುಖ್ವಿಂದರ್, ಗಾಯಕಿಯ ಮೇಲೆ ತೀವ್ರ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ.

ಈ ಕೊಲೆ ಪ್ರಕರಣದ ಹಿಂದೆ ದೊಡ್ಡ ಸಂಚು ಅಡಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಸುಖ್ವಿಂದರ್ ಸಿಂಗ್ ಗಾಯಕಿಯನ್ನು ಕೊಲ್ಲಲೆಂದೇ ಕೆನಡಾದಿಂದ ನೇಪಾಳ ಮಾರ್ಗವಾಗಿ ಪಂಜಾಬ್‌ಗೆ ಬಂದಿದ್ದ ಎನ್ನಲಾಗಿದೆ. ಮೇ 13ರಂದು ಆತ ತನ್ನ ಸಹಚರರೊಂದಿಗೆ ಸೇರಿ ಗಾಯಕಿಯ ಕಾರನ್ನು ಅಡ್ಡಗಟ್ಟಿ, ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದನು. ನಂತರ ಅವರನ್ನು ಭೀಕರವಾಗಿ ಕೊಲೆ ಮಾಡಿ, ಶವವನ್ನು ನೀಲೋ ಕಾಲುವೆಗೆ ಎಸೆದಿದ್ದನು. ಕೃತ್ಯ ಎಸಗಿದ ತಕ್ಷಣವೇ ಆರೋಪಿ ಮತ್ತೆ ಅದೇ ನೇಪಾಳ ಮಾರ್ಗವಾಗಿ ಕೆನಡಾಕ್ಕೆ ಪರಾರಿಯಾಗಿದ್ದಾನೆ.

ಇದನ್ನೂ ಓದಿ: 33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?

ಆರೋಪಿ ಸುಖ್ವಿಂದರ್ ಸಿಂಗ್ ಮತ್ತು ಆತನ ಸಹಚರ ಕರಮ್‌ಜೀತ್ ಸಿಂಗ್ ವಿರುದ್ಧ ಮೇ 15ರಂದೇ ಜಮಾಲ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ ಪೊಲೀಸರು ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದರೆ ಆಕೆಯ ಪ್ರಾಣ ಉಳಿಯುತ್ತಿತ್ತು ಎಂದು ಗಾಯಕಿಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us