AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಅಮಾವಾಸ್ಯೆಯ ರಾತ್ರಿ ನಡೆದಿದ್ದೇನು? ವೀರಪ್ಪನ್​ಗೆ ಪಾರ್ವತಮ್ಮ ಹೇಳಿದ್ದೇನು?

Dr Rajkumar and Veerappan: ಭೀಮನ ಅಮವಾಸ್ಯೆ ಬಂತೆಂದರೆ 26 ವರ್ಷಗಳ ಹಿಂದೆ ನಡೆದಿದ್ದ ಆ ಕರಾಳ ಘಟನೆಯ ನೆನಪು ಕನ್ನಡಿಗರಿಗೆ ಆಗುತ್ತದೆ. ಇದೇ ಭೀಮನ ಅಮವಾಸ್ಯೆಯಂದು ಕಾಡುಗಳ್ಳ ವೀರಪ್ಪನ್, ಅಭಿಮಾನಿಗಳ ದೇವರು ಅಣ್ಣಾವ್ರು, ಡಾ ರಾಜ್​ಕುಮಾರ್ ಅವರನ್ನು ಅಪಹರಿಸಿದ್ದ. ಅಂದಹಾಗೆ ಆ ದಿನ ರಾತ್ರಿ ಏನಾಗಿತ್ತು? ವೀರಪ್ಪನ್-ಪಾರ್ವತಮ್ಮ ನಡುವೆ ನಡೆದ ಮಾತುಕತೆ ಏನು? ಇಲ್ಲಿದೆ ಮಾಹಿತಿ...

ಆ ಅಮಾವಾಸ್ಯೆಯ ರಾತ್ರಿ ನಡೆದಿದ್ದೇನು? ವೀರಪ್ಪನ್​ಗೆ ಪಾರ್ವತಮ್ಮ ಹೇಳಿದ್ದೇನು?
Dr Rajkumar Kidnap
ಮಂಜುನಾಥ ಸಿ.
|

Updated on: Aug 12, 2026 | 9:28 AM

Share

ಮುಖ್ಯಾಂಶಗಳು

  • ಇಂದು ಭೀಮನ ಅಮವಾಸ್ಯೆ
  • ಭೀಮನ ಅಮವಾಸ್ಯೆಯಂದೇ ಡಾ ರಾಜ್​​ಕುಮಾರ್ ಅಪಹರಣ ನಡೆದಿತ್ತು.
  • ಆ ದಿನ ಅಮಾವಾಸ್ಯೆಯ ರಾತ್ರಿ ನಡೆದಿದ್ದೇನು? ಪೂರ್ಣ ಮಾಹಿತಿ ಇಲ್ಲಿದೆ.

ಭೀಮನ ಅಮವಾಸ್ಯೆ ಬಂತೆಂದರೆ ಆ ಕರಾಳ ರಾತ್ರಿಯ ನೆನಪು ಕನ್ನಡಿಗರಿಗೆ ಆಗಿಯೇ ಆಗುತ್ತದೆ. 26 ವರ್ಷಗಳ ಹಿಂದೆ 2000ರ ಭೀಮನ ಅಮಾವಾಸ್ಯೆಯ ದಿನದಂದೆ ಕನ್ನಡಿಗರ ಕಣ್ಮಣಿ ಡಾ ರಾಜ್​​ಕುಮಾರ್ (Dr Rajkumar) ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ. ಆ ನಂತರ 108 ದಿನಗಳ ಕಾಲ ತನ್ನ ಅಧೀನದಲ್ಲಿ ಇರಿಸಿಕೊಂಡು ಅಂತಿಮವಾಗಿ ಬಿಡುಗಡೆ ಮಾಡಿದ್ದ. ಆದರೆ ಆ 108 ದಿನಗಳು ರಾಜ್​​ಕುಮಾರ್ ಕುಟುಂಬ, ಕನ್ನಡ ಚಿತ್ರರಂಗ, ಕರ್ನಾಟಕದ ಜನ ಸಾಕಷ್ಟು ನೋವು, ಆತಂಕಗಳನ್ನು ಅನುಭವಿಸಿದ್ದರು. ಅಂತಿಮವಾಗಿ ಎಲ್ಲವೂ ಸುಖಾಂತ್ಯವಾಯ್ತಾದರೂ, ಆ ಅಮಾವಾಸ್ಯೆಯ ರಾತ್ರಿ ನಡೆದಿದ್ದು ಏನು? ಹೇಗೆ? ಪಾರ್ವತಮ್ಮ-ವೀರಪ್ಪನ್ ನಡುವೆ ನಡೆದ ಮಾತುಕತೆ ಏನು? ಮಾಹಿತಿ ಇಲ್ಲಿದೆ…

ವೀರಪ್ಪನ್​​ಗೆ ಡಾ ರಾಜ್​​ಕುಮಾರ್ ಅವರನ್ನು ಅಪಹರಿಸುವ ಉದ್ದೇಶವೇ ಇರಲಿಲ್ಲ. ಮೊದಲಿಗೆ ಆತ ಯೋಜಿಸಿದ್ದು ರಜನೀಕಾಂತ್​​ರನ್ನು ಅಪಹರಿಸಲು ಆದರೆ ಚೆನ್ನೈನಲ್ಲಿ ಸಿಎಂ ನಿವಾಸದ ಪಕ್ಕದಲ್ಲೇ ವಾಸವಾಗಿರುವ ರಜನೀಕಾಂತ್​ ಅನ್ನು ಅಪಹರಿಸಿ ಕಾಡಿಗೆ ತರುವುದು ಅಸಾಧ್ಯವೆಂದು ಆ ಯೋಜನೆಯನ್ನು ಕೈಬಿಟ್ಟ, ಆ ಬಳಿಕ ಆಗ ತಮಿಳುನಾಡು ಸಿಎಂ ಆಗಿದ್ದ ಕರುಣಾನಿಧಿಯ ಪುತ್ರ ಸ್ಟಾಲಿನ್ ಅನ್ನು ಅಪಹರಿಸುವ ಯೋಜನೆ ಮಾಡಲಾಯ್ತು. ಆದರೆ ಸ್ಟಾಲಿನ್ ಅದಾಗಲೇ ಚೆನ್ನೈನ ಮೇಯರ್ ಹಾಗೂ ಅವರ ಸುತ್ತಲೂ ಗನ್​​ಮ್ಯಾನ್​​ಗಳು ಇರುತ್ತಿದ್ದರು. ಹಾಗಾಗಿ ಆ ಯೋಚನೆಯನ್ನೂ ಕೈಬಿಟ್ಟ. ಕೊನೆಗೆ ಹೊಳೆದಿದ್ದು ರಾಜ್​​ಕುಮಾರ್ ಹೆಸರು. ವೀರಪ್ಪನ್ ಅಡಗುತಾಣದಿಂದ ಕೇವಲ 20 ಕಿ.ಮೀ ದೂರದಲ್ಲಿ ಡಾ ರಾಜ್​​ಕುಮಾರ್ ಅವರ ದೊಡ್ಡ ಗಾಜನೂರಿನ ಮನೆ ಇತ್ತು. ಹಾಗಾಗಿ ರಾಜ್​​ಕುಮಾರ್ ಅಪಹರಣ ಸುಲಭ ಮತ್ತು ಲಾಭದಾಯಕ ಎಂದು ವೀರಪ್ಪನ್​​ಗೆ ಅನಿಸಿತ್ತು.

ರಾಜ್​ಕುಮಾರ್ ಅವರನ್ನು ಅಪಹರಿಸಲು ತನ್ನ ಜ್ಯೋತಿಷಿಗಳಿಂದ ಸಲಹೆಗಳನ್ನು ಸಹ ಪಡೆದಿದ್ದ. ಅಮವಾಸ್ಯೆಯಂದೇ ಅಪಹರಿಸುವುದು ಅವನ ಉದ್ದೇಶ ಆಗಿತ್ತು. ಅವನು ಅಂದುಕೊಂಡಂತೆ ಅದೇ ದಿನ ಅವರ ಕುಕೃತ್ಯ ಕೈಗೂಡಿತು. ತಮ್ಮ ಊರಿನಲ್ಲಿ ಕೊರೆಸಿದ್ದ ಬೋರ್​​ವೆಲ್​​ನಲ್ಲಿ ನೀರು ಬಂದ ಸುದ್ದಿ ತಿಳಿದ ಖುಷಿಯಲ್ಲಿ ರಾಜ್​​ಕುಮಾರ್ ಅವರು ದೊಡ್ಡ ಗಾಜನೂರಿಗೆ ಬಂದಿದ್ದರು. 2000ರ ಜುಲೈ 30ರಂದು ರಾತ್ರಿ ಊಟ ಮುಗಿಸಿ, ಆರಾಮವಾಗಿ ಕೂತಿದ್ದ ಸಮಯದಲ್ಲಿ ಬಂದೂಕುಗಳನ್ನು ಹಿಡಿದು ವೀರಪ್ಪನ್ ಸಹಚರರು ಮನೆಗೆ ಬಂದರು. ಮನೆಯಲ್ಲಿ ಪಾರ್ವತಮ್ಮ ರಾಜ್​​ಕುಮಾರ್, ಅಳಿಯ ಗೋವಿಂದರಾಜು, ಸಹಾಯಕ ನಾಗಪ್ಪ, ಸಂಬಂಧಿ ನಾಗೇಶ್, ಡ್ರೈವರ್ ಮತ್ತು ಪಾರ್ವತಮ್ಮ ಇದ್ದರು. ಜೊತೆಗೆ ಕೆಲವು ಕೆಲಸದವರು.

ಇದನ್ನೂ ಓದಿ:ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು ಡಾ ರಾಜ್​​ಕುಮಾರ್ ಅವರಿಂದ, ಹೇಗೆ ಗೊತ್ತೆ?

ಮೊದಲಿಗೆ ವೀರಪ್ಪನ್ ಸಹಚರರು ಮನೆಯೊಳಗೆ ಪ್ರವೇಶಿಸಿದರು. ಅದಾದ ಎರಡು ಮೂರು ನಿಮಿಷಗಳಲ್ಲಿ ವೀರಪ್ಪನ್ ಒಳಗೆ ಬಂದು ರಾಜ್​​ಕುಮಾರ್ ಅವರನ್ನುದ್ದೇಶಿಸಿ ‘ಅಯ್ಯ, ಹೊರಡೋಣ ಬನ್ನಿ’ ಎಂದ. ಪಾರ್ವತಮ್ಮ ಅವರ ಕೈಗೆ ಕ್ಯಾಸೆಟ್ ನೀಡಿ, ಇದನ್ನು ಸಿಎಂ ಎಸ್​​ಎಂ ಕೃಷ್ಣ ಅವರಿಗೆ ಕೊಡಿ, ನನಗೆ ಏನು ಬೇಕೋ ಅವರಿಗೆ ತಿಳಿಯುತ್ತದೆ. ಅಯ್ಯನವರ ಬಗ್ಗೆ ಚಿಂತಿಸಬೇಡಿ ಅವರಿಗೆ ಏನೂ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದ.

ಆದರೆ ಭಯ, ಆತಂಕದಲ್ಲಿ ಗದ್ಗದಿತರಾದ ಪಾರ್ವತಮ್ಮನವರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ರಾಜ್​​ಕುಮಾರ್ ಅವರಿಗೆ ಸಹಾಯವಾಗಿರುತ್ತದೆ ಎಂದು ಅಳಿಯ ಗೋವಿಂದರಾಜು, ಸಹಾಯಕ ನಾಗಪ್ಪ, ಸಂಬಂಧಿ ನಾಗೇಶ್ ಅವರನ್ನು ಜೊತೆಗೆ ಕಳಿಸಿದರು. ಡ್ರೈವರ್ ಅನ್ನೂ ಕರೆದೊಯ್ಯುವ ಉದ್ದೇಶ ವೀರಪ್ಪನ್​​ಗೆ ಇತ್ತು, ಆದರೆ ಪಾರ್ವತಮ್ಮನವರು ಬೆಂಗಳೂರಿಗೆ ಹೋಗಬೇಕಲು ಡ್ರೈವರ್ ಅವಶ್ಯಕತೆ ಇದ್ದ ಕಾರಣ ಅವನನ್ನು ಅಲ್ಲಿಯೇ ಬಿಟ್ಟು ಹೋದ ವೀರಪ್ಪನ್. ಹೋಗಬೇಕಾದರೆ ‘ಇಂದು ನಿನ್ನ ಸಮಯ ಚೆನ್ನಾಗಿದೆ, ನೀನು ಕರೆದುಕೊಂಡು ಹೋಗು, ನಾನು ಕರೆದುಕೊಂಡು ಬರುತ್ತೇನೆ’ ಎಂದು ವೀರಪ್ಪನ್​​ಗೆ ಹೇಳಿದ್ದಾಗಿ ಪಾರ್ವತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.

ವೀರಪ್ಪನ್ ರಾಜ್​​ಕುಮಾರ್ ಅವರನ್ನು ಕರೆದುಕೊಂಡು ಕತ್ತಲಲ್ಲಿ ಮರೆಯಾಗುತ್ತಿದ್ದಂತೆ ಇತ್ತ ಪಾರ್ವತಮ್ಮನವರು ಡ್ರೈವರ್ ಅನ್ನು ಕರೆದುಕೊಂಡು ಗಾಜನೂರಿನಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿದರು. ಮೈಸೂರಿನಲ್ಲಿ ತಮ್ಮ ಪರಿಚಯದ ಜ್ಯೋತಿಷಿ ಬಾಷ್ಯಂಸ್ವಾಮಿ ಅವರ ಮನೆಗೆ ಹೋಗಿ, ಅಲ್ಲಿ, ರಾಜ್​​ಕುಮಾರ್ ಅವರ ವಿಷಯ ತಿಳಿಸಿ, ಭವಿಷ್ಯದ ಸಲಹೆ ಪಡೆದರು. ಅಲ್ಲಿಂದ ಹೊರಟು ನೇರವಾಗಿ ಸಿಎಂ ಎಸ್​ಎಂ ಕೃಷ್ಣ ಅವರ ಮನೆಯನ್ನು ಪಾರ್ವತಮ್ಮನವರು ತಲುಪಿದಾಗ ಬೆಳಿಗಿನ ಜಾವ ಮೂರು ಗಂಟೆ.

ಆ ಸಮಯದಲ್ಲಿ ಸಿಎಂ ಅವರನ್ನು ಎಬ್ಬಿಸಿ, ಅವರಿಗೆ ನಡೆದಿದ್ದೆಲ್ಲವನ್ನೂ ತಿಳಿಸಿ, ಅವರಿಗೆ ಕ್ಯಾಸೆಟ್ ನೀಡಿದರು. ಕೂಡಲೇ ಸಿಎಂ ಅವರು ಗೃಹ ಸಚಿವ ಖರ್ಗೆ, ಡಿಜಿಪಿ ದಿನಕರ್, ಗೃಹ ಕಾರ್ಯದರ್ಶಿ ಪ್ರಕಾಶ್, ಭಟ್ಟಾಚಾರ್ಯ, ಸಚಿವ ಸಗೀರ್ ಅಹ್ಮದ್ ಇನ್ನೂ ಕೆಲವರನ್ನು ಕರೆಸಿಕೊಂಡು ವೀರಪ್ಪನ್ ಕಳಿಸಿದ್ದ ಕ್ಯಾಸೆಟ್ ಕೇಳಿ ತುರ್ತು ಸಭೆ ನಡೆಸಿದರು. ಅಲ್ಲಿಂದ 108 ದಿನಗಳ ವರೆಗೆ ಸರ್ಕಾರ ಸತತ ಪ್ರಯತ್ನ ಮಾಡಿ ರಾಜ್​​ಕುಮಾರ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us