ನಿರ್ದೇಶಕ ಪುರಿ ಜಗನ್ನಾಥ್ ದಕ್ಷಿಣ ಭಾರತದ ಪ್ರತಿಭಾವಂತ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿದ್ದವರು. ಹಲವು ಹಿರಿಯ ನಿರ್ದೇಶಕ, ನಿರ್ಮಾಪಕರ ಅಭಿಪ್ರಾಯದಂತೆ ರಾಜಮೌಳಿಗಿಂತಲೂ ಪ್ರತಿಭಾವಂತ ನಿರ್ದೇಶಕ ಪುರಿ ಜಗನ್ನಾಥ್. ಸ್ವತಃ ರಾಜಮೌಳಿಯ ತಂದೆಯೇ ಈ ಮಾತು ಒಪ್ಪಿಕೊಂಡಿದ್ದಾರೆ. ಆದರೆ ಪುರಿ ಜಗನ್ನಾಥ್ಗೆ ಸತತ ಸೋಲುಗಳೇ ಎದುರಾಗುತ್ತವೆ. ಪುರಿ ಜಗನ್ನಾಥ್ ಒಂದೊಳ್ಳೆ ಹಿಟ್ ಸಿನಿಮಾ ನೀಡಿ ವರ್ಷಗಳೇ ಆಗಿಬಿಟ್ಟಿವೆ. ಸೋತು-ಸೋತು ಕಂಗೆಟ್ಟು ಈಗ ತಮಿಳು ನಾಯಕನ ಮೊರೆ ಹೋಗಿದ್ದಾರೆ ಪುರಿ ಜಗನ್ನಾಥ್. ಮಾತ್ರವಲ್ಲದೆ ತಮ್ಮ ಸಿನಿಮಾ ನಿರ್ದೇಶನದ ಶೈಲಿಯನ್ನೂ ಬದಲಿಸಿಕೊಳ್ಳುತ್ತಿದ್ದಾರೆ
ಪುರಿ ಜಗನ್ನಾಥ್, ಇದೀಗ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಅವರೊಟ್ಟಿಗೆ ಸಿನಿಮಾ ಮಾಡಲಿದ್ದಾರೆ. ವಿಜಯ್ ಸೇತುಪತಿಗೆ ಈಗಾಗಲೇ ಕತೆ ಹೇಳಿರುವ ಪುರಿ ಜಗನ್ನಾಥ್, ಸಿನಿಮಾದ ಚಿತ್ರಕತೆ ರೆಡಿ ಮಾಡಿಟ್ಟುಕೊಂಡಿದ್ದಾರಂತೆ. ಸಿನಿಮಾಕ್ಕೆ ‘ಬೆಗ್ಗರ್’ ಎಂದು ಹೆಸರಿಟ್ಟಿದ್ದು, ಸಿನಿಮಾದ ಕತೆ ಈ ವರೆಗಿನ ಪುರಿ ಜಗನ್ನಾಥ್ ಸಿನಿಮಾಗಳಿಗಿಂತಲೂ ಬಹಳ ಭಿನ್ನವಾಗಿರಲಿದೆಯಂತೆ. ತಮ್ಮ ನಿರ್ದೇಶನ ಶೈಲಿಯನ್ನು ಸಹ ಈ ಸಿನಿಮಾಕ್ಕಾಗಿ ಬದಲಾಯಿಸಿಕೊಂಡಿದ್ದಾರಂತೆ ಪುರಿ ಜಗನ್ನಾಥ್.
ವಿಜಯ್ ದೇವರಕೊಂಡ ಜೊತೆಗೆ ‘ಲೈಗರ್’ ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು ಪುರಿ ಜಗನ್ನಾಥ್. ಆದರೆ ಆ ಸಿನಿಮಾ ಇನ್ನಿಲ್ಲದಂತೆ ಸೋಲು ಕಂಡಿತು. ಅದಾದ ಬಳಿಕ ‘ಡಬಲ್ ಇಸ್ಮಾರ್ಟ್’ ಸಿನಿಮಾ ಮಾಡಿದರು. ಅದೂ ಸಹ ನಿರೀಕ್ಷಿತ ಗೆಲುವು ಕಾಣಲಿಲ್ಲ. ಇದೇ ಕಾರಣಕ್ಕೆ ಇದೀಗ ವಿಜಯ್ ಸೇತುಪತಿ ಜೊತೆಗೆ ಭಿನ್ನ ರೀತಿಯ ಸಿನಿಮಾಕ್ಕೆ ಕೈ ಹಾಕಿದ್ದಾರೆ ಪುರಿ. ತಮ್ಮ ಈ ಹಿಂದಿನ ಸಿನಿಮಾಗಳ ರೀತಿ ಹೀರೋ ವೈಭವೀಕರಣ, ನಾಯಕ-ನಾಯಕಿ ರೊಮ್ಯಾನ್ಸ್, ಲವ್ ಟ್ರ್ಯಾಕ್ ಎಲ್ಲವೂ ಇಲ್ಲದೆ ಸಂಪೂರ್ಣ ಭಿನ್ನ ಕತೆಯನ್ನು ಹೇಳಲಿದ್ದಾರಂತೆ ಪುರಿ.
ಇದನ್ನೂ ಓದಿ:ದೂರಾದ ಪುರಿ ಜಗನ್ನಾಥ್-ಚಾರ್ಮಿ, 10 ವರ್ಷದ ‘ಗೆಳೆತನ’ ಅಂತ್ಯ?
ಪುರಿ ಜಗನ್ನಾಥ್, ಹಿರಿಯ ನಟ ನಾಗಾರ್ಜುನ ಅವರಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. 20 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಪುರಿ-ನಾಗಾರ್ಜುನ ಕಾಂಬಿನೇಷನ್ನ ‘ಶಿವಮಣಿ’ ಸಿನಿಮಾದ ಮುಂದಿನ ಭಾಗವನ್ನು ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಆ ಸಿನಿಮಾ ಖಾತ್ರಿ ಆಗುವ ಮುನ್ನವೇ ಇದೀಗ ವಿಜಯ್ ಸೇತುಪತಿ ಜೊತೆಗಿನ ಸಿನಿಮಾದ ಸುದ್ದಿ ಹೊರಬಿದ್ದಿದೆ. ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ ಸಹ ಪುರಿ ಜಗನ್ನಾಥ್ಗೆ ಡೇಟ್ಸ್ ಕೊಡುವ ಭರವಸೆ ಕೊಟ್ಟಿದ್ದು, ಸೋತ ಬಗ್ಗೆ ಬೇಸರ ಬೇಡ ಒಟ್ಟಿಗೆ ಸಿನಿಮಾ ಮಾಡೋಣ ಎಂದು ಕರೆದಿದ್ದಾರೆ. ಪುರಿಗೆ ಮತ್ತೆ ಗೆಲುವು ಯಾರಿಂದ ಧಕ್ಕುತ್ತದೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ