AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣಾವ್ರ ಹುಟ್ಟುಹಬ್ಬದಂದು ಮೊಮ್ಮಗಳ ಸಿನಿಮಾ ಬಿಡುಗಡೆ

Shiva Rajkumar: ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರ ಕಿರಿಯ ಪುತ್ರಿ ನಿವೇದಿತಾ ಅವರು ಚಿತ್ರರಂಗ ಪ್ರವೇಶಿಸಿದ್ದಾರೆ. ಈ ಹಿಂದೆ ವೆಬ್ ಸರಣಿ ನಿರ್ಮಾಣ ಮಾಡಿದ್ದ, ನಿವೇದಿತಾ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ವಿಶೇಷ ದಿನದಂದು ಬಿಡುಗಡೆ ಮಾಡಲಿದ್ದಾರೆ.

ಅಣ್ಣಾವ್ರ ಹುಟ್ಟುಹಬ್ಬದಂದು ಮೊಮ್ಮಗಳ ಸಿನಿಮಾ ಬಿಡುಗಡೆ
Niveditha Shivarajkumar
ಮಂಜುನಾಥ ಸಿ.
|

Updated on: Mar 19, 2025 | 5:35 PM

Share

ಅಣ್ಣಾವ್ರ ಕುಟುಂಬದ ಮೂರನೇ ತಲೆಮಾರು ಈಗ ಸಿನಿಮಾಗಳಲ್ಲಿ ಸಕ್ರಿಯವಾಗಿದೆ. ರಾಘವೇಂದ್ರ ರಾಜ್​ಕುಮಾರ್ ಅವರ ಇಬ್ಬರು ಮಕ್ಕಳು ನಾಯಕ ನಟರಾಗಿ ಮಿಂಚುತ್ತಿದ್ದಾರೆ. ಪುನೀತ್​ ಅವರ ಇಬ್ಬರು ಹೆಣ್ಣು ಮಕ್ಕಳು ಇನ್ನೂ ಚಿಕ್ಕವರಾಗಿದ್ದು ಚಿತ್ರರಂಗಕ್ಕೆ ಕಾಲಿಡಲು ಸಾಕಷ್ಟು ಸಮಯವಿದೆ. ಶಿವಣ್ಣನ ದೊಡ್ಡ ಮಗಳು ವೈದ್ಯೆಯಾಗಿದ್ದು, ಮದುವೆಯಾಗಿ ಆರಾಮದಿಂದಿದ್ದಾರೆ. ಅವರ ಕಿರಿಯ ಪುತ್ರಿ ನಿವೇದಿತಾ ಸಹ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದು, ಅಮ್ಮ, ಚಿಕ್ಕಮ್ಮ, ಅಜ್ಜಿಯವರಂತೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ನಿವೇದಿತಾ ಶಿವರಾಜ್ಕುಮಾರ್ ಅವರು ‘ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದು, ತಮ್ಮ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಿಸಿರುವ ಮೊದಲ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಅದೂ ವಿಶೇಷ ದಿನದಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ನಿವೇದಿತಾ ಅವರು ‘ಫೈರ್​ ಫ್ಲೈ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದು, ಈ ಸಿನಿಮಾ ಅಣ್ಣಾವ್ರ ಹುಟ್ಟುಹಬ್ಬದಂದು ಅಂದರೆ ಏಪ್ರಿಲ್ 24 ರಂದು ತೆರೆಗೆ ಬರಲಿದೆ.

ನಿವೇದಿತಾ ನಿರ್ಮಾಣ ಮಾಡಿರುವ ಮೊದಲ ಸಿನಿಮಾ ‘ಫೈರ್ ಫ್ಲೈ’ನಲ್ಲಿ ವಂಶಿ ನಾಯಕನಾಗಿ ನಟಿಸಿದ್ದಾರೆ. ಸಿನಿಮಾದ ನಿರ್ದೇಶನವನ್ನೂ ಸಹ ಅವರೇ ಮಾಡಿದ್ದಾರೆ. ಅಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದರ್, ಮೂಗು ಸುರೇಶ್ ಅಂಥಹಾ ಪ್ರತಿಭಾವಂತ ಮತ್ತು ಅನುಭವಿ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ

ಮಗಳ ಮೊದಲ ಸಿನಿಮಾದ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ‘ಅಪ್ಪಾಜಿ ಹುಟ್ಟುಹಬ್ಬದಂದು ನನ್ನ ಮಗಳ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ವಿಶೇಷವಾದ ಕ್ಷಣ. ನಮ್ಮ ಕುಟುಂಬದ ಮೇಲೆ ಜನರು ತೋರಿಸಿರುವ ಎಲ್ಲಾ ಪ್ರೀತಿ ಅಪ್ಪಾಜಿಯವರಿಂದ ಬಂದಿದೆ. ಮತ್ತು ಮುಂದಿನ ಪೀಳಿಗೆಯ ಮೇಲೆ ಎಲ್ಲರೂ ಅದೇ ಪ್ರೀತಿಯನ್ನು ತೋರಿಸುವುದನ್ನು ನೋಡುವುದು ತುಂಬಾ ಖುಷಿ ಇದೆ. ಎಲ್ಲಾ ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಪ್ರೇಮಿಗಳ ನಿರಂತರ ಬೆಂಬಲಕ್ಕೆ ಧನ್ಯವಾದಗಳು. ಫೈರ್ಫ್ಲೈ ಸಾವು, ನೋವು, ಮತ್ತು ಜೀವನ ಸ್ಫೂರ್ತಿಯ ಮರು ಚಿಗುರುವಿಕೆಯ ಬಗ್ಗೆ ಮಾತನಾಡುವ ಚಿತ್ರ. ಈ ರೀತಿ ಗಾಢವಾದ ವಿಷಯವನ್ನು ಸರಳವಾಗಿ, ಹಾಸ್ಯದ ಮೂಲಕ ಹೇಳುವುದು ನನಗೆ ತುಂಬಾ ಹತ್ತಿರವಾಯ್ತು. ಎಲ್ಲರೂ ಅದನ್ನು ಮೆಚ್ಚುತ್ತಾರೆ ಎಂದು ನನಗೆ ನಂಬಿಕೆ ಇದೆʼ ಎಂದು ಹೇಳಿದ್ದಾರೆ.

‘ಫೈರ್ ಫ್ಲೈ’ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸಿನಿಮಾದ ಹಾಡುಗಳು ಸುಂದರವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ನಂಬಿಕೆ. ಯುಗಾದಿ ಹಬ್ಬಕ್ಕೆ ಸಿನಿಮಾದ ಹಾಡು ಬಿಡುಗಡೆ ಆಗಲಿದೆ. ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಅವರ ಸಹ-ನಿರ್ದೇಶನ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಮ್ ಅವರ ಸಂಕಲನ, ವರದರಾಜ್ ಕಾಮತ್ ಅವರ ಕಲೆ, ಅರ್ಜುನ್ ರಾಜ್ ಅವರ ಸಾಹಸ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಈ ಚಿತ್ರವು ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರು ಮನಸ್ಸು ಗೆಲ್ಲುವ ಚಿತ್ರವಾಗಿದೆ. ಈ ವರ್ಷದ ಕನ್ನಡ ಚಿತ್ರರಂಗದಲ್ಲಿ ತುಂಬಾ ಭರವಸೆ ಮೂಡಿಸಿರುವ ಚಿತ್ರಗಳಲ್ಲಿ “ಫೈರ್ ಫ್ಲೈ”. ಕೂಡ ಒಂದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ