
ಟಾಲಿವುಡ್ ಹೀರೋ ಅಲ್ಲು ಅರ್ಜುನ್ ಅವರಿಗೆ ಇದು ಕಷ್ಟದ ಕಾಲ. ‘ಪುಷ್ಪ 2’ ಸಿನಿಮಾ ಪ್ರದರ್ಶನ ಕಾಣುತ್ತಿದ್ದ ‘ಸಂಧ್ಯಾ’ ಚಿತ್ರಮಂದಿರದಲ್ಲಿ ಕಾಲ್ತುಳಿತದಿಂದ 39ರ ಪ್ರಾಯದ ರೇವತಿ ಎಂಬ ಅಭಿಮಾನಿ ನಿಧನರಾದರು. ರೇವತಿ ಪುತ್ರ, 9ನೇ ವಯಸ್ಸಿನ ಶ್ರೀತೇಜ್ ಪರಿಸ್ಥಿತಿ ಗಂಭೀರವಾಗಿದೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನ ಬಗ್ಗೆ ಅಲ್ಲು ಅರ್ಜುನ್ ಅವರಿಗೆ ಅಪಾರ ಕಾಳಜಿ ಇದೆ. ಆದರೆ ಶ್ರೀತೇಜ್ ಭೇಟಿ ಮಾಡಲು ಅಲ್ಲು ಅರ್ಜುನ್ ಅವರಿಗೆ ಸಾಧ್ಯವಿಲ್ಲ. ಈ ಕುರಿತು ಅಲ್ಲು ಅರ್ಜುನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸ್ಪಷ್ಟನೆ ನೀಡಿದ್ದಾರೆ.
‘ದುರದೃಷ್ಟಕರ ಘಟನೆಯ ಬಳಿಕ ನಿರಂತರ ವೈದ್ಯಕೀಯ ನಿಗಾದಲ್ಲಿ ಇರುವ ಬಾಲಕ ಶ್ರೀತೇಜ್ ಬಗ್ಗೆ ನನಗೆ ಅಪಾರ ಕಾಳಜಿ ಇದೆ. ಆದರೆ ಕಾನೂನು ಪ್ರಕ್ರಿಯೆಯ ಕಾರಣದಿಂದ ಆತನನ್ನಾಗಲೀ ಅಥವಾ ಅವನ ಕುಟುಂಬದವರನ್ನಾಗಲೀ ನಾನು ಭೇಟಿಯಾಗಬಾರದು ಎಂದು ಸೂಚಿಸಿದ್ದಾರೆ’ ಎಂದು ಅಲ್ಲು ಅರ್ಜುನ್ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಪ್ರಕರಣ: ಜೂ ಎನ್ಟಿಆರ್, ರಾಮ್ ಚರಣ್, ಶಾರುಖ್ ಅನ್ನು ಬಂಧಿಸಲಿಲ್ಲ ಏಕೆ?
‘ಶ್ರೀತೇಜ್ ಕುಟುಂಬಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಆ ಕುಟುಂಬದ ಅಗತ್ಯತೆಗಳನ್ನು ಪೂರೈಸಿ, ಚಿಕಿತ್ಸೆ ಕೊಡಿಸುವ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ. ಆತ ಬೇಗ ಚೇತರಿಕ ಕಾಣಲಿ ಅಂತ ನಾನು ಪ್ರಾರ್ಥನೆ ಮಾಡುತ್ತೇನೆ. ಆದಷ್ಟು ಬೇಗ ಆತನನ್ನು ಮತ್ತು ಆತನ ಕುಟುಂಬದವರನ್ನು ಭೇಟಿ ಮಾಡಲು ಕಾಯುತ್ತಿದ್ದೇನೆ’ ಎಂದು ಅಲ್ಲು ಅರ್ಜುನ್ ಅವರು ಬರಹ ಪೂರ್ಣಗೊಳಿಸಿದ್ದಾರೆ.
ಕಾಲ್ತುಳಿದ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಆದೇಶಿಸಲಾಗಿತ್ತು. ಆದರೆ ಮಧ್ಯಂತರ ಜಾಮೀನು ಸಿಕ್ಕಿದ್ದರಿಂದ ಅಲ್ಲು ಅರ್ಜುನ್ ಅವರಿಗೆ ರಿಲೀಫ್ ಸಿಕ್ಕಿತು. ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಕ್ಕೆ ತೆಲಂಗಾಣ ಸರ್ಕಾರವನ್ನು ಅನೇಕರು ಟೀಕಿಸಿದ್ದಾರೆ. ಇನ್ನೊಂದೆಡೆ, ‘ಪುಷ್ಪ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ವಿಶ್ವಾದ್ಯಂತ 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅಲ್ಲು ಅರ್ಜುನ್ ಅವರ ವೃತ್ತಿಜೀವನದ ಅತಿ ದೊಡ್ಡ ಸಕ್ಸಸ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.