
‘ಮೆಗಾಸ್ಟಾರ್’ ಚಿರಂಜೀವಿ (Megastar Chiranjeevi) ಹಾಗೂ ನಿರ್ದೇಶಕ ಬಾಬಿ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಮೆಗಾ 158’ (Mega 158) ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಅಪ್‌ಡೇಟ್‌ಗಳು ಹೊರಬರುತ್ತಿದ್ದು, ಸಿನಿಪ್ರೇಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿದೆ. ‘ವಾಲ್ಟೇರ್ ವೀರಯ್ಯ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಈ ಜೋಡಿ ಮತ್ತೊಮ್ಮೆ ಒಂದಾಗಿದ್ದು, ಸದ್ಯ ತಮಿಳುನಾಡಿನ ಪ್ರಕೃತಿ ರಮಣೀಯ ತಾಣ ಪೊಳ್ಳಾಚಿಯಲ್ಲಿ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ (Rachita Ram) ನಟಿಸುತ್ತಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಈಗಾಗಲೇ ಮಲ್ಟಿಸ್ಟಾರರ್ ಸಿನಿಮಾದಂತೆ ಕಾಣಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರಕ್ಕೆ ಈಗ ಕನ್ನಡದ ಖ್ಯಾತ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಎಂಟ್ರಿ ಕೊಟ್ಟಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಹರಿದಾಡುತ್ತಿದೆ. ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರದ ನೆಗೆಟಿವ್ ಶೆಡ್ ಪಾತ್ರದ ಮೂಲಕ ಧೂಳೆಬ್ಬಿಸಿದ್ದ ರಚಿತಾ ರಾಮ್, ಈಗ ಮೆಗಾಸ್ಟಾರ್ ಚಿತ್ರದಲ್ಲಿ ಅತ್ಯಂತ ಪ್ರಮುಖ ಹಾಗೂ ಬಲಿಷ್ಠ ಪಾತ್ರವೊಂದನ್ನು ಪೋಷಿಸಲಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಈ ವಿಶಿಷ್ಟ ಪಾತ್ರಕ್ಕಾಗಿ ಮೊದಲು ಮಲಯಾಳಂ ಮೂಲದ ನಟಿ ಹನಿ ರೋಸ್ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಅವರು ಆರಂಭದಲ್ಲಿ ಆಸಕ್ತಿ ತೋರಿಸಿದರೂ, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಇದೀಗ ಆ ಜಾಗಕ್ಕೆ ರಚಿತಾ ರಾಮ್ ಅವರನ್ನು ಕರೆತರಲಾಗಿದ್ದು, ಶೀಘ್ರದಲ್ಲೇ ಅವರು ಪೊಳ್ಳಾಚಿ ಶೆಡ್ಯೂಲ್‌ನಲ್ಲಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಹಬ್ಬಿದೆ.
ನಿರ್ದೇಶಕ ಬಾಬಿ ಈ ಬಾರಿ ಕೇವಲ ಆ್ಯಕ್ಷನ್ ಮಾತ್ರವಲ್ಲದೆ, ಕಥೆಯಲ್ಲಿ ನಾಯಕಿಯರ ಪಾತ್ರಗಳಿಗೂ ಅಷ್ಟೇ ತೂಕ ನೀಡಿದ್ದಾರೆ ಎಂಬುದು ಚಿತ್ರದ ತಾರಾಬಳಗವನ್ನು ನೋಡಿದರೆ ತಿಳಿಯುತ್ತದೆ. ಈಗಾಗಲೇ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಹಾಗೂ ಮಲಯಾಳಂನ ಉದಯೋನ್ಮುಖ ನಟಿ ಅನಸ್ವರ ರಾಜನ್ ಚಿತ್ರದ ಭಾಗವಾಗಿದ್ದಾರೆ. ಚಿತ್ರದಲ್ಲಿ ಅನಸ್ವರ ರಾಜನ್ ಅವರು ಚಿರಂಜೀವಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಖಚಿತವಾಗಿದೆ. ಇದರೊಂದಿಗೆ ಗ್ಲಾಮರಸ್ ನಟಿ ನಿವೇತಾ ಪೆತುರಾಜ್ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
‘ಟಾಕ್ಸಿಕ್’, ‘ಜನ ನಾಯಗನ್’ ರೀತಿಯ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ ಈಗ ‘ಮೆಗಾ 158’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ವೆಂಕಟ್ ಕೆ. ನಾರಾಯಣ್ ಮತ್ತು ಲೋಕೇಶ್ ಅವರು ಅತ್ಯಂತ ಅದ್ಧೂರಿ ವೆಚ್ಚದಲ್ಲಿ ಈ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ತಮನ್ ಎಸ್. ಸಂಗೀತ ನೀಡುತ್ತಿದ್ದು, ‘ಜೈಲರ್’ ಖ್ಯಾತಿಯ ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:14 am, Sun, 7 June 26