‘ವಾರಣಾಸಿ’ ಚಿತ್ರೀಕರಣದ ಬಾಕಿ ಇರುವುದೆಷ್ಟು? ಮಾಹಿತಿ ನೀಡಿದ ರಾಜಮೌಳಿ

Varanasi movie shooting: ‘ವಾರಣಾಸಿ’ ಸಿನಿಮಾನಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಹೀಗಿರುವಾಗ ಸಿನಿಮಾದ ಬಗ್ಗೆ ಅಪ್​​ಡೇಟ್ ಒಂದನ್ನು ರಾಜಮೌಳಿ ಹಂಚಿಕೊಂಡಿದ್ದಾರೆ.

‘ವಾರಣಾಸಿ’ ಚಿತ್ರೀಕರಣದ ಬಾಕಿ ಇರುವುದೆಷ್ಟು? ಮಾಹಿತಿ ನೀಡಿದ ರಾಜಮೌಳಿ
Varanasi

Updated on: Jun 26, 2026 | 4:50 PM

ರಾಜಮೌಳಿ (Rajamouli) ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ವಾರಣಾಸಿ’ ಸಿನಿಮಾ ಇದೀಗ ವಿಶ್ವ ಚಿತ್ರರಂಗದಲ್ಲಿ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಈ ಅಡ್ವೆಂಚರಸ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಹೀಗಿರುವಾಗ ಸಿನಿಮಾದ ಬಗ್ಗೆ ಅಪ್​​ಡೇಟ್ ಒಂದನ್ನು ರಾಜಮೌಳಿ ಹಂಚಿಕೊಂಡಿದ್ದಾರೆ.

‘ವಾರಣಾಸಿ’ ಸಿನಿಮಾದ ಟೀಸರ್, ಪೋಸ್ಟರ್​​ಗಳು ಈಗಾಗಲೇ ಸಖತ್ ಸದ್ದು ಮಾಡುತ್ತಿವೆ. ಸಿನಿಮಾದ ಬಗ್ಗೆ ನಾನಾ ರೀತಿಯ ಸುದ್ದಿಗಳು ಈಗಾಗಲೇ ಹರಿದಾಡುತ್ತಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪೃಥ್ವಿರಾಜ್ ಸುಕುಮಾರ್, ಸಿನಿಮಾದ ಒಂದು ಸಣ್ಣ ದೃಶ್ಯಕ್ಕೆ 100 ಟೇಕ್​​ಗಳನ್ನು ತೆಗೆದುಕೊಂಡ ಬಗ್ಗೆ ಹೇಳಿಕೊಂಡಿದ್ದರು. ಆ ಮಟ್ಟಿಗೆ ಸಿನಿಮಾವನ್ನು ಬಲು ಜಾಗೃತೆಯಿಂದ ಮತ್ತು ಪೂರ್ಣ ಗುಣಮಟ್ಟದಿಂದ ನಿರ್ಮಾಣ ಮಾಡಲಾಗುತ್ತಿದೆ.

ಪ್ರಸ್ತುತ ಚಿತ್ರೀಕರಣದ ಹಂತದಲ್ಲಿರುವ ಈ ಸಿನಿಮಾ ಬಗ್ಗೆ ನಿರ್ದೇಶಕ ರಾಜಮೌಳಿ ಅಪ್​​ಡೇಟ್ ನೀಡಿದ್ದಾರೆ, ‘ವಾರಣಾಸಿ’ ಸಿನಿಮಾ ಚಿತ್ರೀಕರಣದ ಪ್ರಮುಖ ಭಾಗವನ್ನು ಪೂರ್ಣಗೊಳಿಸಿದ್ದೇವೆ. ಇದು ಸಿನಿಮಾದ ಅತ್ಯಂತ ಪ್ರಮುಖ ಮತ್ತು ಬಲು ಅದ್ಧೂರಿ ಆಕ್ಷನ್ ದೃಶ್ಯವಾಗಿತ್ತು. ಅದರ ಚಿತ್ರೀಕರಣವನ್ನು ನಾವು ಮುಗಿಸಿದ್ದೇವೆ ಎಂದು ರಾಜಮೌಳಿ ಹೇಳಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಎಲ್ಲ ಪ್ರಮುಖ ದೃಶ್ಯಗಳ ಚಿತ್ರೀಕರಣಗಳು ಸಹ ಮುಗಿದಿದ್ದು, ಇನ್ನೇನಿದ್ದರು ಸಣ್ಣ-ಸಣ್ಣ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಇನ್ನು ಹೆಚ್ಚು ಚಿತ್ರೀಕರಣ ಉಳಿದಿಲ್ಲ, ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಸಿನಿಮಾದ ಪೂರ್ಣ ಚಿತ್ರೀಕರಣ ಮುಗಿಯಲಿದೆ’ ಎಂದು ರಾಜಮೌಳಿ ಹೇಳಿದ್ದಾರೆ.

ಇದನ್ನೂ ಓದಿ:‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್​ ಎಂದ ರಾಜಮೌಳಿ

‘ವಾರಣಾಸಿ’ ಸಿನಿಮಾವನ್ನು ಐಮ್ಯಾಕ್ಸ್ ಮಾದರಿಯಲ್ಲಿ ನಿರ್ಮಿಸುತ್ತಿರುವ ಬಗ್ಗೆ ರಾಜಮೌಳಿ ಆಸಕ್ತಿದಾಯಕ ಕಾಮೆಂಟ್ ಮಾಡಿದ್ದಾರೆ. ‘ನಮ್ಮ ಕಣ್ಣುಗಳು ಸಿನಿಮಾ ಸ್ಕೋಪ್ ಫಾರ್ಮ್ಯಾಟ್‌ಗೆ ಒಗ್ಗಿಕೊಂಡಿವೆ, ನನಗೂ ಅದು ಇಷ್ಟ. ಆದರೆ, ‘ವಾರಣಾಸಿ’ ಸಿನಿಮಾದ ಕಥೆ ಐಮ್ಯಾಕ್ಸ್‌ನಲ್ಲಿ ಅದ್ಭುತವಾಗಿ ಇರುತ್ತದೆ ಎಂದು ಮೊದಲಿನಿಂದಲೂ ಅಂದುಕೊಂಡಿದ್ದೇವೆ. ಹಾಗಂತ ಈ ಫಾರ್ಮ್ಯಾಟ್‌ಗಾಗಿ ಕಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಸಣ್ಣಪುಟ್ಟ ಹೊಂದಾಣಿಕೆಗಳನ್ನು ಮಾತ್ರ ಮಾಡಿದ್ದೇವೆ. ಐಮ್ಯಾಕ್ಸ್ ಮತ್ತು ಸಿನಿಮಾ ಸ್ಕೋಪ್ ಎರಡಕ್ಕೂ ಹೊಂದಿಕೆಯಾಗುವಂತೆ ದೃಶ್ಯಗಳನ್ನು ಫ್ರೇಮ್ ಮಾಡುತ್ತಿದ್ದೇವೆ’ ಎಂದು ವಿವರಿಸಿದ್ದಾರೆ.

‘ವಾರಣಾಸಿ’ ಸಿನಿಮಾದ ಚಿತ್ರೀಕರಣವನ್ನು ಹೈದರಾಬಾದ್, ಮಸೈ ಮಾರಾ, ರಾಜಸ್ಥಾನ, ಜೈಪುರ, ಅಮೆಜಾನ್ ಅರಣ್ಯ ಪ್ರದೇಶ ಇನ್ನೂ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us