ಕೋವಿಡ್ ಬಳಿಕ ಪ್ಯಾನ್ ಇಂಡಿಯಾ (Pan India) ಸಿನಿಮಾಗಳು ಅಬ್ಬರಿಸುತ್ತಿವೆ. ಕೋವಿಡ್ ಬಳಿಕದ ಅವಧಿಯನ್ನು ಚಿತ್ರರಂಗದ ಚಿನ್ನದ ಕಾಲವೆಂದೇ ಕರೆಯಲಾಗುತ್ತಿದೆ. ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಸಿನಿಮಾ ಮಾರುಕಟ್ಟೆ ದುಪ್ಪಟ್ಟಾಗಿದೆ. ಅದರಲ್ಲಿಯೂ ಪ್ಯಾನ್ ಇಂಡಿಯಾ ಸಿನಿಮಾಗಳಂತೂ ಭಾರಿ ಕಲೆಕ್ಷನ್ ಮಾಡುತ್ತಿವೆ. ಹೊಸ ನಟರಿಂದ ಹಿಡಿದು ಹಿರಿಯ ನಟರೂ ಸಹ ಪ್ಯಾನ್ ಇಂಡಿಯಾ ಸಿನಿಮಾದ ಬೆನ್ನು ಬಿದ್ದಿದ್ದಾರೆ. ನಟ ರಜನೀಕಾಂತ್ (Rajinikanth) ಮುಂಚಿನಿಂದಲೂ ಪ್ಯಾನ್ ಇಂಡಿಯಾ ಸ್ಟಾರ್. ಅವರ ಸ್ಟಾರ್ಗಿರಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ನಿರ್ಮಾಪಕರು, ನಿರ್ದೇಶಕರು ಸರಣಿ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇದೀಗ ರಜನೀಕಾಂತ್, ಭಾರತದ ಈ ವರೆಗಿನ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಕೋವಿಡ್ಗೆ ಮುಂಚೆಯೂ ಕೆಲವಾರು ಸೂಪರ್-ಡೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನೀಡಿರುವ ರಜನೀಕಾಂತ್, ಕೋವಿಡ್ ಬಳಿಕವೂ ಕೆಲವಾರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿ ಹಿಟ್ ನೀಡಿದ್ದಾರೆ. ರಜನೀಕಾಂತ್ ನಟನೆಯ ಇತ್ತೀಚೆಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಜೈಲರ್’ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಇದೀಗ ನಟ ರಜನೀಕಾಂತ್ ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಬಾಲಿವುಡ್ನ ಬಡಾ ನಿರ್ಮಾಪಕ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ಗೆ ‘ಪೋಡಾ’ ಎಂದಿದ್ದ ಖುಷ್ಬು: ಟಿವಿ9 ಸಂವಾದದಲ್ಲಿ ಹಳೆಯ ನೆನಪು
ಭಾರಿ ಬಜೆಟ್ ಸಿನಿಮಾಗಳಿಗೆ ಜನಪ್ರಿಯರಾಗಿರುವ ಸಾಜಿದ್ ನಾಡಿಯಾವಾಲಾ ಇದೀಗ ರಜನೀಕಾಂತ್ ಜೊತೆ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಸಾಜಿದ್ ನಾಡಿಯಾವಾಲಾ, ರಜನೀಕಾಂತ್ ಅವರನ್ನು ಭೇಟಿಯಾಗಿದ್ದು ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಹಲವಾರು ದಕ್ಷಿಣದ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿಸಿದ್ದರು ಸಾಜಿದ್ ನಾಡಿಯಾವಾಲಾ, ಈಗ ನೇರವಾಗಿ ದಕ್ಷಿಣದ ಸಿನಿಮಾ ಮೇಲೆ ಬಂಡವಾಳ ಹೂಡಲು ರೆಡಿಯಾಗುತ್ತಿದ್ದಾರೆ. ಈ ಸಿನಿಮಾ ಭಾರಿ ಬಜೆಟ್ ಸಿನಿಮಾ ಆಗಿರಲಿದೆಯಂತೆ. ಸಿನಿಮಾ ಐತಿಹಾಸಿಕ ಕತೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು ಆದರೆ ಹೆಚ್ಚೇನೂ ಸದ್ದು ಮಾಡಲಿಲ್ಲ. ಆದರೆ ಅದಕ್ಕೆ ಹಿಂದೆ ಬಿಡುಗಡೆ ಆಗಿದ್ದ ‘ಜೈಲರ್’ ಅಬ್ಬರ ಎಬ್ಬಿಸಿತ್ತು. ‘ಜೈಲರ್’ ಸಿನಿಮಾದ ನಿರ್ದೇಶಕ ನೆಲ್ಸನ್ ‘ಜೈಲರ್ 2’ಗೆ ರೆಡಿಯಾಗುತ್ತಿದ್ದಾರೆ. ‘ಜೈಲರ್ 2’ ಸಿನಿಮಾದ ಚಿತ್ರಕತೆಯನ್ನು ನೆಲ್ಸನ್ ಪೂರ್ಣಗೊಳಿಸಿದ್ದು, ಆದಷ್ಟು ಬೇಗ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಇದರ ನಡುವೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ನಿರ್ದೇಶನದ ಸಿನಿಮಾದಲ್ಲಿಯೂ ರಜನೀಕಾಂತ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ