25 ವರ್ಷದ ಹಿಂದೆ ಒಂದೇ ರಾತ್ರಿ 1.30 ಕೋಟಿ ಹಂಚಿದ್ದ ರಜನೀಕಾಂತ್

|

Updated on: Aug 30, 2023 | 5:57 PM

Rajinikanth: ಸಿನಿಮಾ ಚೆನ್ನಾಗಿ ಓಡಿ ಬಂದ ಲಾಭದಲ್ಲಿ ಚಿತ್ರತಂಡಕ್ಕೆ ಬೋನಸ್ ಕೊಡುವ ಪದ್ಧತಿಯನ್ನು ಕೆಲವೇ ನಿರ್ಮಾಪಕರು ಇಟ್ಟುಕೊಂಡಿದ್ದಾರೆ. ಆದರೆ ರಜನೀಕಾಂತ್, ತಾವು ನಿರ್ಮಾಣ ಮಾಡಿದ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಬರೋಬ್ಬರಿ 1.30 ಕೋಟಿ ಹಂಚಿದ್ದರಂತೆ ಅದೂ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ.

25 ವರ್ಷದ ಹಿಂದೆ ಒಂದೇ ರಾತ್ರಿ 1.30 ಕೋಟಿ ಹಂಚಿದ್ದ ರಜನೀಕಾಂತ್
ಪಡೆಯಪ್ಪ
Follow us on

ರಜನೀಕಾಂತ್ (Rajinikanth) ನಟನೆಯ ಸಿನಿಮಾಗಳು ಈಗ ಕೆಲವೇ ದಿನಗಳಲ್ಲಿ ನೂರು ಕೋಟಿ ಗಳಿಸುತ್ತವೆ. ಪ್ರತಿ ಸಿನಿಮಾಕ್ಕೆ ನೂರಾರು ಕೋಟಿ ಸಂಭಾವನೆಯನ್ನು ರಜನೀಕಾಂತ್ ಈಗ ಗಳಿಸುತ್ತಾರೆ. ಗಳಿಸಿದ ಹಣವನ್ನು ಸಮಾಜ ಸೇವೆಗೂ ಖರ್ಚು ಮಾಡುತ್ತಾರೆ. ಕಷ್ಟದಲ್ಲಿರುವ ಸಹ ನಟರಿಗೆ, ಕಲಾವಿದರಿಗೆ ನೆರವಿನ ಹಸ್ತ ಚಾಚುತ್ತಲೇ ಇರುತ್ತಾರೆ. ರಜನೀಕಾಂತ್ ಈಗಷ್ಟೆ ಈ ರೀತಿಯ ಹೃದಯ ವೈಶಾಲ್ಯ ಪ್ರದರ್ಶಿಸುತ್ತಿರುವುದಲ್ಲ. ಮೊದಲಿನಿಂದಲೂ ರಜನೀಕಾಂತ್ ಇದ್ದದ್ದು ಹೀಗೆಯೇ. 23 ವರ್ಷಗಳ ಹಿಂದೆಯೇ ಒಂದೇ ರಾತ್ರಿ 1.30 ಕೋಟಿ ರೂಪಾಯಿ ಹಣವನ್ನು ಹಂಚಿದ್ದರಂತೆ ರಜನೀಕಾಂತ್.

1999 ರಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆದ ‘ಪಡೆಯಪ್ಪ’ ಸಿನಿಮಾವನ್ನು ರಜನೀಕಾಂತ್ ನಿರ್ಮಾಣ ಮಾಡಿದ್ದರು. ರಜನೀಕಾಂತ್ ಜೊತೆಗೆ ಕೆಲವು ಸಹ ನಿರ್ಮಾಪಕರು ಸಹ ಇದ್ದರು. ಸಿನಿಮಾ ನಿರ್ಮಾಣಕ್ಕೆ ಮುಂಚೆ ಆ ಸಿನಿಮಾಕ್ಕೆಂದು 4 ಕೋಟಿ ಬಜೆಟ್ ಮೀಸಲಿಡಲಾಗಿತ್ತಂತೆ. ಆದರೆ ಅಂದುಕೊಂಡಿದ್ದಕ್ಕಿಂತಲೂ ಕಡಿಮೆ ಬಜೆಟ್​ನಲ್ಲಿ ಸಿನಿಮಾ ಮುಗಿದು ಬಿಟ್ಟಿದೆ. ಉಳಿದ ಹಣವನ್ನು ಸ್ವಂತಕ್ಕೆ ಇಟ್ಟುಕೊಳ್ಳುವ ಬದಲಿಗೆ ಇಡೀ ಚಿತ್ರತಂಡಕ್ಕೆ ಹಂಚಿಬಿಟ್ಟರಂತೆ ರಜನೀಕಾಂತ್.

ಈ ವಿಷಯವನ್ನು ಆ ಸಿನಿಮಾದ ಸಹ ನಿರ್ಮಾಪಕರಾಗಿದ್ದ ಪಿಎಲ್ ತೇನಪ್ಪನ್ ಸಂದರ್ಶನವೊಂದರಲ್ಲಿ ಈ ವಿಷಯ ಹೇಳಿಕೊಂಡಿದ್ದು, ”ನಾಲ್ಕು ಕೋಟಿ ಬಜೆಟ್ ಅನ್ನು ‘ಪಡೆಯಪ್ಪ’ ಸಿನಿಮಾಕ್ಕಾಗಿ ಮೀಸಲಿಡಲಾಗಿತ್ತು. ಆದರೆ 2.70 ಕೋಟಿಗೆ ಸಿನಿಮಾ ಮುಗಿದು ಬಿಟ್ಟಿತು. ಶೂಟಿಂಗ್ ಮುಗಿದ ನಾಲ್ಕೈದು ದಿನಗಳ ಬಳಿಕ ರಜನೀಕಾಂತ್ ನನಗೆ ಕರೆ ಮಾಡಿ, ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲ ತಂತ್ರಜ್ಙರು, ನಟ-ನಟಿಯರ ಮಾಹಿತಿ ತೆಗೆದುಕೊಂಡು ಬರುವಂತೆ ಹೇಳಿದರು. ನಾನೂ ಸಹ ಹೋದೆ. ಉಳಿದ ಹಣವನ್ನು ಸಿನಿಮಾಕ್ಕಾಗಿ ಕೆಲಸ ಮಾಡಿದ ಎಲ್ಲರಿಗೂ ಹಂಚಿಬಿಡುವಂತೆ ರಜನೀಕಾಂತ್ ಹೇಳಿದ್ದರು” ಎಂದು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಈ ಫೋಟೊಕ್ಕೆ ಫ್ರೇಮ್ ಹಾಕಿಸು: ಗೆಳೆಯನಿಗೆ ಆದೇಶ ಕೊಟ್ಟು ಹೊರಟ ರಜನೀಕಾಂತ್

”ಕಲಾವಿದರು, ತಂತ್ರಜ್ಞರು ಎಲ್ಲ ಕಷ್ಟಪಟ್ಟು ಹಗಲು ರಾತ್ರಿ ಕೆಲಸ ಮಾಡಿದ್ದರಿಂದಲೇ ನಮ್ಮ ಸಿನಿಮಾ ಇಷ್ಟು ಕಡಿಮೆ ಹಣದಲ್ಲಿ ಇಷ್ಟು ಬೇಗ ಮುಗಿದಿದೆ ಹಾಗಾಗಿ ಉಳಿಕೆ ಹಣವನ್ನು ನಾವು ಇಟ್ಟುಕೊಳ್ಳುವುದು ಬೇಡ. ಉಳಿಕೆ ಹಣವನ್ನು ಎಲ್ಲರಿಗೂ ಹಂಚಿಬಿಡು. ಯಾರ ಸಂಭಾವನೆ ಎಷ್ಟಿರುತ್ತದೆಯೋ ಅದರ ದುಪ್ಪಟ್ಟ ಹಣ ಕೊಟ್ಟುಬಿಡು ಎಂದರು. ನಾನು 1.30 ಕೋಟಿ ಹಣವನ್ನು ಕಾರಿನಲ್ಲಿಟ್ಟುಕೊಂಡು ಮಧ್ಯರಾತ್ರಿ ಎಲ್ಲ ಕಲಾವಿದರು ತಂತ್ರಜ್ಙರ ಮನೆಗಳಿಗೆ ಹೋಗಿ ಅವರಿಗೆ ಹಣ ಕೊಟ್ಟು ಬಂದಿದ್ದೆ” ಎಂದು ನೆನಪು ಮಾಡಿಕೊಂಡಿದ್ದಾರೆ.

‘ಪಡೆಯಪ್ಪ’ ಸಿನಿಮಾ ರಜನೀಕಾಂತ್ ವೃತ್ತಿ ಜೀವನದಲ್ಲಿ ಸೂಪರ್-ಡೂಪರ್ ಸಿನಿಮಾಗಳಲ್ಲಿ ಒಂದಾಯ್ತು. ಶಿವಾಜಿ ಗಣೇಶನ್, ರಮ್ಯಾ ಕೃಷ್ಣ, ಸೌಂದರ್ಯ ಇನ್ನೂ ಹಲವರು ಆ ಸಿನಿಮಾದಲ್ಲಿ ನಟಿಸಿದ್ದರು. ಎ.ಆರ್.ರೆಹಮಾನ್ ಸಂಗೀತ ನೀಡಿದ್ದರು. 1999 ರಲ್ಲಿ ಬಿಡುಗಡೆ ಆದ ಆ ಸಿನಿಮಾ ತಮಿಳುನಾಡಿನ 86 ಚಿತ್ರಮಂದಿರಗಳಲ್ಲಿ ನೂರು ದಿನ ಓಡಿತ್ತು. ತೆಲುಗಿಗೆ ‘ನರಸಿಂಹ’ ಹೆಸರಲ್ಲಿ ಡಬ್ ಆಗಿ ಬಿಡುಗಡೆ ಆಗಿ ಅಲ್ಲಿಯೂ ಸೂಪರ್-ಡೂಪರ್ ಹಿಟ್ ಆಯಿತು. ತೆಲುಗಿನಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನೂರು ದಿನ ಓಡಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ