ನನ್ನನ್ನು ಯಾರೂ ಕಣ್ಣೆತ್ತಿ ನೋಡಲಿಲ್ಲ: ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಅನುಭವ ಬಿಚ್ಚಿಟ್ಟ ರಜನಿಕಾಂತ್

ಸೂಪರ್‌ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ತಮಗಾದ ಒಂದು ಅಪರೂಪದ ಅನುಭವವನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರಿಗೆ ಅಧ್ಯಾತ್ಮದ ಬಗ್ಗೆ ಆಸಕ್ತಿ ಇದೆ. ಈಗ ಆಶ್ರಮದಲ್ಲಿ ನಡೆದ ಕಾರ್ಯಕ್ರಮದ ಭಾಗವಹಿಸಿರುವ ಅವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ..

ನನ್ನನ್ನು ಯಾರೂ ಕಣ್ಣೆತ್ತಿ ನೋಡಲಿಲ್ಲ: ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಅನುಭವ ಬಿಚ್ಚಿಟ್ಟ ರಜನಿಕಾಂತ್
Rajinikanth
Image Credit source: PTI

Updated on: May 13, 2026 | 11:37 AM

ಆರ್ಟ್ ಆಫ್ ಲಿವಿಂಗ್ (Art Of Living) ಸಂಸ್ಥೆಯ 45ನೇ ವರ್ಷಾಚರಣೆ ಮತ್ತು ಶ್ರೀ ಶ್ರೀ ರವಿಶಂಕರ್ ಗುರೂಜಿ (Sri Sri Ravi Shankar) ಅವರ 70ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೂಪರ್‌ ಸ್ಟಾರ್ ರಜನಿಕಾಂತ್ (Rajinikanth) ಅವರು ಆಶ್ರಮದಲ್ಲಿ ತಮಗಾದ ಒಂದು ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆ ಘಟನೆಯು ತಮ್ಮ ಅಹಂಕಾರವನ್ನು ಹೇಗೆ ಮಣ್ಣುಪಾಲಾಗಿಸಿತು ಎಂಬುದನ್ನು ಅವರು ಹಾಸ್ಯಭರಿತವಾಗಿ ವಿವರಿಸಿದ್ದಾರೆ. ವೇದಿಕೆಯಲ್ಲಿ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದೆ.

ಆರಂಭದಲ್ಲಿ ಕೇವಲ ಎರಡು ದಿನಗಳ ಕಾಲ ಆಶ್ರಮದಲ್ಲಿ ಇರಲು ಯೋಜಿಸಿದ್ದ ರಜನಿಕಾಂತ್, ಅಲ್ಲಿನ ಸುಂದರ ಪರಿಸರಕ್ಕೆ ಮಾರುಹೋಗಿ ಬರೋಬ್ಬರಿ 15 ದಿನಗಳ ಕಾಲ ಅಲ್ಲೇ ಉಳಿದುಕೊಂಡರಂತೆ. ‘ಸುತ್ತಲೂ ಹಸಿರು, ಕೆರೆ, ನಗುಮುಖದ ಜನರನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅಲ್ಲಿ ಆನೆ, ಕುದುರೆಗಳು ಮತ್ತು ನೂರಾರು ಹಸುಗಳಿದ್ದವು. ವಿಶೇಷವೆಂದರೆ ಅಲ್ಲಿನ ಒಂದು ಕುದುರೆಯ ಹೆಸರು ರಜಿನಿ ಎಂದಿತ್ತು’ ಎನ್ನುವ ಮೂಲಕ ಪ್ರೇಕ್ಷಕರಲ್ಲಿ ನಗೆಹೊನಲು ಹರಿಸಿದರು.

ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಆಶ್ರಮಕ್ಕೆ ಭೇಟಿ ನೀಡಿದ್ದ ರಜನಿಕಾಂತ್ ಅವರಿಗೆ ಗುರೂಜಿ ಒಮ್ಮೆ ಆಶ್ರಮದ ಸುತ್ತ ಒಂದು ರೌಂಡ್ ಹಾಕೋಣವೇ ಎಂದು ಕೇಳಿದರಂತೆ. ‘ನಾನು ದೊಡ್ಡ ನಟನಾಗಿರುವುದರಿಂದ ಅಲ್ಲಿನ ಜನ ನನ್ನನ್ನು ಗುರುತಿಸಿ ಮುತ್ತಿಕೊಳ್ಳಬಹುದು, ಆಟೋಗ್ರಾಫ್‌ಗಾಗಿ ಮುಗಿಬೀಳಬಹುದು ಎಂದು ನಾನು ಸ್ವಲ್ಪ ಹಿಂಜರಿದೆ. ಅಲ್ಲಿ ತಮಿಳುನಾಡಿನ ನೂರಾರು ಜನರಿದ್ದರು. ಆದರೆ ಸತ್ಯ ಏನೆಂದರೆ, ಒಬ್ಬನೇ ಒಬ್ಬ ವ್ಯಕ್ತಿ ಕೂಡ ನನ್ನನ್ನು ಕಣ್ಣೆತ್ತಿಯೂ ನೋಡಲಿಲ್ಲ’ ಎಂದು ರಜನಿಕಾಂತ್ ಹೇಳಿದರು.

‘ನಾನು ಅಲ್ಲಿದ್ದ ಜನರಿಗೆ ಕೈಬೀಸುತ್ತಿದ್ದರೂ ಯಾರೂ ನನ್ನ ಕಡೆ ಗಮನ ಹರಿಸಲಿಲ್ಲ. ಫೋಟೋ, ಆಟೋಗ್ರಾಫ್ ಬಿಡಿ, ನನ್ನ ಜೊತೆ ಮಾತನಾಡಲೂ ಯಾರೂ ಬರಲಿಲ್ಲ. ನಾನು ಅನೇಕ ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಭೇಟಿ ಮಾಡಿದ್ದೇನೆ, ಆದರೆ ಈ ಅನುಭವ ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಮುರಿಯಿತು. ಅಧ್ಯಾತ್ಮದ ಶಕ್ತಿಯ ಮುಂದೆ ನನ್ನ ಸ್ಟಾರ್‌ಡಮ್ ಏನೂ ಅಲ್ಲ ಎಂಬುದು ಅಂದು ನನಗೆ ಅರ್ಥವಾಯಿತು’ ಎಂದು ಅವರು ಮನಬಿಚ್ಚಿ ಮಾತನಾಡಿದರು.

ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ: ‘ಧುರಂಧರ್ 2’ ಬಗ್ಗೆ ರಜನಿಕಾಂತ್ ಮೆಚ್ಚುಗೆ

ಸಿನಿಮಾದ ಪ್ರಸಿದ್ಧಿ ತಾತ್ಕಾಲಿಕ, ಆದರೆ ಆಧ್ಯಾತ್ಮಿಕ ಶಕ್ತಿ ಶಾಶ್ವತ ಎಂದು ರಜನಿಕಾಂತ್ ಅಭಿಪ್ರಾಯಪಟ್ಟರು. ‘ಸಿನಿಮಾದ ಸ್ಟಾರ್‌ಡಮ್ ಬರುತ್ತದೆ ಮತ್ತು ಹೋಗುತ್ತದೆ. ಆದರೆ ಆಧ್ಯಾತ್ಮಿಕ ಸ್ಟಾರ್‌ಡಮ್ ಅತ್ಯುನ್ನತವಾದುದು. ಅದು ಸಾವಿನ ನಂತರವೂ ಶಾಶ್ವತವಾಗಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us