
ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ದಕ್ಷಿಣ ಭಾರತದ ಬಲು ನಿರೀಕ್ಷೆಯ ಸಿನಿಮಾ ಆಗಿದೆ. ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 2) ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗುವುದೇ ಇಲ್ಲ ಎಂಬ ಸುದ್ದಿ ಮೊದಲು ಹರಡಿತ್ತು, ಆದರೆ ಈಗ ನೋಡಿದರೆ ಸಖತ್ ಪವರ್ಫುಲ್ ಟ್ರೈಲರ್ ಅನ್ನೇ ನಿರ್ದೇಶಕ ಲೋಕೇಶ್ ಕನಗರಾಜ್ ಬಿಡುಗಡೆ ಮಾಡಿದ್ದಾರೆ. ಟ್ರೈಲರ್ ನೋಡಿದರೆ, ಸಿನಿಮಾ ನೋಡಿದ ಥ್ರಿಲ್ ಬರುವಂತಿದೆ.
‘ಕೂಲಿ’ ಸಿನಿಮಾ ರಜನೀಕಾಂತ್ ಸಿನಿಮಾ ಆದರೆ ಸಿನಿಮಾನಲ್ಲಿ ಅಕ್ಕಿನೇನಿ ನಾಗಾರ್ಜುನ, ಆಮಿರ್ ಖಾನ್, ಉಪೇಂದ್ರ, ಸುಬಿನ್ ಸಾಹಿರ್, ಶ್ರುತಿ ಹಾಸನ್, ಸತ್ಯರಾಜ್, ರಚಿತಾ ರಾಮ್ ಇನ್ನೂ ಕೆಲವು ಸ್ಟಾರ್ ನಟ-ನಟಿಯರು ಈ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಟ್ರೈಲರ್ನಲ್ಲಿ ರಜನೀಕಾಂತ್ ಮಾತ್ರವೇ ಅಲ್ಲದೆ ಸಿನಿಮಾನಲ್ಲಿ ನಟಿಸಿರುವ ಎಲ್ಲ ಪ್ರಮುಖ ನಟ-ನಟಿಯರಿಗೂ ಸ್ಪೇಸ್ ನೀಡಲಾಗಿದೆ.
ಸಿನಿಮಾನಲ್ಲಿ ಹಲವಾರು ಶಿಳ್ಳೆ, ಚಪ್ಪಾಳೆ ಗಿಟ್ಟಿಸುವ ಎಲಿವೇಶನ್ ದೃಶ್ಯಗಳಿವೆ ಎಂಬುದನ್ನು ಈಗ ಬಿಡುಗಡೆ ಆಗಿರುವ ಟ್ರೈಲರ್ ಹೇಳುತ್ತಿದೆ. ಕೆಲವು ದೃಶ್ಯಗಳನ್ನು ಟ್ರೈಲರ್ ನಲ್ಲಿ ಸೇರಿಸಲಾಗಿದೆ. ಆಮಿರ್ ಖಾನ್, ಉಪೇಂದ್ರ ಅವರ ಆಕ್ಷನ್ ಸೀನ್ಗಳು ಟ್ರೈಲರ್ನಲ್ಲಿವೆ. ನಾಗಾರ್ಜುನ ಅಂತೂ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ರಜನೀಕಾಂತ್, ಸತ್ಯರಾಜ್ ಗೆಳೆಯರಾಗಿದ್ದು, ಸತ್ಯರಾಜ್ ಮಗಳ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ. ರಚಿತಾ ರಾಮ್ ಸಹ ಟ್ರೈಲರ್ನಲ್ಲಿ ಕಂಡು ಮರೆಯಾಗುತ್ತಾರೆ. ಇನ್ನು ಉಪ್ಪಿಯ ಅದುರುವ ಕಣ್ಣುಗಳು ಸಹ ಟ್ರೈಲರ್ನಲ್ಲಿ ಜಾಗ ಪಡೆದುಕೊಂಡಿವೆ.
ಇದನ್ನೂ ಓದಿ:ರಜನೀಕಾಂತ್ ‘ಕೂಲಿ’ ಸಿನಿಮಾಕ್ಕೆ ಎ ಸರ್ಟಿಫಿಕೇಟ್, ಇದು ಮೊದಲೇನಲ್ಲ
ಟ್ರೈಲರ್ನ ಅಂತ್ಯದಲ್ಲಿ ಸಖತ್ ಟ್ವಿಸ್ಟ್ ಅನ್ನು ಲೋಕೇಶ್ ನೀಡಿದ್ದಾರೆ. ಭಾಷಾ ಸಿನಿಮಾದ ಝಲಕ್ ಅನ್ನು ಲೋಕೇಶ್ ಟ್ರೈಲರ್ನ ಕೊನೆಯಲ್ಲಿ ನೀಡಿದ್ದಾರೆ. ಸಿನಿಮಾದಲ್ಲಿ ರಜನೀಕಾಂತ್ ಪಾತ್ರದ ಹೆಸರು, ಟ್ರೈಲರ್ನ ಕೊನೆಯಲ್ಲಿ ಬದಲಾಗುವ ಆ ಕಲರ್ ಸ್ಕೀಂ ನೋಡಿದರೆ ‘ಕೂಲಿ’ ಸಿನಿಮಾ ಖಂಡಿತ ರಜನೀಕಾಂತ್ ನಟನೆಯ ‘ಭಾಷಾ’ ಸಿನಿಮಾದ ಕತೆಯೊಂದಿಗೆ ಸಂಬಂಧ ಹೊಂದಿರುವುದು ಖಾತ್ರಿ. ‘ಕೂಲಿ’ ಸಿನಿಮಾ ‘ಭಾಷಾ’ ಸಿನಿಮಾದ ಸೀಕ್ವೆಲ್ ಆಗಿದ್ದರೆ ಮಾತ್ರ ರಜನೀ ಅಭಿಮಾನಿಗಳಿಗೆ ಹಬ್ಬವೇ ಆಗಲಿದೆ.
ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸನ್ ನೆಟ್ವರ್ಕ್ಸ್ನ ಕಲಾನಿಧಿಮಾರನ್. ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 pm, Sat, 2 August 25