Ram Charan: ಅಮಿತ್ ಶಾ ಭೇಟಿಯಾದ ರಾಮ್ ಚರಣ್, ಚಿರಂಜೀವಿ

|

Updated on: Mar 17, 2023 | 10:59 PM

ನಟ ರಾಮ್ ಚರಣ್ ಹಾಗೂ ಅವರ ತಂದೆ, ನಟ ಚಿರಂಜೀವಿ ಅವರುಗಳು ದೆಹಲಿಯಲ್ಲಿ ಇಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

Ram Charan: ಅಮಿತ್ ಶಾ ಭೇಟಿಯಾದ ರಾಮ್ ಚರಣ್, ಚಿರಂಜೀವಿ
ಅಮಿತ್ ಶಾ ಭೇಟಿಯಾದ ರಾಮ್ ಚರಣ್-ಚಿರಂಜೀವಿ
Follow us on

ನಟ ರಾಮ್ ಚರಣ್ ತೇಜ ತಮ್ಮ ತಂದೆ, ನಟ ಚಿರಂಜೀವಿಯೊಟ್ಟಿಗೆ ಇಂದು (ಮಾರ್ಚ್ 17) ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ರಾಮ್ ಚರಣ್ ಹಾಗೂ ಚಿರಂಜೀವಿ ಇಬ್ಬರು ಅಮಿತ್ ಶಾ ಅವರಿಗೆ ರೇಶ್ಮೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಇದೇ ವೇಳೆ ಸಚಿವ ಅಮಿತ್ ಶಾ ಅವರು ಆರ್​ಆರ್​ಆರ್ ಸಿನಿಮಾದ ನಾಟು-ನಾಟು ಹಾಡಿಗೆ ಆಸ್ಕರ್ ದೊರಕಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ರಾಮ್ ಚರಣ್ ಹಾಗೂ ಚಿರಂಜೀವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಆಸ್ಕರ್ ಪ್ರಶಸ್ತಿ ಬಂದ ಖುಷಿಯನ್ನು ಹಂಚಿಕೊಳ್ಳಲೆಂದು ರಾಮ್ ಚರಣ್ ಹಾಗೂ ಚಿರಂಜೀವಿ ಅವರು ಮೋದಿ ಹಾಗೂ ಶಾ ಅವರನ್ನು ಭೇಟಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಜೂ ಎನ್​ಟಿಆರ್ ಅವರು ರಾಜಕೀಯ ಕಾರಣಗಳಿಗಾಗಿ ಈ ಭೇಟಿಯಿಂದ ದೂರ ಉಳಿದಿರುವ ಸಾಧ್ಯತೆ ಇದೆ. ನಾಟು-ನಾಟು ಹಾಡಿಗೆ ಆಸ್ಕರ್ ಬಂದಾಗ ಅಮಿತ್ ಶಾ ಹಾಗೂ ಮೋದಿ ಅವರುಗಳು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.

ಆರ್​ಆರ್​ಆರ್ ಸಿನಿಮಾದ ನಾಟು-ನಾಟು ಹಾಡು ಆಸ್ಕರ್ ಗೆದ್ದಾಗ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದು ಅಮಿತ್ ಶಾ, ”ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ‘ನಾಟು ನಾಟು’ ಹಾಡು ಇತಿಹಾಸವನ್ನು ಸೃಷ್ಟಿಸಿದೆ. ಇದು ಭಾರತೀಯ ಚಿತ್ರರಂಗಕ್ಕೆ ಹೆಗ್ಗುರುತಿನ ದಿನ. ಈ ಹಾಡು ಭಾರತೀಯರು ಮಾತ್ರವೇ ಅಲ್ಲದೆ ಪ್ರಪಂಚದಾದ್ಯಂತದ ಸಂಗೀತ ಪ್ರೇಮಿಗಳ ಬಾಯಲ್ಲಿದೆ” ಎಂದಿದ್ದರು. ಇಂದು ರಾಮ್ ಚರಣ್-ಚಿರಂಜೀವಿ ಭೇಟಿಯ ಕುರಿತಾಗಿ ತೆಲುಗಿನಲ್ಲಿ ಟ್ವೀಟ್ ಮಾಡಿರುವ ಅಮಿತ್ ಶಾ, ”ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ರಾಮ್ ಚರಣ್ ಹಾಗೂ ಚಿರಂಜೀವಿ ಅವರನ್ನು ಭೇಟಿಯಾಗಿದ್ದು ಬಹಳ ಸಂತಸ ತಂದಿದೆ. ತೆಲುಗು ಚಿತ್ರರಂಗವು ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಮಾತ್ರವೇ ಅಲ್ಲದೆ ಭಾರತೀಯ ಆರ್ಥಿಕ ವ್ಯವಸ್ಥೆಗೆ ಯೋಗದಾನ ನೀಡುವಲ್ಲಿ ಮಹತ್ವದ ಪಾತ್ರವಹಿಸಿದೆ. ನಾಟು-ನಾಟು ಹಾಡಿಗೆ ಆಸ್ಕರ್ ಬಂದಿದ್ದರ ಕುರಿತು ಹಾಗೂ ಆರ್​ಆರ್​ಆರ್ ಸಿನಿಮಾದ ಅದ್ಭುತ ವಿಜಯ ಸಾಧಿಸಿದ್ದಕ್ಕೆ ರಾಮ್ ಚರಣ್ ಅವರನ್ನು ಅಭಿನಂದಿಸಿದ್ದೇನೆ” ಎಂದಿದ್ದಾರೆ.

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪತ್ನಿಯೊಟ್ಟಿಗೆ ತೆರಳಿದ್ದ ರಾಮ್ ಚರಣ್ ಕೆಲವು ದಿನಗಳ ಹಿಂದಷ್ಟೆ ಮರಳಿ ಬಂದಿದ್ದು, ತಾವು ನಟಿಸಿದ ಸಿನಿಮಾವು ಆಸ್ಕರ್ ಪಡೆದಿರುವುದನ್ನು ಭರ್ಜರಿಯಾಗಿ ಎಂಜಾಯ್ ಮಾಡುತ್ತಿದ್ದಾರೆ. ಆಸ್ಕರ್ ಆಫ್ಟರ್ ಪಾರ್ಟಿಯಲ್ಲಿ ಭಾಗವಹಿಸಿದ್ದು ಮಾತ್ರವೇ ಅಲ್ಲದೆ, ಅಮೆರಿಕದಲ್ಲಿ ತಾವು ತಂಗಿದ್ದ ಮನೆಯಲ್ಲಿಯೂ ಭರ್ಜರಿ ಪಾರ್ಟಿಯನ್ನು ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಆಯೋಜನೆ ಮಾಡಿದ್ದರು. ಇದೀಗ ಭಾರತಕ್ಕೆ ಬಂದಮೇಲೂ ಆ ಸಂತಸವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ.

Published On - 10:59 pm, Fri, 17 March 23