
ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾನಲ್ಲಿ ನಾಯಕಿ ಜಾನ್ಹವಿಯನ್ನು ಅತಿಯಾದ ಗ್ಲಾಮರೈಸ್ ಮಾಡಿ ತೋರಿಸಲಾಗಿದೆ ಎಂಬ ಟೀಕೆ ಕೇಳಿ ಬಂದ ಬೆನ್ನಲ್ಲೆ ಸಿನಿಮಾದ ಆ ದೃಶ್ಯಗಳಿಗೆ ನಿರ್ದೇಶಕರು ಕತ್ತರಿ ಹಾಕಿದ್ದು, ಹೊಸ ಆವೃತ್ತಿ ಇದೇ ವಾರಾಂತ್ಯಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ‘ಪೆದ್ದಿ’ ಸಿನಿಮಾ ಮೂಲಕ ರಾಮ್ ಚರಣ್ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಂಡಿದ್ದಾರೆ. ಆದರೆ ಅವರ ಮುಂದಿನ ಸಿನಿಮಾ ಸಖತ್ ಕುತೂಹಲಕಾರಿಯಾಗಿದೆ. ಆದರೆ ಶೂಟಿಂಗ್ ಶುರುವಾಗಲು ರಾಮ್ ಚರಣ್ ಇನ್ನೂ ಕೆಲ ತಿಂಗಳು ಕಾಯಬೇಕಿದೆ.
ರಾಮ್ ಚರಣ್ ಅವರ ಮುಂದಿನ ಸಿನಿಮಾ ಅನ್ನು ‘ಪುಷ್ಪ’ ನಿರ್ದೇಶಕ ಸುಕುಮಾರ್ ನಿರ್ದೇಶಿಸಲಿದ್ದಾರೆ. ‘ಪುಷ್ಪ 2’ ಸಿನಿಮಾದ ಶೂಟಿಂಗ್ ವೇಳೆಯೇ ಈ ಸುದ್ದಿ ಹೊರಬಿದ್ದಿತ್ತು. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಸಿನಿಮಾದ ಚಿತ್ರೀಕರಣ ಮುಂದೂಡಲ್ಪಟ್ಟಿದೆಯಂತೆ. ಸಿನಿಮಾದ ಚಿತ್ರಕತೆಯ ಮೇಲೆ ಇನ್ನಷ್ಟು ಕೆಲಸ ಮಾಡಬೇಕಿರುವ ಕಾರಣ ಸುಕುಮಾರ್ ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ರಾಮ್ ಚರಣ್ ಅವರು ಅನಿವಾರ್ಯವಾಗಿ ಕಾಯಲೇ ಬೇಕಾಗಿದೆ.
ರಾಮ್ ಚರಣ್ ಹಾಗೂ ಸುಕುಮಾರ್ ಈ ಹಿಂದೆ ‘ರಂಗಸ್ಥಲಂ’ ಸಿನಿಮಾಕ್ಕೆ ಒಂದಾಗಿದ್ದರು. ಆ ಸಿನಿಮಾ ರಾಮ್ ಚರಣ್ ಅವರಿಗೆ ಒಂದು ರೀತಿ ಮರು ಜೀವನ ನೀಡಿದ ಸಿನಿಮಾ ಆಗಿತ್ತು. ರಾಮ್ ಚರಣ್ ಅದ್ಭುತವಾದ ನಟನೆಯನ್ನು ಆ ಸಿನಿಮಾನಲ್ಲಿ ತೋರಿಸಿದ್ದರು. ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಅದೇ ರೀತಿ ಮತ್ತೊಂದು ಹಳ್ಳಿ ಗಾಡಿನ ಕತೆಯನ್ನು ರಾಮ್ ಚರಣ್ ಅವರಿಗಾಗಿ ಸುಕುಮಾರ್ ರೆಡಿ ಮಾಡಿದ್ದಾರಂತೆ. ಆದರೆ ಸಿನಿಮಾದ ಚಿತ್ರೀಕರಣದ ಮೇಲೆ ಇನ್ನಷ್ಟು ಕೆಲಸ ಮಾಡಬೇಕಿರುವ ಕಾರಣ ಸುಕುಮಾರ್ ಇನ್ನಷ್ಟು ಕಾಲಾವಕಾಶವನ್ನು ಕೇಳಿದ್ದಾರೆ. ‘ಪುಷ್ಪ’ ಮತ್ತು ‘ಪುಷ್ಪ 2’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಸುಕುಮಾರ್. ಅದೇ ಯಶಸ್ಸನ್ನು ಮುಂದುವರೆಸುವ ನಿಟ್ಟಿನಲ್ಲಿ ಈ ಸಿನಿಮಾದ ಕತೆಯ ಮೇಲೆ ಹೆಚ್ಚು ಫೋಕಸ್ ಹಾಕಿದ್ದಾರೆ.
ಇದನ್ನೂ ಓದಿ:200 ಕೋಟಿ ರೂಪಾಯಿ ಕ್ಲಬ್ ಸೇರಿದ ರಾಮ್ ಚರಣ್ ಸಿನಿಮಾ ‘ಪೆದ್ದಿ’; ಆದರೂ ಇದೆ ಸವಾಲು
ಸುಕುಮಾರ್ ಅವರು ವಿಜಯ್ ದೇವರಕೊಂಡ ನಟನೆಯ ಸಿನಿಮಾ ನಿರ್ದೇಶನ ಮಾಡುತ್ತಾರೆ. ಅದು ‘ಆರ್ಯ 3’ ಆಗಿರಲಿದೆ ಎಂಬ ಸುದ್ದಿಗಳು ಈ ಹಿಂದೆ ಹರಿದಾಡಿದ್ದವು. ‘ಆರ್ಯ 3’ ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಅದು ಸುಳ್ಳಾಗಿದ್ದು, ರಾಮ್ ಚರಣ್ ಜೊತೆಗೆ ಸುಕುಮಾರ್ ಕೈ ಜೋಡಿಸಿದ್ದಾರೆ. ರಾಮ್ ಚರಣ್ ಜೊತೆಗಿನ ಸಿನಿಮಾ ಮುಗಿದ ಬಳಿಕ ಸುಕುಮಾರ್ ಅವರು ‘ಪುಷ್ಪ 3’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.
ಇನ್ನು ರಾಮ್ ಚರಣ್ ಅವರ ಬಳಿಕ ಸುಕುಮಾರ್ ಸಿನಿಮಾ ಬಿಟ್ಟರೆ ಬೇರೆ ಯಾವುದೇ ಆಫರ್ ಇಲ್ಲ ಎನ್ನಲಾಗುತ್ತಿದೆ. ‘ಆರ್ಆರ್ಆರ್’ ಸಿನಿಮಾದ ಬಳಿಕ ರಾಮ್ ಚರಣ್ ನಟಿಸಿದ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ಸಿನಿಮಾಗಳು ಸೋಲುಂಡಿದ್ದವು. ಆದರೆ ‘ಪೆದ್ದಿ’ ಸಿನಿಮಾ ಮೂಲಕ ಗೆದ್ದಿರುವ ರಾಮ್ ಚರಣ್, ಸುಕುಮಾರ್ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ