
ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಇದೇ ವರ್ಷ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಣ ಗಳಿಸಿತಾದರೂ ಸಿನಿಮಾ ದೊಡ್ಡ ಹಿಟ್ ಏನೂ ಆಗಲಿಲ್ಲ. ‘ಆರ್ಆರ್ಆರ್’ ಬಳಿಕ ರಾಮ್ ಚರಣ್ಗೆ ಸ್ಪಷ್ಟ ಹಿಟ್ ಸಿಕ್ಕೇ ಇಲ್ಲ. ಇದೀಗ ರಾಮ್ ಚರಣ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ರಾಮ್ ಚರಣ್ಗೆ ‘ರಂಗಸ್ಥಲಂ’ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ಸುಕುಮಾರ್ ಅವರು ಇದೀಗ ಎರಡನೇ ಬಾರಿ ರಾಮ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿದ್ದು, ಕುತೂಹಲ ಕೆರಳಿಸುವಂತಿದೆ ಪೋಸ್ಟರ್.
ಇಂದು ಹೈದರಾಬಾದ್ನಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೆಗಾಸ್ಟಾರ್ ಚಿರಂಜೀವಿ ಭಾಗಿ ಆಗಿದ್ದರು. ಚಿರಂಜೀವಿ ಅವರೇ ಮಗನ 17ನೇ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು. ರಾಮ್ ಚರಣ್, ಸುಕುಮಾರ್ ಸೇರಿದಂತೆ ಇನ್ನೂ ಕೆಲವು ತೆಲುಗು ಚಿತ್ರರಂಗದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ ಮಾಲೀಕರು ಸಹ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ಸಿನಿಮಾದ ಪೋಸ್ಟರ್ ಒಂದನ್ನು ಇದೀಗ ಬಿಡುಗಡೆ ಮಾಡಲಾಗಿದ್ದು, ಪೋಸ್ಟರ್ ವಿಭಿನ್ನವಾಗಿಯೂ ಕುತೂಹಲ ಕೆರಳಿಸುವಂತೆಯೂ ಇದೆ. ನವಿಲುಗರಿಯಲ್ಲಿ ರಾಮ್ ಚರಣ್ ಮುಖವನ್ನು ಮಾಡಲಾಗಿದೆ. ಪೋಸ್ಟರ್ ನೋಡಿದರೆ ಶ್ರೀಕೃಷ್ಣನ ಕುರಿತಾದ ಕತೆ ಇದಾಗಿರಬಹುದು ಎಂಬ ಕುತೂಹಲ ಮೂಡುತ್ತಿದೆ. ಸುಕುಮಾರ್ ಅವರು ಈ ಹಿಂದೆ ‘ಪುಷ್ಪ’, ‘ಪುಷ್ಪ 2’, ‘ರಂಗಸ್ಥಲಂ’ ಅಂಥಹಾ ಮಾಸ್ ಕಮರ್ಶಿಯಲ್ ಸಿನಿಮಾಗಳನ್ನಷ್ಟೆ ಮಾಡಿದವರು, ಅವರು ಪೌರಾಣಿಕ ಸಿನಿಮಾ ನಿರ್ದೇಶಿಸುವುದು ಬಹುತೇಕ ಅಸಾಧ್ಯ.
ಇದನ್ನೂ ಓದಿ:ಶ್ರೀಕೃಷ್ಣನ ಪಾತ್ರದಲ್ಲಿ ರಾಮ್ ಚರಣ್? ‘ಲಾಲೋ’ ತೆಲುಗು ರಿಮೇಕ್ ಬಗ್ಗೆ ಗಾಸಿಪ್
ಈಗ ಹರಿದಾಡುತ್ತಿರುವ ಕೆಲ ಸುದ್ದಿಗಳ ಪ್ರಕಾರ, ರಾಮ್ ಚರಣ್ ಅವರ ಈ ಸಿನಿಮಾ ಗುಜರಾತಿನ ಸೂಪರ್ ಹಿಟ್ ಸಿನಿಮಾ ‘ಲಾಲ ಕೃಷ್ಣ ಸಾಡೊ’ ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ರಾಮ್ ಚರಣ್, ಕೃಷ್ಣನ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಸುಕುಮಾರ್ ಈ ವರೆಗೂ ತಮ್ಮ ವೃತ್ತಿ ಜೀವನದಲ್ಲಿ ರೀಮೇಕ್ ಸಿನಿಮಾ ಮಾಡಿದವರೇ ಅಲ್ಲ. ಹಾಗಾಗಿ ಸಹಜವಾಗಿಯೇ ಇಂದು ಬಿಡುಗಡೆ ಆಗಿರುವ ಪೋಸ್ಟರ್ ಕುತೂಹಲ ಕೆರಳಿಸಿದೆ.
ಸುಕುಮಾರ್ ಹಾಗೂ ರಾಮ್ ಚರಣ್ ಈ ಹಿಂದೆ ‘ರಂಗಸ್ಥಲಂ’ ಸಿನಿಮಾನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ರಾಮ್ ಚರಣ್ ಅವರ ನಟನಾ ಪ್ರತಿಭೆಯನ್ನು ಪ್ರೇಕ್ಷಕರಿಗೆ ತೋರಿಸಿಕೊಟ್ಟ ಸಿನಿಮಾ ಅದಾಗಿತ್ತು. ಸತತ ಫ್ಲಾಫ್ ಕೊಟ್ಟಿದ್ದ ರಾಮ್ ಚರಣ್ ಅವರಿಗೆ ‘ರಂಗಸ್ಥಲಂ’ ಮೂಲಕ ಸುಕುಮಾರ್ ಬ್ಲಾಕ್ ಬಸ್ಟರ್ ನೀಡಿದ್ದರು. ಈಗ ಮತ್ತೆ ಸತತ ಸೋಲಿನಲ್ಲಿದ್ದಾರೆ. ಈಗ ಮತ್ತೊಮ್ಮೆ ಈ ಜೋಡಿ ಒಂದಾಗಿದೆ. ಈ ಸಿನಿಮಾನಲ್ಲಿ ‘ಧುರಂಧರ್’ ನಾಯಕಿ ಸಾರಾ ಅರ್ಜುನ್ ನಾಯಕಿಯಾಗಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ