
ನಟ ರಾಮ್ ಚರಣ್ (Ram Charan) ಹಾಗೂ ಉಪಾಸನಾ ಕೋನಿಡೆಲಾ (Upasana) ಇತ್ತೀಚೆಗಷ್ಟೆ ಪೋಷಕರಾಗಿದ್ದಾರೆ. ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದಾರೆ. ರಾಮ್ ಚರಣ್ ಪ್ಯಾನ್ ಇಂಡಿಯಾ ನಟನಾಗಿದ್ದರೆ, ಉಪಾಸನಾ ಹಲವು ಸಂಸ್ಥೆಗಳನ್ನು ನಡೆಸುತ್ತಿರುವ ಉದ್ಯಮಿ. ಇಬ್ಬರೂ ತಮ್ಮ-ತಮ್ಮ ವೃತ್ತಿಗಳಲ್ಲಿ ಬಹಳ ಬ್ಯುಸಿ. ಹೀಗಿರುವಾಗ ಮಗುವನ್ನು ನೋಡಿಕೊಳ್ಳಲು ಖಾಸಗಿ ವ್ಯಕ್ತಿಗಳನ್ನು ಇರಿಸಿಕೊಳ್ಳಲೇ ಬೇಕಾಗುತ್ತದೆ. ಅಂತೆಯೇ ಇದೀಗ ತಮ್ಮ ಮಗುವನ್ನು ನೋಡಿಕೊಳ್ಳಲು ‘ನ್ಯಾನಿ’ ಒಬ್ಬರನ್ನು ರಾಮ್ ಚರಣ್ ಹಾಗೂ ಉಪಾಸನಾ ನೇಮಿಸಿಕೊಂಡಿದ್ದಾರೆ. ಈ ನ್ಯಾನಿ ಸಾಮಾನ್ಯ ನ್ಯಾನಿಯಲ್ಲ, ‘ಸೆಲೆಬ್ರಿಟಿ ನ್ಯಾನಿ’.
ಈ ಹಿಂದೆ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಅವರ ಮಗ ತೈಮೂರ್ ಅವರನ್ನು ನೋಡಿಕೊಂಡಿದ್ದ ನ್ಯಾನಿಯನ್ನೇ ರಾಮ್ ಚರಣ್ ಹಾಗೂ ಉಪಾಸನಾ ಸಹ ತಮ್ಮ ಮಗುವನ್ನು ನೋಡಿಕೊಳ್ಳಲು ಅದೇ ನ್ಯಾನಿಯನ್ನು ನೇಮಿಸಿಕೊಂಡಿದ್ದಾರೆ. ಅಂದಹಾಗೆ ಈ ಸೆಲೆಬ್ರಿಟಿ ನ್ಯಾನಿಯ ನಿಜವಾದ ಹೆಸರು ಸಾವಿತ್ರಿ. ಐದು ವರ್ಷದ ಹಿಂದೆ ತೈಮೂರ್ ಅನ್ನು ನೋಡಿಕೊಳ್ಳುವಾಗ ಇವರ ಸಂಬಳ ಪ್ರತಿ ತಿಂಗಳಿಗೆ 1.50 ಲಕ್ಷ ರೂಪಾಯಿ ಇತ್ತು. ಅಲ್ಲದೆ ಹೆಚ್ಚುವರಿ ಅವಧಿಗೆ ಕೆಲಸ ಮಾಡಿದರೆ ಗಂಟೆಗೆ ಸುಮಾರು 10 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಬೇಕಿತ್ತು.
ಇದನ್ನೂ ಓದಿ:ತಾಯಿಯಾದ ಬಳಿಕ ಮಕ್ಕಳ ಆರೋಗ್ಯಕ್ಕಾಗಿ ಹೊಸ ಹೆಜ್ಜೆ ಇಟ್ಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ
ಈಗ ರಾಮ್ ಚರಣ್ ಹಾಗೂ ಉಪಾಸನಾರ ಮಗಳನ್ನು ಸಾವಿತ್ರಿ ನೋಡಿಕೊಳ್ಳುತ್ತಿದ್ದು, ಅವರ ಈಗಿನ ಸಂಬಳ ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿಗಳು ಎನ್ನಲಾಗುತ್ತಿದೆ. ಭಾರಿ ದೊಡ್ಡ ಸಂಬಳ ಕೊಡುವ ಜೊತೆಗೆ ರಾಮ್-ಉಪಾಸನಾ ಅವರ ಐಶಾರಾಮಿ ಮನೆಯಲ್ಲಿಯೇ ಸಾವಿತ್ರಿ ಸಹ ನೆಲೆಸಿರುತ್ತಾರೆ. ಮಗುವಿನ ಆಹಾರ, ಆರೋಗ್ಯ, ಇತರೆ ಚಟುವಟಿಕೆ ಎಲ್ಲವನ್ನೂ ಸಾವಿತ್ರಿ ಅವರೇ ನೋಡಿಕೊಳ್ಳುತ್ತಾರೆ. ಮಗುವನ್ನು ರಾಮ್ ಚರಣ್-ಉಪಾಸನಾ ಎಲ್ಲಿಗೇ ಕರೆದೊಯ್ದರೂ ಸಹ ಸಾವಿತ್ರಿ ಅವರೊಟ್ಟಿಗೆ ಹೋಗುತ್ತಾರೆ.
ಮುಂಬೈನಲ್ಲಿ ಈ ನ್ಯಾನಿಗಳಿಗೆ ಭಾರಿ ಬೇಡಿಕೆ ಇದೆ. ದೊಡ್ಡ ಉದ್ಯಮಿಗಳು, ಬಾಲಿವುಡ್ ಸ್ಟಾರ್ ನಟರ ಮಕ್ಕಳನ್ನು ನೋಡಿಕೊಳ್ಳುವ ನ್ಯಾನಿಗಳನ್ನು ಸರಬರಾಜು ಮಾಡುವ ಕೆಲವು ಸಂಸ್ಥೆಗಳು ಮುಂಬೈನಲ್ಲಿವೆ. ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿಯುಳ್ಳ ಅನುಭವಿ ಮಹಿಳೆಯರನ್ನು ಹಲವು ರೀತಿಯ ಪರೀಕ್ಷೆಗಳಿಗೆ ಒಳಪಡಿಸಿ, ಅವರ ಹಿನ್ನೆಲೆಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ಮಾಡಿ ನ್ಯಾನಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ಈಗ ರಾಮ್ ಚರಣ್-ಉಪಾಸನಾ ಅವರ ಮಗಳನ್ನು ನೋಡಿಕೊಳ್ಳುತ್ತಿರುವ ಸಾವಿತ್ರಿ ಈ ಹಿಂದೆ ಶಾಹಿದ್ ಕಪೂರ್ ಅವರ ಮನೆಯಲ್ಲಿಯೂ ಕೆಲಸ ಮಾಡಿದ್ದರು. ಮುಂಬೈನ ಹಲವು ದೊಡ್ಡ ಉದ್ಯಮಿಗಳ ಮನೆಯಲ್ಲಿಯೂ ಕೆಲಸ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ