ವಿಡಿಯೋ: ಒಳ್ಳೆ ಪತಿ ಎನಿಸಿಕೊಂಡಿದ್ದ ರಾಮ್ ಚರಣ್ ಈಗ ಒಳ್ಳೆ ಮಗ ಎನಿಸಿಕೊಂಡಿದ್ದಾರೆ

|

Updated on: Mar 09, 2024 | 6:31 PM

Ram Charan: ಕೆಲವು ದಿನಗಳ ಹಿಂದಷ್ಟೆ ರಾಮ್ ಚರಣ್​ರ ವಿಡಿಯೋ ಒಂದು ವೈರಲ್ ಆಗಿ ರಾಮ್ ಬಹಳ ಒಳ್ಳೆಯ ಪತಿ ಎನಿಸಿಕೊಂಡಿದ್ದರು. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಒಳ್ಳೆ ಮಗ ಎನಿಸಿಕೊಂಡಿದ್ದಾರೆ.

ವಿಡಿಯೋ: ಒಳ್ಳೆ ಪತಿ ಎನಿಸಿಕೊಂಡಿದ್ದ ರಾಮ್ ಚರಣ್ ಈಗ ಒಳ್ಳೆ ಮಗ ಎನಿಸಿಕೊಂಡಿದ್ದಾರೆ
Follow us on

ನಟ ರಾಮ್ ಚರಣ್ (Ram Charan) ‘ಆರ್​ಆರ್​ಆರ್’ ಸಿನಿಮಾದ ಬಳಿಕ ಪ್ಯಾನ್ ವರ್ಲ್ಡ್ ನಟರಾಗಿದ್ದಾರೆ. ತಮಿಳು, ಹಿಂದಿ ಸಿನಿಮಾಗಳಿಂದಲೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ವಿಶ್ವಮಟ್ಟದಲ್ಲಿ ಅಭಿಮಾನಿ ಬಳಗವನ್ನು ರಾಮ್ ಚರಣ್ ಸಂಪಾದಿಸಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಸಹ ರಾಮ್ ಚರಣ್ ಪಕ್ಕಾ ಫ್ಯಾಮಿಲಿ ಮನುಷ್ಯ. ಪತ್ನಿಗೆ ಪ್ರೀತಿಯ ಗಂಡನಾಗಿ, ಅಪ್ಪ-ಅಮ್ಮನಿಗೆ ಒಳ್ಳೆಯ ಮಗನಾಗಿ ಇದ್ದಾರೆ. ಇತ್ತೀಚೆಗಷ್ಟೆ ರಾಮ್ ಚರಣ್, ತಮ್ಮ ಪತ್ನಿ ಉಪಾಸನಾರ ಕಾಲು ಒತ್ತುತ್ತಿರುವ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ನೋಡಿದ ಹಲವರು ರಾಮ್ ಚರಣ್​ರ ಸರಳತೆಗೆ, ಪತ್ನಿಯ ಮೇಲಿರುವ ಅವರ ಪ್ರೀತಿಗೆ ಶರಣು ಎಂದಿದ್ದರು. ಅದ್ಭುತವಾದ ಪತಿ ಎಂದು ರಾಮ್ ಚರಣ್ ಅನ್ನು ಕರೆದಿದ್ದರು. ಇದೀಗ ರಾಮ್ ಚರಣ್ ಅವರ ಇನ್ನೊಂದು ವಿಡಿಯೋ ಹೊರಬಂದಿದ್ದು, ಈಗ ಅದ್ಭುತವಾದ ಮಗ ಎನಿಸಿಕೊಳ್ಳುತ್ತಿದ್ದಾರೆ.

ರಾಮ್ ಚರಣ್ ಹಾಗೂ ಉಪಾಸನಾ ಕೋನಿಡೇಲ ಇತ್ತೀಚೆಗಷ್ಟೆ ಖಾಸಗಿ ವಿಮಾನದಲ್ಲಿ ಅಂಬಾನಿ ಪುತ್ರನ ಮದುವೆಗೆ ಹೋಗಿದ್ದರು. ಆ ವೇಳೆ ಉಪಾಸನಾರ ಕಾಲನ್ನು ರಾಮ್ ಚರಣ್ ಒತ್ತಿದ್ದರು. ರಾಮ್ ಚರಣ್, ಪತ್ನಿಯ ಕಾಲು ಒತ್ತುತ್ತಿರುವ ವಿಡಿಯೋವನ್ನು ಯಾರೋ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.

ಈಗ ರಾಮ್ ಚರಣ್ ತಮ್ಮ ತಾಯಿ ಸುರೇಖಾ ಅವರಿಗಾಗಿ ತಾವೇ ಅಡುಗೆ ಮಾಡಿ ತಿನ್ನಿಸಿದ್ದಾರೆ. ರಾಮ್ ಚರಣ್, ತಮ್ಮ ತಾಯಿಗಾಗಿ ಅಡುವೆ ಮಾಡುತ್ತಿರುವ ವಿಡಿಯೋವನ್ನು ಪತ್ನಿ ಉಪಾಸನಾ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುರೇಖಾ ಅವರಿಗಾಗಿ ರಾಮ್ ಚರಣ್ ಪನ್ನೀರ್ ಟಿಕ್ಕಾ ಮಾಡಿದ್ದಾರೆ. ಅಮ್ಮ ಸುರೇಖಾ, ಮಗ ತಮಗಾಗಿ ಅಡುಗೆ ಮಾಡುತ್ತಿರುವುದನ್ನು ಪಕ್ಕದಲ್ಲೇ ನಿಂತು ನೋಡಿ ಖುಷಿ ಪಟ್ಟಿದ್ದಾರೆ. ಮಹಿಳಾ ದಿನಾಚರಣೆ ವಿಶೇಷಕ್ಕೆಂದು ರಾಮ್ ಚರಣ್, ತಾಯಿಗಾಗಿ ಅಡುಗೆ ಮಾಡಿ ಉಣಬಡಿಸಿದ್ದಾರೆ. ಉಪಾಸನಾ ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ‘ಮಹಿಳಾ ದಿನದ ವಿಶೇಷ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್​ಗೆ ‘ಇಡ್ಲಿ ವಡಾ’ ಎಂದು ಸಂಬೋಧಿಸಿದ ಶಾರುಖ್; ಹೇಳಿಕೆಗೆ ಆಪ್ತ ವಲಯದಿಂದಲೇ ಟೀಕೆ

ರಾಮ್ ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಅವರಿಗೂ ಅಡುಗೆ ಮಾಡುವುದೆಂದರೆ ಬಲು ಇಷ್ಟ. ಎಲ್ಲರೂ ಬಿಡುವಾಗಿದ್ದಾಗ ಕುಟುಂಬದವರೆನ್ನೆಲ್ಲ ಕರೆಸಿ ಎಲ್ಲರಿಗೂ ತಾವೇ ಅಡುಗೆ ಮಾಡಿಕೊಡುತ್ತಾರಂತೆ ಚಿರಂಜೀವಿ. ತಮ್ಮ ಗೆಳೆಯರನ್ನು ಮನೆಗೆ ಆಹ್ವಾನಿಸಿ ಅವರಿಗಾಗಿ ಅಡುಗೆ ಮಾಡಿ ಕೊಡುತ್ತಾರೆ. ಕೆಲವು ತಿಂಗಳ ಹಿಂದೆ ಗೆಳೆಯ ಅಕ್ಕಿನೇನಿ ನಾಗಾರ್ಜುನ ಅವರನ್ನು ಮನೆಗೆ ಆಹ್ವಾನಿಸಿ ಇಬ್ಬರೂ ಸೇರಿ ಚಿಕನ್ ರೆಸಿಪಿಯೊಂದನ್ನು ಮಾಡಿದ್ದರು. ಅಪ್ಪನ ಹವ್ಯಾಸವೇ ಮಗನಿಗೂ ಬಂದಿದೆ.

ರಾಮ್ ಚರಣ್ ಪ್ರಸ್ತುತ, ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಬುಚ್ಚಿಬಾಬು ಸನಾ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ನಟಿಸಲಿದ್ದು, ಈ ಸಿನಿಮಾದಲ್ಲಿ ರಾಮ್ ಚರಣ್ ಜೊತೆ ಶಿವರಾಜ್ ಕುಮಾರ್ ಸಹ ಇರಲಿದ್ದಾರೆ. ನಟಿ ಜಾನ್ಹವಿ ಕಪೂರ್ ಈ ಸಿನಿಮಾದ ನಾಯಕಿ. ‘ಗೇಮ್ ಚೇಂಜರ್’ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Sat, 9 March 24