2000 ಕೋಟಿ ರೂ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ ಮಾಡಿದ್ದ ಸಿನಿಮಾ ನಿರ್ಮಾಪಕನ ಬಂಧನ
Jaffer Sadiq: ಅಂತರಾಷ್ಟ್ರೀಯ ಡ್ರಗ್ ಮಾಫಿಯಾದ ‘ಮಾಸ್ಟರ್ ಮೈಂಡ್’, ಸಿನಿಮಾ ನಿರ್ಮಾಪಕ, ರಾಜಕಾರಣಿ ಜಫರ್ ಸಾದಿಖ್ನನ್ನು ಎನ್ಸಿಬಿ ಬಂಧಿಸಿದೆ.
ಎರಡು ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುವನ್ನು (Drugs) ಕಳ್ಳಸಾಗಣೆ ಮಾಡಿದ್ದ ಸಿನಿಮಾ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳಿನಲ್ಲಿ ಕೆಲ ಸಿನಿಮಾಗಳ ನಿರ್ಮಾಣ ಮಾಡಿದ್ದ, ಸಕ್ರಿಯ ರಾಜಕೀಯದಲ್ಲಿಯೂ ತೊಡಗಿಕೊಂಡಿದ್ದ ಜಫರ್ ಸಾದಿಖ್ ನನ್ನು ಎನ್ಸಿಬಿಯು ಬಂಧಿಸಿದೆ. ಜಫರ್ ಸಾದಿಖ್ ಅಂತರಾಷ್ಟ್ರೀಯ ಡ್ರಗ್ ಮಾಫಿಯಾದ ‘ಮಾಸ್ಟರ್ ಮೈಂಡ್’ ಆಗಿದ್ದಾನೆಂದು ಎನ್ಸಿಬಿ ಆರೋಪ ಮಾಡಿದೆ. ಈತನಿಗಾಗಿ ಕಳೆದ ಎರಡು ವಾರಗಳಿಂದಲೂ ಹುಡುಕಾಟ ನಡೆಸಲಾಗಿತ್ತು, ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ಆರಂಭಿಸಲಾಗಿದೆ.
ಬಂಧಿತ ಜಫರ್ ಸಾದಿಖ್ ಡಿಎಂಕೆಯ ಸದಸ್ಯನಾಗಿದ್ದ, ಆದರೆ ಡ್ರಗ್ಸ್ ಪ್ರಕರಣದಲ್ಲಿ ಈತನ ಮೇಲೆ ಆರೋಪ ಬಂದ ಬಳಿಕ ಕಳೆದ ತಿಂಗಳು ಜಫರ್ನನ್ನು ಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಜಫರ್ ಸಾದಿಖ್, ಸಿನಿಮಾ ನಿರ್ಮಾಪಕ ಸಹ ಆಗಿದ್ದು ಜೆಎಸ್ಎಂ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ತಮಿಳಿನ ‘ಇರೈವನ್ ಮಿಗ ಪೆರಿಯವನ್’, ‘ಮಾಯವಲೈ’, ‘ಮಂಗೈ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾನೆ. ಇದೀಗ ವಸಂತ್ ರವಿ ನಟನೆಯ ಹೊಸ ಸಿನಿಮಾದ ನಿರ್ಮಾಣವನ್ನೂ ಮಾಡಿ ಮುಗಿಸಿದ್ದು ಆ ಸಿನಿಮಾ ಬಿಡುಗಡೆ ಆಗಬೇಕಿದೆಯಷ್ಟೆ. ಅಷ್ಟರಲ್ಲಿಯೇ ಈತನ ಡ್ರಗ್ಸ್ ಪ್ರಕರಣ ಹೊರಬಂದು ಇದೀಗ ಬಂಧನವಾಗಿದೆ.
ಜಫರ್ ಸಾದಿಖ್, ಅಂತರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಕಿಂಗ್ಪಿನ್ ಎಂದು ಎನ್ಸಿಬಿ ಆರೋಪಿಸಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ ಇನ್ನೂ ಕೆಲವು ದೇಶಗಳಿಗೆ ಈತ ಡ್ರಗ್ಸ್ ಸಾಗಣೆ, ವಿತರಣೆ ಮಾಡುತ್ತಿದ್ದನಂತೆ. ಭಾರಿ ದೊಡ್ಡ ಡ್ರಗ್ಸ್ ನೆಟ್ವರ್ಕ್ ಹುಟ್ಟುಹಾಕಿದ್ದ ಈ ವ್ಯಕ್ತಿ ಅತ್ಯಂತ ಜಾಣತನದಿಂದ ಡ್ರಗ್ಸ್ ವಿಲೇವಾರಿ ಮಾಡುತ್ತಿದ್ದ. ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ-ದೊಡ್ಡ ಮಾಫಿಯಾ ಡಾನ್ಗಳನ್ನು ಸಾಕಿಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಡ್ರಗ್ಸ್ ಪ್ರಕರಣದಲ್ಲಿ ಟಾಲಿವುಡ್ ಸ್ಟಾರ್ ನಿರ್ದೇಶಕ, ನಟಿ
ಅಪಾಯಕಾರಿ ಮಾದಕ ವಸ್ತುಗಳಾದ ಕ್ರಿಸ್ಟಲ್ ಮೆತ್, ಮೆತಾಮೆಫೈಟ್ ತಯಾರಿಕೆಗೆ ಅಗತ್ಯವಾದ ನಿಷೇಧಿತ ಸ್ಯೂಡೋಫೆಡ್ರಿನ್ ಅನ್ನು ಈ ವ್ಯಕ್ತಿ ಆಸ್ಟ್ರೇಲಿಯಾ ದೇಶಕ್ಕೆ ಕಳಿಸಿದ್ದ. ಒಣಗಿದ ತೆಂಗಿನ ಕಾಯಿ, ಡ್ರೈ ಫ್ರೂಟ್ಸ್ ಪ್ಯಾಕೆಟ್ಗಳನ್ನು ಬಳಸಿ ಬರೋಬ್ಬರಿ 3500 ಕೆಜಿ ಸ್ಯೂಡೋಫೆಡ್ರಿನ್ ಅನ್ನು ಆಸ್ಟ್ರೇಲಿಯಾಕ್ಕೆ ಕಳಿಸಿದ್ದನೆಂತು ಎನ್ಸಿಬಿ ಹೇಳಿದೆ. ಕೆಲವು ದಿನಗಳ ಹಿಂದೆಯಷ್ಟೆ ಮಧುರೈನಲ್ಲಿ ಇಬ್ಬರು ರೈಲು ಪ್ರಯಾಣಿಕರನ್ನು ಬಂಧಿಸಿ ಅವರಿಂದ ದೊಡ್ಡ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು, ಅವರ ವಿಚಾರಣೆ ನಡೆಸಿದ ಬಳಿಕ ಚೆನ್ನೈನ ಡಂಪ್ ಯಾರ್ಡ್ ಒಂದರಲ್ಲಿ ಶೇಖರಿಸಲಾಗಿದ್ದ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಒಟ್ಟು ಸುಮಾರು 36 ಕೆಜಿ ಅಪಾಯಕಾರಿ ಮಾದಕ ವಸ್ತುವನ್ನು ಎನ್ಸಿಬಿ ವಶಪಡಿಸಿಕೊಂಡಿದ್ದರು. ಈ ಮಾದಕ ವಸ್ತುವನ್ನು ಶ್ರೀಲಂಕಾಕ್ಕೆ ಸಾಗಿಸಲು ಶೇಖರಿಸಲಾಗಿತ್ತಂತೆ. ಇದೆಲ್ಲವೂ ಈಗ ಬಂಧಿಸಲಾಗಿರುವ ಜಫರ್ ಸಾದಿಖ್ ಗೆ ಸೇರಿದ್ದಾಗಿದೆ ಎಂದು ಎನ್ಸಿಬಿ ಆರೋಪಿಸಿದೆ.
ಕಳೆದ ಎರಡು ವಾರಗಳಿಂದಲೂ ಜಫರ್ ಸಾದಿಖ್ ಅನ್ನು ಬಂಧಿಸುವ ಪ್ರಯತ್ನದಲ್ಲಿ ಎನ್ಸಿಬಿ ಇತ್ತು. ಜಫರ್ ಸಾದಿಖ್ ಕಳೆದ ಎರಡು ವಾರಗಳಿಂದಲೂ ದೇಶದ ವಿವಿದ ರಾಜ್ಯಗಳಿಗೆ ಸುತ್ತಾಡಿ ಎನ್ಸಿಬಿಯ ದಿಕ್ಕು ತಪ್ಪಿಸುತ್ತಲೇ ಇದ್ದ. ಕೊನೆಗೆ ಮಾರ್ಚ್ 8 ರಂದು ಈತನ ಬಂಧನವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ