AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್ ಪ್ರಕರಣದಲ್ಲಿ ಟಾಲಿವುಡ್ ಸ್ಟಾರ್ ನಿರ್ದೇಶಕ, ನಟಿ

Tollywood Drug case: ತೆಲುಗು ಚಿತ್ರರಂಗದ ಕೆಲ ಪ್ರಮುಖರ ಹೆಸರು ಮತ್ತೊಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿದೆ. ಈ ಬಾರಿ ಸ್ಟಾರ್ ನಿರ್ದೇಶಕ ಕ್ರಿಶ್ ಆರೋಪಿಯಾಗಿದ್ದಾರೆ. ಒಬ್ಬ ನಟಿ, ನಿರ್ಮಾಪಕ, ಬಿಜೆಪಿ ಮುಖಂಡನ ಪುತ್ರನ ಹೆಸರು ಎಫ್​ಐಆರ್​ನಲ್ಲಿವೆ.

ಡ್ರಗ್ಸ್ ಪ್ರಕರಣದಲ್ಲಿ ಟಾಲಿವುಡ್ ಸ್ಟಾರ್ ನಿರ್ದೇಶಕ, ನಟಿ
ಮಂಜುನಾಥ ಸಿ.
|

Updated on: Feb 27, 2024 | 9:36 PM

Share

ನೆರೆಯ ತೆಲುಗು ಚಿತ್ರರಂಗ (Tollywood) ತನ್ನ ಸೂಪರ್ ಹಿಟ್ ಸಿನಿಮಾಗಳ ಜೊತೆಗೆ ಡ್ರಗ್ಸ್ ಪ್ರಕರಣದಿಂದಲೂ ಆಗಾಗ್ಗೆ ಸುದ್ದಿ ಆಗುತ್ತಲೇ ಇದೆ. ಡ್ರಗ್ಸ್ ಪ್ರಕರಣದಲ್ಲಿ ಆಗಾಗ್ಗೆ ಟಾಲಿವುಡ್ ನಟ-ನಟಿಯರ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಇಂಥಹುದೇ ಪ್ರಕರಣದಲ್ಲಿ ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕ ಕ್ರಿಶ್ ಹೆಸರು ಕೇಳಿ ಬಂದಿದ್ದು, ಕ್ರಿಶ್ ವಿರುದ್ಧ ಎಫ್​ಐಆರ್ ಸಹ ದಾಖಲಾಗಿದೆ. ಇದೇ ಪ್ರಕರಣದಲ್ಲಿ ನಟಿ, ಆಕೆಯ ಸಹೋದರಿ, ನಿರ್ಮಾಪಕರೊಬ್ಬರು ಹಾಗೂ ಬಿಜೆಪಿ ಮುಖಂಡನ ಪುತ್ರನ ಹೆಸರು ಸಹ ಕೇಳಿ ಬಂದಿದೆ.

ಇತ್ತೀಚೆಗಷ್ಟೆ ಗಚ್ಚಿಬೌಲಿಯ ರ್ಯಾಡಿಸನ್ ಬ್ಲೂ ಹೋಟೆಲ್ ಮೇಲೆ ಹೈದರಾಬಾದ್ ಪೊಲೀಸರ ಮಾದಕ ವಸ್ತು ವಿರೋಧಿ ದಳದ ಸಿಬ್ಬಂದಿ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಮಾದಕ ವಸ್ತು ಪೂರೈಕೆದಾರ ಅಬ್ಬಾಸ್ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ ಚಿತ್ರರಂಗ ಹಾಗೂ ರಾಜಕೀಯ ರಂಗದ ಕೆಲವು ಪ್ರಮುಖ ವ್ಯಕ್ತಿಗಳ ಹೆಸರು ಬೆಳಕಿಗೆ ಬಂದಿದ್ದು ಅಬ್ಬಾಸ್ ಹೇಳಿಕೆ ಆಧಾರದ ಮೇಲೆ 9 ಮಂದಿ ವಿವಿಐಪಿಗಳ ಮೇಲೆ ಸಹ ಎಫ್​ಐಆರ್ ದಾಖಲಾಗಿದ್ದು ಅದರಲ್ಲಿ ನಿರ್ದೇಶಕ ಕ್ರಿಶ್ ಹೆಸರು ಸಹ ಇದೆ.

ರ್ಯಾಡಿಸನ್ ಬ್ಲೂ ಹೋಟೆಲ್​ನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ನಟಿ ಲಿಶಿ ಗಣೇಶ್, ಆಕೆಯ ಸಹೋದರಿ, ನಿರ್ಮಾಪಕ ಕೇದಾರ್ ಸೆಲಗಮಶೆಟ್ಟಿ, ಬಿಜೆಪಿ ಮುಖಂಡ ಯೋಗಾನಂದ್ ಪುತ್ರ ಗಜ್ಜಲ ವಿವೇಕಾನಂದ ಅವರುಗಳು ಸಹ ಪಾರ್ಟಿಯಲ್ಲಿದ್ದು ಇವರು ಡ್ರಗ್ಸ್ ಸೇವಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕ್ರಿಶ್ ಸಹ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದು ರೇಡ್ ನಡೆಯುವ ಕೆಲ ಹೊತ್ತಿನ ಮುಂಚೆಯಷ್ಟೆ ಕ್ರಿಶ್ ಸ್ಥಳದಿಂದ ತೆರಳಿದ್ದರು ಎನ್ನಲಾಗಿದ್ದು, ಕ್ರಿಶ್ ಅಲ್ಲಿ ಹಾಜರಿದ್ದರು ಎಂಬುದು ಹೋಟೆಲ್​ನ ಸಿಸಿಟಿವಿ ದೃಶ್ಯಗಳ ಮೂಲಕ ತಿಳಿದು ಬಂದಿದೆ ಎಂದಿದ್ದಾರೆ ಪೊಲೀಸರು.

ಇದನ್ನೂ ಓದಿ:ತೆಲುಗು ಚಿತ್ರರಂಗದಲ್ಲಿ ಅತಿಯಾದ ಡ್ರಗ್ಸ್ ಬಳಕೆಯಿದೆ: ಪೊಲೀಸ್ ಆಯುಕ್ತ

ಈ ಬಗ್ಗೆ ಕ್ರಿಶ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ‘ತಾನು ಡ್ರಗ್ ರೇಡ್ ನಡೆದ ರ್ಯಾಡಿಸನ್ ಬ್ಲೂ ಹೋಟೆಲ್​ನಲ್ಲಿ ಹಾಜರಿದ್ದಿದ್ದು ನಿಜವಾದರೂ ತಾನು ಗೆಳೆಯರೊಬ್ಬರ ಭೇಟಿಗೆ ಹೋಗಿದ್ದೆನಷ್ಟೆ. ಯಾವುದೇ ಮಾದಕ ವಸ್ತುವನ್ನು ನಾನು ಸೇವಿಸಿಲ್ಲ. ನನ್ನ ವಿರುದ್ಧ ಯಾರೋ ಷಡ್ಯಂತ್ರ ನಡೆಸಿದ್ದಾರೆ’ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಡ್ಲರ್ ಅಬ್ಬಾಸ್ ಸೇರಿದಂತೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಕ್ರಿಶ್ ಸಹ ಒಬ್ಬರು. ಸೂಪರ್ ಹಿಟ್ ತೆಲುಗು ಸಿನಿಮಾಗಳಾದ ‘ಗಮ್ಯಂ’, ‘ವೇದಂ’, ‘ಗಬ್ಬರ್ ಇಸ್ ಬ್ಯಾಕ್’, ‘ಕಂಚೆ’, ‘ಕೃಷ್ಣಂ ವಂದೇ ಜಗದ್ಗುರು’, ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದ ‘ಗೌತಮಿ ಪುತ್ರ ಶಾತಕರ್ಣಿ’, ‘ಎನ್​ಟಿಆರ್’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಪವನ್ ಕಲ್ಯಾಣ್ ನಟಿಸುತ್ತಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ